ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಕೆರೆಜಾಗ ಒತ್ತುವರಿ ಮಾಡಿ ಕಳೆದ ಎರಡು ದಶಕಗಳಿಂದ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಅಂಗಡಿಮುಂಗಟ್ಟು ತೆರವಿಗೆ ಬುಧವಾರದವರೆಗೆ ನೀಡಿದ್ದ ಅಂತಿಮ ಗಡುವು ಮುಗಿದಿದ್ದು, ಗಡುವಿನ ಸಮಯದೊಳಗೆ ಕೆಲವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಳ್ಳಲು ಮುಂದಾದರೆ ಮತ್ತೆ ಕೆಲವರು ಸಂಸದರ ಮೂಲಕ ಜಿಲ್ಲಾಧಿಕಾರಿಗಳಿಗೆ ಒತ್ತಡ ತಂದು ಆರು ತಿಂಗಳ ಕಾಲಾವಧಿ ಕೋರಿರುವುದು ಗುರುವಾರ ಕಾರ್ಯಾಚರಣೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಆಸ್ಪದವಾಗಿದೆ.
ಹುಳಿಯಾರು ಬಸ್ ನಿಲ್ದಾಣದ ಕೆಲ ಅಂಗಡಿದಾರರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವು ಮಾಡುತ್ತಿರುವುದು. |
ಅಂಗಡಿ ತೆರವು ರಾಜಕೀಯಗೊಂಡು ಅಧಿಕಾರಿಗಳಿಗೆ ಜಟಿಲ ಸಮಸ್ಯೆಯಾಗಿ ಪರಿಗಣಿಸಿತ್ತು. ತೆರವಿಗೆ ಅನೇಕರ ಆಕ್ಷೇಪ ಸಹ ಕೇಳಿಬಂದಿತ್ತು. ಕಾರ್ಯಾಚರಣೆ ಬಗ್ಗೆ ಕಳೆದೆರಡು ತಿಂಗಳಿಂದ ಚರ್ಚೆ ನಡೆಯುತ್ತಲೇ ಇದ್ದು ಇದರ ತೆರವಿಗೆ ಖುದ್ದು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳೇ ಬಂದು ನಿಲ್ಲಬೇಕು ಎಂಬ ಮಾತು ಸಹ ಕೇಳಿಬಂದಿದ್ದು ಕಾರ್ಯಾಚರಣೆ ಮುಂದೂಡುತ್ತಲೇ ಬರುತ್ತಿತ್ತು. ಇದೀಗ ಸುಪ್ರಿಂ ಕೋರ್ಟ್ ಆದೇಶ ಅಧಿಕಾರಿಗಳಿಗೆ ಆಸ್ತ್ರವಾಗಿ ಬಂದಿದ್ದು ಡಿಸೆಂಬರ್ ೨೪ಕ್ಕೆ ಗಡುವು ವಿಧಿಸಿ ಅಂಗಡಿದಾರರಿಗೆ ೨೪ ಗಂಟೆಯೊಳಗಾಗಿ ಅಂಗಡಿ ತೆರವು ಮಾಡುವಂತೆ,ಇಲ್ಲವಾದರೆ ತಾವೇ ತೆರವುಗೊಳಿಸುವುದಾಗಿ ತಿಳುವಳಿಕೆ ನೋಟೀಸ್ ನೀಡಲಾಗಿತ್ತು.
ತಲ್ಲಣ: ಬಸ್ ನಿಲ್ದಾಣದಲ್ಲಿ ಸುಮಾರು ನೂರಕ್ಕೂ ಮೀರಿ ಅಂಗಡಿಗಳಿದ್ದು ಸದ್ಯ ತೆರವಿನ ಬಗ್ಗೆ ಪಟ್ಟಣದಲ್ಲೆಡೆ ಚರ್ಚೆಯ ವಿಷಯವಾಗಿದೆ. ಅಂಗಡಿ ತೆರವು ಗೊಳಿಸಿದಲ್ಲಿ ಕುಟುಂಬದ ಭವಿಷ್ಯದ ಚಿಂತೆ ಏನೆಂದು ವ್ಯಾಪಾರಸ್ಥರನ್ನು ಹೈರಾಣಾಗಿ ಮಾಡಿದ್ದು, ಅಂಗಡಿಯ ವಸ್ತುಗಳನ್ನೇನು ಮಾಡುವುದೆಂಬ ಚಿಂತೆ ಸಹ ಕಾಡುತ್ತಿದೆ. ಈ ಬಗ್ಗೆ ಕೊನೆಯ ಅಸ್ತ್ರವಾಗಿ ರಾಜಕೀಯ ಒತ್ತಡ ತಂದು ಗಡುವು ವಿಸ್ತರಿಸುವುದಾಗಿ ಕೆಲವರು ಮುಂದಾದರೂ ಸಹ ಮತ್ತೆ ಕೆಲವರು ಇದರ ಉಸಾಬರಿಯೇ ಬೇಡವೆಂದು ಕೆಲವರು ರಾತ್ರೋರಾತ್ರಿ ಅಂಗಡಿ ಸಾಮಾನುಗಳನ್ನು , ಹೆಂಚು,ಶೀಟು ತೆಗೆಯಲು ಮುಂದಾಗಿದ್ದು ತೆರವು ಸನ್ನಿಹಿತ ಎಂಬ ವಾತಾವರಣ ಸೃಷ್ಠಿ ಮಾಡಿದೆ. ಈಗಾಗಲೇ ಬೇಕರಿ,ಗೊಬ್ಬರದ ಅಂಗಡಿ, ಬಾಳೆಕಾಯಿ ಮಂಡಿ ಸೇರಿದಂತೆ ದೊಡ್ಡ ಅಂಗಡಿಗಳೆಲ್ಲಾ ಖಾಲಿ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳುವತ್ತ ಚಿತ್ತಹರಿಸಿದ್ದು, ಸಣ್ಣಪುಟ್ಟ ಅಂಗಡಿಯವರು ಮಾತ್ರ ಅದೇ ಸ್ಥಳದಲ್ಲಿ ತಮ್ಮ ವ್ಯಾಪಾರ ಮುಂದುವರಿಸಿದ್ದಾರೆ.
ಗಾಳಿಸುದ್ದಿ : ತೆರವಿನ ಬಗ್ಗೆ ಗಂಟೆಗೊಂದು ಗಾಳಿಸುದ್ದಿ ಹಬ್ಬುತ್ತಿದ್ದು ಕೆಲವರು ಆರು ತಿಂಗಳ ಕಾಲಾವಾಕಾಶ ನೀಡಿದ್ದಾರೆಂದರೆ, ಮತ್ತೆ ಕೆಲವರು ಜನವರಿ ೩೦ರ ವರೆಗೆ ಅಂಗಡಿ ತೆರವು ಗೊಳಿಸದಂತೆ ಜಿಲ್ಲಾಧಿಕಾರಿಗಳು ಕಾಲಾವಾಕಾಶ ವಿಧಿಸಿದ್ದಾರೆಂದು ಪುಕಾರು ಹಬ್ಬಿಸುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ.
ಏನೇ ಆದರೂ ಸಹ ಗೂಡಂಗಡಿಗಳು ಹುಳಿಯಾರಿನ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದ್ದು ಅಂಗಡಿಗಳಿಲ್ಲವಾದಲ್ಲಿ ಪಟ್ಟಣಕ್ಕೆ ಬರುವವರ ಸಂಖ್ಯೆ ಸಹ ಇಳಿಮುಖವಾಗಲಿದೆ. ಕೇವಲ ತೆರವಿನ ಬಗ್ಗೆ ಮಾತ್ರ ಯೋಚಿಸುವ ಅಧಿಕಾರಿಗಳು ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ವ್ಯಾಪಾರಸ್ಥರಿಗಾಗಿಯೇ ಮಾರುಕಟ್ಟೆಯಲ್ಲಿ ನಿರ್ಧಿಷ್ಟ ಜಾಗ ಒದಗಿಸಿದಲ್ಲಿ ವ್ಯಾಪಾರ ವಹಿವಾಟಿಗೂ ಅನುಕೂಲವಾಗುತ್ತಿದ್ದಲ್ಲದೆ ಇವರ ಜೀವನಕ್ಕೂ ದಾರಿಯಾಗುತ್ತಿತ್ತು. ಮಂತ್ರಿಮಹೋದಯರು,ಸಂಸದರು ಈ ನಿಟ್ಟಿನಲ್ಲಿ ಆಲೋಚಿಸಿ ಪಟ್ಟಣದಲ್ಲಿ ಸೂಕ್ತ ಜಾಗವೊಂದನ್ನು ಗುರ್ತಿಸಿ ಅನುಕೂಲಕಲ್ಪಿಸಿ ಕೊಡುವ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ.
---------------------
ಕಾಲಾವಾಕಾಶ ನೀಡಿರುವ ಬಗ್ಗೆ ಸದ್ಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಬಂದಿಲ್ಲ . ಸಂಜೆ ಅಥವಾ ಬೆಳಿಗ್ಗೆಯೊಳಗೆ ಆದೇಶ ಬಾರದಿದ್ದಲ್ಲಿ ಗುರುವಾರ ಕಾರ್ಯಾಚರಣೆ ಮುಂದುವರಿಯುತ್ತದೆ : ತಹಸೀಲ್ದಾರ್ ಕಾಮಾಕ್ಷಮ್ಮ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ