ಹುಳಿಯಾರು ಪಟ್ಟಣದ ವಿವಿಧ ದೇವಾಲಯಗಳಲ್ಲಿ ಜನವರಿ ೧ ರ ಗುರುವಾರದಂದು ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ,ಅಲಂಕಾರ ಹಾಗೂ ಸಪ್ತದ್ವಾರ ವೈಕುಂಠ ದರ್ಶನ ಕಾರ್ಯ ವಿಜೃಂಭಣೆಯಿಂದ ನಡೆಯಲಿದೆ.
ಇತಿಹಾಸ ಪ್ರಸಿದ್ದ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಸೇವಾಸಮಿತಿವತಿಯಿಂದ ಆಚರಣೆ ನಡೆಯಲಿದ್ದು, ಮುಂಜಾನೆ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ, ನೈವೇದ್ಯ ನಡೆಯಲಿದೆ. ಗ್ರಾಮದೇವತೆ ಹುಳಿಯಾರಮ್ಮ , ದುರ್ಗಮ್ಮ ಹಾಗೂ ಆಂಜನೇಯಸ್ವಾಮಿ ಆಗಮನದೊಂದಿಗೆ ಮಹಾವಿಷ್ಟು-ಮಹಾಲಕ್ಷ್ಮಿ ಹೋಮ ನಡೆದು ನಂತರ ಮಧ್ಯಾಹ್ನದ ವೇಳೆಗೆ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ಸಂಜೆಯಿಂದ ಸ್ವಾಮಿಯ ಸಪ್ತದ್ವಾರ ವೈಕುಂಠ ದರ್ಶನ ನಡೆಯಲಿದೆ. ಪಟ್ಟಣದ ವಿವಿಧ ಭಜನಾ ಮಂಡಳಿಯವರು ಭಜನಾ ಕಾರ್ಯ ನಡೆಸಿಕೊಡಲಿದ್ದಾರೆ.
ಗಾಂಧಿಪೇಟೆಯ ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಸಮುದಾಯದವರಿಂದ ವೈಕುಂಠಏಕಾದಶಿ ಆಚರಣೆ ನಡೆಯಲಿದ್ದು ಕನ್ನಿಕಾಪರಮೇಶ್ವರಿ ದೇವಿ ಹಾಗೂ ಶ್ರೀರಾಮಚಂದ್ರಸ್ವಾಮಿಗೆ ವೈಕುಂಠನಾರಾಯಣನ ವಿಶೇಷ ಅಲಂಕಾರ ಸೇರಿದಂತೆ ಇನ್ನಿತರ ಪೂಜಾಕೈಂಕರ್ಯಗಳು ನಡೆಯಲಿದೆ ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ್ ತಿಳಿಸಿದ್ದಾರೆ.
ಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿಯವರು ವೈಕುಂಠ ಏಕಾದಶಿ ಹಮ್ಮಿಕೊಂಡಿದ್ದು ಅಂದು ಬನಶಂಕರಿ ಅಮ್ಮನವರಿಗೆ ಅಭಿಷೇಕ,ಅರ್ಚನೆ , ಬಾಲಾಜಿಯ ಅಲಂಕಾರ ಹಾಗೂ ವಿವಿಧ ಪೂಜೆಗಳನ್ನು ನಡೆದರೆ, ವಸಂತನಗರದ ಕಾಳಿಕಾಂಭ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ಏಕಾದಶಿ ಅಂಗವಾಗಿ ಅಲಂಕಾರ ಹಾಗೂ ಪೂಜಾಕೈಂಕರ್ಯಗಳು ನಡೆಯಲಿವೆ.
ಎಲ್ಲಾ ದೇವಾಲಯಗಳಲ್ಲೂ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಮಾಡಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ