ಎಲ್ಲೆಡೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಬೇಕಾದ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯಲು ಪಟ್ಟಣದ ನಾಡಕಛೇರಿಯ ಆಟಲ್ ಜನಸ್ನೇಹಿಕೇಂದ್ರ ಪೋಷಕರುಗಳಿಂದ ತುಂಬಿ ತುಳುಕುತ್ತಿತ್ತು.
ವಿದ್ಯಾರ್ಥಿಗಳು ಹಾಗೂ ಅವರ ಪೋಷಕರುಗಳು ಪ್ರಮಾಣ ಪತ್ರಕ್ಕಾಗಿ ಅರ್ಜಿಸಲ್ಲಿಸಲು ನಾಡಕಛೇರಿಗೆ ಅಲೆದಾಡುತ್ತಿರುವ ದೃಶ್ಯ ಕಳೆದೊಂದುವಾರದಿಂದ ಸಾಮಾನ್ಯವಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನಾನುಕೂಲಗಳನ್ನು ತಪ್ಪಿಸಲು ಶಾಲೆಗಳಲ್ಲೇ ಅರ್ಜಿ ಪಡೆದು ಪ್ರಮಾಣ ಪತ್ರ ವಿತರಿಸಲು ಸರ್ಕಾರ ವ್ಯವಸ್ಥೆ ಮಾಡಿದ್ದರೂ ಕೂಡ ಕೇವಲ ಸರ್ಕಾರಿ ಶಾಲೆಗೆ ಮಾತ್ರ ಸೀಮಿತವಾಗಿರುವುದರಿಂದ ಖಾಸಗಿಶಾಲೆ ವಿದ್ಯಾರ್ಥಿಗಳು ಹಾಗೂ ಇನ್ನಿತರ ಉದ್ದೇಶಕ್ಕಾಗಿ ಬೇಕಾದ ಪ್ರಮಾಣಪತ್ರ ಪಡೆಯಲು ಅಟಲ್ ಜನಸ್ನೇಹಿ ಕೇಂದ್ರಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ತಿಂಗಳುಗಟ್ಟಲೇ ಅಲೆದಾಟ ಮತ್ತು ಲಂಚದ ಕಾಟ ತಪ್ಪಿಸಲು ರಾಜ್ಯ ಸರ್ಕಾರ ಕಾಗದ ರಹಿತ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ತಂದಿರುವುದಾಗಿ ಹೇಳಿದರು ಸದ್ಯ ಅದಿನ್ನು ಜಾರಿಗೆ ಬಂದಿಲ್ಲ.
ವಿದ್ಯಾಭ್ಯಾಸಕ್ಕಾಗಿ ನೀಡುವ ಪ್ರಮಾಣ ಪತ್ರ ಅರ್ಜಿಸಲ್ಲಿಸಿದ ೨೧ ದಿನದ ಕಾಲಾವಕಾಶವಿದ್ದರೂ ಸದ್ಯ ೧೦ ದಿನದ ಒಳಗೆ ಪ್ರಮಾಣಪತ್ರ ನೀಡಲಾಗುತ್ತಿದ್ದರು ಸಹ ಕೆಲವೊಮ್ಮೆ ತಡವಾಗುವುದರಿಂದ ಪ್ರವೇಶಕ್ಕೆ ತೊಂದರೆ ಆಗುವುದೆಂಬ ಆತಂಕ ಪೋಷಕರಲ್ಲಿ ಮನೆ ಮಾಡಿದ್ದು , ಇದಕ್ಕಾಗಿ ಬಿಟ್ಟುಕೆಲಸಬಿಟ್ಟು ಬೆಳಿಗ್ಗೆಯಿಂದಲೇ ಕಛೇರಿಯ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ಏನು: ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಚೆಕ್ ಲಿಸ್ಟ್ ತೆಗೆಸಲು ಹೋಬಳಿ ವ್ಯಾಪ್ತಿಯ ಹಳ್ಳಿಯ ಪೋಷಕರು ತಮ್ಮ ಒಂದು ದಿನದ ಕೆಲಸವನ್ನು ಬಿಟ್ಟು ಪಟ್ಟಣದ ನಾಢಕಛೇರಿಗೆ ಬಂದರು ಸಹ ನಾಡಕಛೇರಿಯಲ್ಲಿನ ಆಟಲ್ ಜನಸ್ನೇಹಿ ಕೇಂದ್ರದಲ್ಲಿ ಇದನ್ನು ಹೊರತು ಪಡಿಸಿ ವಂಶವೃಕ್ಷ, ಜನನ,ಮರಣ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳಿಗೂ ಅರ್ಜಿಗಳನ್ನು ಸ್ವೀಕರಿಸುತ್ತಿರುವುದರಿಂದ ತಡವಾಗುತ್ತಿದೆ. ಇದಕ್ಕಾಗಿ ಮೀಸಲಿರುವ ಒಂದೇ ಕಂಪ್ಯೂಟರ್ ನಲ್ಲಿ ಇರುವ ಒಬ್ಬ ಕಂಪ್ಯೂಟರ್ ಅಪರೇಟರ್ ಎಲ್ಲಾ ದಾಖಲೆಗಳನ್ನು ತೆಗೆದುಕೊಡಬೇಕಾಗಿದೆ. ಆತ ರಜಾ ಹಾಕಿದರೆ ಅನೇಕ ದಾಖಲೆಗಳನ್ನು ತೆಗೆದುಕೊಡಲು ಯಾರು ಇರದೆ ನಾಳೆ ಬನ್ನಿ ಎಂದು ಹೇಳುತ್ತಾರೆ.
ಶಾಲೆ ಪ್ರಾರಂಭಕ್ಕೂ ಮುಂಚೆಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸೋಣ ಎಂದರೆ ಶಾಲಾದಾಖಲಾತಿ ಪತ್ರ ತನ್ನಿ ಎಂದು ವಾಪಸ್ಸ್ ಕಳಿಹಿಸುತ್ತಾರೆ. ಒಟ್ಟಾರೆ ಶಾಲಾದಾಖಲಾತಿ ಪತ್ರ ಬರೆಸಿಕೊಂಡು ಬಂದು ಅರ್ಜಿ ಹಾಕಲು ದಿನವಿಡಿ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ, ಈ ಹಿಂದೆ ಗ್ರಾಮಲೆಕ್ಕಿಗರಿಂದ ಕೈಬರಹದಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುತ್ತಿದ್ದೆವು. ಇದೀಗ ವಾರಾನುಗಟ್ಟಲೇ ಕಾಯಬೇಕಿದ್ದು, ಅರ್ಜಿಯಲ್ಲಿ ಒಂದು ತಪ್ಪಾದರೆ, ಅದು ರಿಜೆಕ್ಟ್ ಆಗಿದೆ ಎನ್ನುತ್ತಾರೆ. ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಮತ್ತೆ ಒಂದುವರ ಕಾಯಬೇಕಿದೆ ಎಂದು ಪೋಷಕರು ತಿಳಿಸುತ್ತಾರೆ.
ಇದೀಗ ಅನೇಕ ದಾಖಲೆಗಳನ್ನು ಸರ್ಕಾರ ಗಣಕೀಕೃತವಾಗಿ ತರುವಂತೆ ಹೇಳಿದ್ದು, ಗಣಕೀಕೃತ ದಾಖಲೆ ಪಡೆಯಲು ಹರಸಾಹಕ ಪಡುವಂತಾಗಿದೆ. ಒಂದು ಇನ್ ಕಮ್ ಸರ್ಟಿಫೀಕೇಟ್ ಮಾಡಿಸಲು ೮ ರಿಂದ ೧೦ ದಿನವಾಗುತ್ತಿದೆ. ಪಟ್ಟಣದ ನಾಡಕಛೇರಿಯಲ್ಲಿ ಒಂದು ಕಂಫ್ಯೂಟರ್ ಹಾಗೂ ಒಬ್ಬ ಅಪರೇಟರ್ ಇದ್ದು ಕಾರ್ಯ ವಿಳಂಬವಾಗುತ್ತಿದೆ. ಇದರಿಂದ ದೂರದೂರುಗಳಿಂದ ಬರುವ ಪೋಷಕರು, ಸಾರ್ವಜನಿಕರು ದಿನವಿಡಿ ಕಾಯುವಂತಾಗಿದೆ. ಈ ಬಗ್ಗೆ ತಹಸೀಲ್ದಾರ್ ಅವರು ಶೀಘ್ರವೇ ಗಮನ ಹರಿಸಿ ಮತ್ತೊಂದು ಕಂಪ್ಯೂಟರ್ ಹಾಗೂ ಕಂಪ್ಯೂಟರ್ ಅಪರೇಟರನ್ನು ನೇಮಕ ಮಾಡಿಕೊಟ್ಟು ಈ ಭಾಗದ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಮರಾಠಿಪಾಳ್ಯದ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ