ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಮತದಾನ ಮಾಡಲು ಇಡಿಸಿ ಅಥವಾ ಅಂಚೆಮೂಲಕ ಅವಕಾಶ ಕಲ್ಪಿಸಲಾಗಿದ್ದು, ಇತರೆಡೆ ಕಾರ್ಯನಿರ್ವಹಿಸಿದ ಹುಳಿಯಾರಿನ ನೌಕರರಿಗೆ ಇಡಿಸಿ ಮತಹಾಕಲು ಪೋಸ್ಟ್ ಮೂಲಕ ಗುರುವಾರದಂದು ಮತಪತ್ರಗಳು ತಲುಪಿವೆ. ಇಡಿಸಿ ವಿಚಾರ ಅರಿತ ಅಭ್ಯರ್ಥಿಗಳು ಅವುಗಳನ್ನು ತಮ್ಮ ಮತವಾಗಿ ಪರಿವರ್ತಿಸಲು ಇಡಿಸಿ ಪಡೆಯಲು ಬಂದ ನೌಕರರಿಗೆ ಮುಗಿಬಿದ್ದ ಪರಿಣಾಮ ಕೆಲವು ಸಮಯ ಅಂಚೆಕಛೇರಿ ದಟ್ಟಣೆಯಿಂದ ಕೂಡಿ ಏನೆಂದುಗೊತ್ತಾಗದಂತಾಗಿತ್ತು.
ಪ್ರತಿ ಬಾರಿ ಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ತೆರಳುವ ನೌಕರರಿಗೆ ಮತದಾನಕ್ಕೂ ಮುಂಚೆಯೇ ಇಡಿಸಿ ಮತಪತ್ರಗಳನ್ನು ನೀಡುವುದಿದ್ದು, ನಂತರ ಅವರು ಮತಗಳನ್ನು ಹಾಕಿ ತಹಸೀಲ್ದಾರ್ ಕಛೇರಿಗೆ ತಲುಪಿಸುತ್ತಿದ್ದರು. ಈ ಬಾರಿ ಅದೇಕೋ ಮತದಾನವಾದ ಬಳಿಕ ತಡವಾಗಿ ಅಂಚೆ ಮೂಲಕ ಇಡಿಸಿ ಮತಪತ್ರಗಳನ್ನು ಕಳುಹಿಸಿದ್ದು , ಅದು ಕೂಡ ಮತ ಎಣಿಕೆಯ ಮುನ್ನಾದಿನ ಕಳುಹಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಇದೇ ದಿನ ಸಂಜೆಯೇ ಇಡಿಸಿ ಮತಪತ್ರ ಹಿಂತಿರುಗಿಸಬೇಕಿದ್ದು ಅನವಶ್ಯಕ ಗೊಂದಲ ಉಂಟುಮಾಡಿತ್ತು.
ಇಡಿಸಿ ಮತಪ್ರವನ್ನು ಪಡೆದ ನೌಕರರು ತಮಗೆ ಇಷ್ಟವಾದ ಅಭ್ಯರ್ಥಿಗೆ ಮತಹಾಕಬಹುದಾಗಿದೆ. ಕೆಲ ಅಭ್ಯರ್ಥಿಗಳು ನಮ್ಮ ಎದುರಿಗೆ ಮತಹಾಕಿಸಿಕೊಳ್ಳಬಹುದಲ್ಲಾ ಎಂದು ನೌಕರರ ಬೆನ್ನುಬಿದ್ದಾರೆ. ಈ ಮತಗಳು ನೂರಕ್ಕೆ ನೂರಷ್ಟು ತಮಗೆ ಬಿದ್ದಿದೆ ಎಂಬುದು ತಿಳಿಯುತ್ತದಲ್ಲ ಎಂಬ ನಿಟ್ಟಿನಲ್ಲಿ ಅಭ್ಯರ್ಥಿಗಳು ನಾಮುಂದು ತಾಮುಂದು ಎಂದು ನೌಕರರಿಂದ ಮತಹಾಕಿಸಲು ಮುಂದಾಗಿದ್ದರು.
ಅಂಚೆ ಮೂಲಕ ಇಡಿಸಿ ಮತಪತ್ರಗಳು ಬರುತ್ತವೆಂದು ಅರಿತಿದ್ದ ಅಭ್ಯರ್ಥಿಗಳು ಮುಂಜಾನೆಯೇ ಅಂಚೆ ಕಛೇರಿಯಲ್ಲಿಗೆ ಬಂದು ಕಾದುಕುಳಿತಿದ್ದು ತಮ್ಮ ಬ್ಲಾಕ್ ನ ಯಾರದರೂ ನೌಕರರು ಬಂದರೆ ಸಾಕು ಅವರೊಂದಿಗೆ ತೆರಳಿ ಮತಹಾಕುವಂತೆ ಒತ್ತಾಯಿಸುತ್ತಿದ್ದರು.
-----------------------
ನಿಗಧಿತ ಸಮಯಕ್ಕೆ ಇಡಿಸಿ ಅಂಚೆಮತ್ರಗಳು ನೌಕರರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರೂ ಸಹ ಅಂಚೆ ವಿಳಂಬದಿಂದ ತಡವಾಗಿ ತಲುಪುವಂತಾಗಿದೆ : ತಹಸೀಲ್ದಾರ್ ಕಾಮಾಕ್ಷಮ್ಮ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ