ಇಲ್ಲಿನ ಗ್ರಾಮದೇವತೆ ಶ್ರೀಹುಳಿಯಾರಮ್ಮ ಹಾಗೂ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸಮೀಪವಿರುವ ಹಾಗೂ ಅಕ್ಷೇಪಣಾರ್ಹ ಸ್ಥಳದಲ್ಲಿರುವ ಶ್ರಿರಂಗನಾಥ ಮದ್ಯದಂಗಡಿಯನ್ನು ತೆರವುಗೊಳಿಸುವ ವಿಚಾರವಾಗಿ ಮದ್ಯದಂಗಡಿ ಮಾಲೀಕ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮಾನ್ಯ ಅಬಕಾರಿ ನ್ಯಾಯಾಲಯ ವಜಾಗೊಳಿಸಿದೆ.
ಸನ್ನದುದಾರರು ಹಾಕಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ಬಗ್ಗೆ ಅಬಕಾರಿ ನ್ಯಾಯಾಲಯ ನೀಡಿರುವ ಆದೇಶಪತ್ರ. |
ಪಟ್ಟಣದ ದಿ.ಟೌನ್ ಕೋಅಪರೇಟೀವ್ ಸೊಸೈಟಿಗೆ ಸೇರಿದ ಕಟ್ಟಡದಲ್ಲಿ ಎನ್.ಜಿ.ನಾಗರಾಜ್ ಅವರಿಗೆ ಸೇರಿದ ರಂಗನಾಥ ಲಿಕ್ಕರ್ ಶಾಪ್ ಇದೆ. ಈ ಮದ್ಯದಂಗಡಿ ಜನ ನಿಬಿಡ ಪ್ರದೇಶದಲ್ಲಿರುವುದಲ್ಲದೆ, ಇದರ ಸಮೀಪವೇ ಗ್ರಾಮದೇವತೆ ಹುಳಿಯಾರಮ್ಮ ದೇವಾಲಯ, ಶ್ರೀರಂಗನಾಥಸ್ವಾಮಿ ದೇವಾಲಯ, ಬೀರಲಿಂಗೇಶ್ವರಸ್ವಾಮಿ ದೇವಾಲಯ ಹಾಗೂ ಸರ್ಕಾರಿ ಆಸ್ಪತ್ರೆಯಿದ್ದು ನಿತ್ಯ ನೂರಾರು ಮಂದಿ ಸಂಚರಿಸುತ್ತಿರುತ್ತಾರೆ. ಈ ಮದ್ಯದಂಗಡಿಯಿಂದ ನಿತ್ಯ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ದೇವಾಲಯಕ್ಕೆ ಬರುವವರಿಗೆ ತೊಂದರೆಯಾಗುತ್ತಿದ್ದು ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಸೊಸೈಟಿಯವರು, ಪಟ್ಟಣದ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಕಳೆದ ಕೆಲ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರು.
ಸಾರ್ವಜನಿಕ ಒತ್ತಾಯದಂತೆ ಅಬಕಾರಿ ಡಿಸಿ ಮೋಹನ್ ಕುಮಾರ್ ಅವರ ಸಮಕ್ಷಮದಲ್ಲಿ ೨೦೧೪ರ ಆಗಸ್ಟ್ ನಲ್ಲಿ ಮದ್ಯದಂಗಡಿಯಿಂದ ವಿವಿಧ ದೇವಾಲಯ ಹಾಗೂ ಹೆದ್ದಾರಿಗೆ ಇರುವ ಅಂತರವನ್ನು ಅಳತೆ ಮಾಡಿದ್ದು, ಮದ್ಯದಂಗಡಿಯಿಂದ ಗ್ರಾಮದೇವತೆ ಹುಳಿಯಾರಮ್ಮ ದೇವಸ್ಥಾನಕ್ಕೆ 46.೪ ಮೀ , ಅನಂತಶಯನರಂಗನಾಥಸ್ವಾಮಿ ದೇವಸ್ಥಾನಕ್ಕೆ 96.3 ಮೀ , ಬೀರಲಿಂಗೇಶ್ವರ ದೇವಸ್ಥಾನ ೯೩.೭ ಮೀ, ಕೆಂಚಮ್ಮ ದೇವಸ್ಥಾನಕ್ಕೆ ೧೫೩.೫ಮೀ, ಸಾರ್ವಜನಿಕ ಆಸ್ಪತ್ರೆಗೆ ೧೦೭ ಮೀ ಹಾಗೂ ರಾಜ್ಯ ಹೆದ್ದಾರಿಗೆ ೧೧೬ ಮೀ ಆಳತೆಯಿದ್ದು ಮಹಜರ್ ಮಾಡಲಾಗಿತ್ತು. ಈ ಅಳತೆಯ ಜೊತೆಗೆ ಅಬಕಾರಿ ಡಿಸಿಯವರು ತಹಸೀಲ್ದಾರ್ ವರದಿ, ತಾಲ್ಲೂಕು ಹಾಗೂ ಜಿಲ್ಲಾ ನೊಂದಣಾಕಾರಿಗಳ ವರದಿ, ಚಿ.ನಾ.ಹಳ್ಳಿ ಅಬಕಾರಿ ನಿರೀಕ್ಷಕರ ವರದಿ,ತಿಪಟೂರು ಅಬಕಾರಿ ಉಪಈಕ್ಷಕರ ವರದಿ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಇವರುಗಳ ವರದಿಯನ್ನು ಆದರಿಸಿ ಅಂತಿಮವಾಗಿ ಡಿಸೆಂಬರ್ ೨೮ರ ಒಳಗೆ ಮದ್ಯದಂಗಡಿಯನ್ನು ಬೇರೊಂದು ನಿರಾಕ್ಷೇಪಣಾ ಸ್ಥಳಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಆದೇಶ ಸಹ ಹೊರಡಿಸಿ ನೋಟಿಸ್ ನೀಡಿದ್ದರು.
ಅಂಗಡಿ ಮಾಲೀಕರಿಗೆ ಸನ್ನದನ್ನು ಸ್ಥಳಾಂತರಿಸುವಂತೆ ನೋಟಿಸ್ ನೀಡಿದ್ದಾಗ್ಯೂ ಸಹ ಮದ್ಯದಂಗಡಿಯಿಂದ ರಂಗನಾಥಸ್ವಾಮಿ ದೇವಾಲಯಕ್ಕೆ ನೂರು ಮೀ.ಗೂ ಹೆಚ್ಚು ಅಂತರವಿದೆ ಎಂದು ಮತ್ತೆ ತಕರಾರು ತೆಗೆದು ಕೋರ್ಟ್ ಗೆ ಅರ್ಜಿ ಹಾಕಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಅಬಕಾರಿ ನ್ಯಾಯಾಲಯ ಮತ್ತೊಮ್ಮೆ ಅಳತೆಕಾರ್ಯ ಮಾಡಿಸಿ, ವರದಿ ಪಡೆದು ಈ ಹಿಂದೆ ಜಿಲ್ಲಾ ಅಬಕಾರಿ ಉಪಆಯುಕ್ತರು ಹೊರಡಿಸಿದ್ದ ಸ್ಥಳಾಂತರದ ಆದೇಶವನ್ನು ಎತ್ತಿಹಿಡಿದಿದ್ದು ಸನ್ನದುದಾರರು ಹಾಕಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿ ಆದೇಶಹೊರಡಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ