ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಳಿಯಾರು ಗ್ರಾ.ಪಂ. ನೂತನ ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ದಕ್ಕಿದೆ.
ಹುಳಿಯಾರು ಗ್ರಾ.ಪಂ.ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿರುವ ಪಟ್ಟಿ. |
ಹುಳಿಯಾರು ಗ್ರಾ.ಪಂ. ಚುನಾವಣೆ ಪ್ರಾರಂಭದಿಂದಲೂ ಎಲ್ಲಾ ವಿಚಾರದಲ್ಲೂ ಎಲ್ಲರಲ್ಲೂ ಕುತೂಹಲವನ್ನುಂಟು ಮಾಡಿತ್ತು. ಚುನಾವಣೆಗೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ, ಮತದಾನ, ಫಲಿತಾಂಶ ಹಾಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಯಾವ ಮೀಸಲಾತಿ ಬರುತ್ತದೆಂದು ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸದಾ ಕಾತುರದಿಂದಿದ್ದರು. ಅಭ್ಯರ್ಥಿಗಳ, ಬೆಂಬಲಿಗರ ಹಾಗೂ ಸಾರ್ವಜನಿಕರ ಕಾತುರಕ್ಕೆ ಇದೀಗ ತೆರೆಬಿದ್ದಂತಾಗಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿಯಿದ್ದರೆ, ಮಹಿಳಾ ಸದಸ್ಯರು ೨೦ ಮಂದಿಯಿದ್ದಾರೆ.
ಇದೀಗ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಬಂದಿದ್ದು ಪಂಚಾಯ್ತಿಯ ಒಟ್ಟು ೨೦ ಮಂದಿ ಮಹಿಳಾ ಸದಸ್ಯರ ಪೈಕಿ ಯಾರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬುದು ಮತ್ತೊಮ್ಮೆ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ರಾಜಕೀಯ ಪಕ್ಷಗಳು ಸಹ ತೆರೆಮರೆಯಲ್ಲಿ ತಮ್ಮ ಸದಸ್ಯ ಬಲವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಿದ್ದರೂ ಸಹ ಮಹಿಳೆಯರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಗೌಪ್ಯವಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಪೈಪೋಟಿಯಿದ್ದು ಇವರುಗಳ ಪೈಕಿ ಯಾರು ಅಧ್ಯಕ್ಷೆಯಾಗಿ ಗದ್ದುಗೆ ಏರಲಿದ್ದಾರೆ ಎಂಬುದು ತಿಳಿಯದಾಗಿದೆ.
ಕಳೆದ ಬಾರಿಯೂ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಬಂದು ಪುಟ್ಟಿಬಾಯಿ ಹಾಗೂ ಕಾಳಮ್ಮ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿಯೂ ಸಹ ಮತ್ತೆ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ಹುಳಿಯಾರು ಸೇರಿದಂತೆ ಎಲ್ಲಾ ೨೮ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಹುದ್ದೆಗೆ ಮೀಸಲಾತಿ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಯಿತು. ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ನೇತೃತ್ವದಲ್ಲಿ ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್‌ರಾಜ್ , ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ