ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಸಮೀಪದ ಬೋರನಕಣಿವೆ ಜಲಾಶಯದ ಸುತ್ತಮುತ್ತ ಆಕ್ರಮವಾಗಿ ಒತ್ತುವರಿ ಮಾಡಿದ್ದ ಪ್ರದೇಶದ ತೆರವು ಕಾರ್ಯ ಚಾಲನೆಗೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿಯಾಗಿರುವುದು ತಿಳಿಸುಬಂದಿದೆ.
ಹುಳಿಯಾರು ಸಮೀಪದ ಬೋರನಕಣಿವೆ ಜಲಾಶಯದ ಭಾಗದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸುತ್ತಿರುವುದು. |
ಈಗಾಗಲೇ ಸರ್ವೆ ನಡೆಸಿ ಸಿದ್ದಪಡಿಸಿರುವ ಕ್ರಿಯಾಯೋಜನೆಯಂತೆ ಸುಮಾರು ೩೮ ಎಕರೆಯಷ್ಟು ಪ್ರದೇಶ ಒತ್ತುವರಿಯಾಗಿದ್ದು, ಬೋರನಕಣಿವೆ ಜಲಾಶಯಕ್ಕೆ ಹೊಂದಿಕೊಂಡಿರುವ ಗಾಣಧಾಳು,ಮಾರುಹೊಳೆ,ಕಾರೇಹಳ್ಳಿ ಹಾಗೂ ಬರಕನಹಾಲ್ ಭಾಗದ ವ್ಯಾಪ್ತಿಯಲ್ಲಿ ಹೆಚ್ಚು ಒತ್ತುವರಿಯಾಗಿದೆ.ಸದ್ಯ ಕಾರೇಹಳ್ಳಿಯ ರಂಗನಾಥಸ್ವಾಮಿ ದೇವಾಲಯ ಹಿಂಭಾಗದಿಂದ ತೆರವು ಕಾರ್ಯ ನಡೆಯುತ್ತಿದ್ದು, ಜೆಸಿಬಿಯಿಂದ ಚಾನೆಲ್ ತೆಗೆಯುವ ಮೂಲಕ ಜಲಾಶಯದ ಗಡಿಯನ್ನು ಗುರ್ತಿಸಲಾಗುತ್ತಿದೆ. ಒತ್ತುವರಿ ಜಾಗದ ಕೆಲಭಾಗದಲ್ಲಿ ರಾಗಿ,ಜೋಳ, ತರಕಾರಿಯಂತ ಅಲ್ಪಾವಧಿ ಬೆಳೆಗಳು ಕಂಡು ಬಂದರೆ ಮತ್ತೆ ಕೆಲಭಾಗದಲ್ಲಿ ಫಸಲು ಬಿಡುವ ಹಂತದಲ್ಲಿದ್ದ ತೆಂಗು, ಅಡಿಕೆ ಮರಗಳಿವೆ. ಈಗ ನಡೆಸಿದ ಸರ್ವೆ ಅನ್ವಯ ತೆರವು ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ಸರ್ವೆ ಮುಗಿದ ಬಳಿಕವಷ್ಟೇ ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ ಎಂಬುದರ ಸಂಪೂರ್ಣ ಲೆಖ್ಖ ಸಿಗಲಿದೆ ಎಂದು ಕಂದಾಯ ತನಿಖಾಧಿಕಾರಿ ಹನುಮಂತನಾಯಕ್ ತಿಳಿಸಿದ್ದಾರೆ. ತೆರವು ನಡೆಯುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಕಾಮಾಕ್ಷಮ್ಮ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒಟ್ಟಾರೆ ಈ ತೆರವಿನಿಂದಾಗಿ ಸಾವಿರಾರು ತೆಂಗಿನ ಮರ ಹಾಗೂ ಅಡಿಕೆ ಮರಗಳು ಧರೆಗುರುಳಲಿದ್ದು ರೈತರಿಗೆ ಸಾವಿರಾರು ರೂ ನಷ್ಟವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ