ಶ್ರೀ ವಾಸವಿದೇವಿಯ ನಿಜಪಾದ ಹೊತ್ತ ಸುವರ್ಣ ರಥವು ಡಿಸೆಂಬರ್ ೧೪ ರ ಭಾನುವಾರ ಸಂಜೆ ಹುಳಿಯಾರಿಗೆ ಆಗಮಿಸಲಿದೆ ಹಾಗೂ ಸೋಮವಾರ ಬೆಳಿಗ್ಗೆ ಪಾದುಕೆಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜ್ ತಿಳಿಸಿದ್ದಾರೆ.
ಹುಳಿಯಾರಿಗೆ ಆಗಮಿಸುತ್ತಿರುವ ವಾಸವಿಮಾತೆಯ ನಿಜಪಾದ. |
ಅಖಿಲ ಭಾರತ್ ಶ್ರೀವಾಸವಿ ಪೆನುಗೊಂಡ ಟ್ರಸ್ಟ್ ಮತ್ತು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಸುಮಾರು ೧೨೦ ದಿನಗಳ ಕಾಲ ಶ್ರೀವಾಸವಿ ನಿಜಪಾದಯಾತ್ರೆಯು ಕರ್ನಾಟಕದಾದ್ಯಂತ ಸಂಚರಿಸಲಿದ್ದು, ಭಾನುವಾರ ಸಂಜೆ ೫ ಗಂಟೆಗೆ ಹುಳಿಯಾರು ತಲುಪಲಿದೆ ಎಂದರು.
ಆರ್ಯವೈಶ್ಯರ ಪುಣ್ಯ ಕ್ಷೇತ್ರ ಹಾಗೂ ವಾಸವಿ ಮಾತೆಯ ಜನ್ಮ ಸ್ಥಳವೂ ಆಗಿರುವ ಆಂಧ್ರಪ್ರದೇಶದ ಗೋದಾವರಿ ಜೆಲ್ಲೆಯ ಪೆನುಗೊಂಡ ಕ್ಷೇತ್ರದಲ್ಲಿ ೧೪೫ ಅಡಿ ಎತ್ತರದ ಭವ್ಯವಾದ ವಾಸವಿ ಋಷಿಗೋತ್ರ ಸುವರ್ಣ ಮಂದಿರ ನಿರ್ಮಾಣವಾಗುತ್ತಿದ್ದು, ಆ ಮಂದಿರದಲ್ಲಿ ೯೦ ಅಡಿ ಎತ್ತರದ ಸುಮಾರು ೪೫ ಟನ್ ತೂಕದ ವಾಸವಿ ಮಾತೆಯ ಪಂಚಲೋಹ ವಿಗ್ರಹ ಪ್ರತಿಷ್ಠಾಪಿಸಲಾಗುವುದು. ವಿಶ್ವದ ಅತ್ಯಂತ ಎತ್ತರದ ಪಂಚಲೋಹದ ವಿಗ್ರಹವಾಗಿರುವ ಇದನ್ನು ಪ್ರತಿಷ್ಠಾಪನೆಗೂ ಮುನ್ನಾ ಆರ್ಯವೈಶ್ಯ ಸಮುದಾಯದವರಿಗೆ ವಾಸವಿಮಾತೆಯ ಪಾದುಕೆಗಳ ದರ್ಶನ ಮಾಡಿಸುವ ಅಂಗವಾಗಿ ಈ ನಿಜಪಾದುಕೆಗಳ ಯಾತ್ರೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಹುಳಿಯಾರಿಗೆ ಭಾನುವಾರ ಸಂಜೆ ಆಗಮಿಸುವ ಈ ಪಾದುಕೆಗಳನ್ನು ಪಟ್ಟಣದ ಎಪಿಎಂಸಿಯಿಂದ ಸ್ವಾಗತಿಸಿ ಪಂಚಮುತ್ತೈದೆಯರಿಂದ ಪಂಚಕಳಸದೊಂದಿಗೆ ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ಕರೆದೊಯ್ದು ವಿಶೇಷ ಪೂಜೆ ನಡೆಸಲಾಗುತ್ತದೆ. ತಾ.೧೫ರ ಸೋಮವಾರ ಬೆಳಿಗ್ಗೆ ಕನ್ನಿಕಾಪರಮೇಶ್ವರಿ ಅಮ್ಮನವರೊಂದಿಗೆ ನಿಜಪಾದುಕೆಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದು ಮಧ್ಯಾಹ್ನದ ಪೂಜೆ ಬಳಿಕ ರಥಯಾತ್ರೆ ಪಟ್ಟಣದಿಂದ ನಿರ್ಗಮನವಾಗಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಪರೂಪದ ಪಾದುಕೆಗಳ ದರ್ಶನ ಪಡೆಯುವಂತೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ಆರ್.ನಟರಾಜ್ ಗುಪ್ತ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ