ಕರ್ನಾಟಕದಲ್ಲಿ ಶ್ರೀಮಂತ ಭಾಷೆಯಾಗಿರುವ ಕನ್ನಡ ಇತರೆ ಭಾಷೆಗಳ ಹಾವಳಿ ಹಾಗೂ ನಮ್ಮ ಭಾಷೆಯ ಮೇಲೆ ಕನ್ನಡಿಗರ ನಿರಾಸಕ್ತಿಯಿಂದ ಕನ್ನಡದ ಬಳಕೆ ಕ್ಷೀಣಿಸುತ್ತಿದ್ದು ಕನ್ನಡ ನಾಡುನುಡಿಯನ್ನು ಕಟ್ಟಿಬೆಳೆಸಬೇಕಾಗಿದ್ದು ಅದು ಇಂದಿನ ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಬಿಎಂಎಸ್ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿಗಳಾದ ಬಿಳಿಗೆರೆ ಕೃಷ್ಣಮೂರ್ತಿಯವರು ತಿಳಿಸಿದರು.
ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನಲ್ಲಿ ಹೋಬಳಿ ಕಸಾಪ ವತಿಯಿಂದ ಆಯೋಜಿಸಿದ್ದ ಕನ್ನಡನುಡಿಹಬ್ಬದಲ್ಲಿ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಉಪನ್ಯಾಸ ನೀಡಿದರು. |
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸ್ಮರಣೆ ಅಂಗವಾಗಿ ಹುಳಿಯಾರು ಹೋಬಳಿ ಕಸಾಪ ವತಿಯಿಂದ ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ ಕನ್ನಡನಾಡು ಕುರಿತು ಉಪನ್ಯಾಸ ನೀಡಿದರು.
ಪ್ರಸ್ತುತದಲ್ಲಿ ಕನ್ನಡವನ್ನು ಉಳಿಸಿ ಎಂದು ಹೇಳುತ್ತಾ ಹಲವಾರು ಸಂಘಟನೆಗಳನ್ನು ಕಟ್ಟಿಕೊಂಡಿರುವ ಪ್ರಮುಖರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸದೆ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ವಿಷಾದಿಸಿದರು. ಕನ್ನಡದ ರಕ್ಷಣೆ ಎಂದರೆ ಕನ್ನಡ ಭಾಷೆಯ ರಕ್ಷಣೆ ಮಾತ್ರವಲ್ಲ ಅದು ಕರ್ನಾಟಕದ ನೆಲ,ಜಲ,ಮರ ಎಲ್ಲವನ್ನು ರಕ್ಷಿಸುವುದಾಗಬೇಕು ಎಂದರು. ಕನ್ನಡಸಾಹಿತ್ಯಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದರೂ ಸಹ ಅದನ್ನು ಹೇಳಿಕೆಗೆ ಮಾತ್ರ ಬಳಸುತ್ತಿದ್ದಾರೆಯೇ ಹೊರತು ಅದರ ಆಚರಣೆ ನಡೆಯುತ್ತಿಲ್ಲ. ಉನ್ನತ ವ್ಯಾಸಂಗ ಮಾಡುತ್ತಾ ಹೋದರೆ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲಭಾಷೆಯೇ ತುಂಬಿಕೊಂಡಿದೆ ಎಂದರು. ಕನ್ನಡ ಭಾಷೆಯನ್ನು ಉಳಿಸಬೇಕೆಂದರೆ ನಮಗೆ ಇತರ ಭಾಷೆಯ ಅವಶ್ಯಕತೆ ಇದೆ , ಆದರೆ ಅದನ್ನೇ ನಮ್ಮ ಭಾಷೆಯನ್ನಾಗಿ ಮಾಡಿಕೊಂಡು ನಡೆಯಬಾರದು ಎಂದು ಕಿವಿಮಾತು ಹೇಳಿದರು. ಶೈಕ್ಷಣಿಕ,ರಾಜಕಿಯ,ಆರ್ಥಿಕ ರಂಗದಲ್ಲಿ ಹೆಚ್ಚಿನ ಬದಲಾವಣೆಗಳಾಗಬೇಕು ಪ್ರತಿಕ್ಷೇತ್ರದಲ್ಲೂ ಕನ್ನಡ ಭಾಷೆಯ ಬಳಕೆಯಾಗಬೇಕು ಆ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ನಡೆಯಬೇಕು ಎಂದು ತಿಳಿಸಿದರು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು ಹಾಗೂ ಸಾಹಿತಿಗಳಾದ ತ.ಶಿ.ಬಸವಮೂರ್ತಿಯವರು ಗಮಕವಾಚನ ಮಾಡಿದ ನಂತರ ಮಾತನಾಡಿ ಶಿಕ್ಷಕನಾದವನು ತಾನು ಅರಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ನೀಡಿದಾಗ ಮಾತ್ರ ಆತನ ಕಾರ್ಯ ಯಶಸ್ವಿಯಾಗುತ್ತದೆ ಎಂದರು. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದ ಜೊತೆ ತಮ್ಮದೇ ಆದ ಗುರಿಯೊಂದನ್ನು ಹೊಂದಿ ಸಾಗಿದಾಗ ಯಶಸ್ಸು ಸಿಗುತ್ತದೆ ಎಂದರು.
ಚಿಕ್ಕನಾಯಕನಹಳ್ಳಿಯ ನಿವೃತ್ತ ಕನ್ನಡ ಉಪನ್ಯಾಸಕ ಮಾ.ಚಿ.ಕೈಲಾಸನಾಥ್ ಕಾರ್ಯಕ್ರಮ ಉದ್ಘಾಟಿಸಿದರು.ಉಪನ್ಯಾಸಕರಾದ ಶಶಿಭೂಷಣ್, ಶಿವರುದ್ರಯ್ಯ,ಮಂಜುನಾಥ್ ಕಸಾಪದ ಚಂದ್ರಪ್ಪ, ಬಸವರಾಜು, ಸುದರ್ಶನ್, ರಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ವೇಳೆ ೨೦೧೪ನೇ ಸಾಲಿನ ಹತ್ತನೇ ತರಗತಿ ಹಾಗೂ ಪಿಯುಸಿಯ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ