ಮಳೆ ಬಂದರೆ ಸಾಕು ಪಟ್ಟಣದ ಬಸ್ ನಿಲ್ದಾಣದ ತುಂಬ ನೀರು ನಿಂತು ಕೆಸರುಂಟಾಗುವುದಿದ್ದು ಈ ಬಗ್ಗೆ ಎಷ್ಟೇ ಬಾರಿ ಪಂಚಾಯ್ತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗದೆಯಿದ್ದು ಇಂದಿಗೂ ಸಹ ಬಸ್ ನಿಲ್ದಾಣಲ್ಲಿ ಉಂಟಾಗುವ ಕೆಸರಿನ ಸಮಸ್ಯೆ ಜೀವಂತವಾಗಿದ್ದು ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ.
ಬಸ್ ನಿಲ್ದಾಣದಲ್ಲಿರುವ ಚರಂಡಿಯ ತುಂಬೆಲ್ಲಾ ಮಣ್ಣು, ಪ್ಲಾಸ್ಟಿಕ್ , ಕಸಕಡ್ಡಿ ತುಂಬಿದ್ದು ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗಲಾರದೆ ಬಸ್ ನಿಲ್ದಾಣದಲ್ಲೇ ನಿಲ್ಲುವಂತಾಗಿದೆ. ನಿಂತ ನೀರಿನ ನಡುವೆಯೇ ಬಸ್ ಗಳು ಸಂಚರಿಸುವುದರಿಂದ ಕೆಸರುಂಟಾಗಿದ್ದು ಪ್ರಯಾಣಿಕರು ಓಡಾಡಲು ಪ್ರಯಾಸ ಪಡುವಂತಾಗಿದೆ. ಬಸ್ ಹತ್ತಲು , ಇಳಿಯಲು ಪ್ರಯಾಸ ಪಡಬೇಕಿದ್ದು, ವೃದ್ದರು, ಮಕ್ಕಳು ಕೆಸರಿನಲ್ಲಿ ಜಾರಿ ಬಿದ್ದು ಮೈಗೆ ಕೆಸರು ಮೆತ್ತಿಸಿಕೊಂಡಿದ್ದಾರೆ.
ನಿಲ್ದಾಣಕ್ಕೆ ಸರ್ಕಾರಿ ಹಾಗೂ ಖಾಸಗಿ ಬಸ್ ಸೇರಿ ಸಾಕಷ್ಟು ಬಸ್ ಬಂದು ಹೋಗುತ್ತಿದ್ದು , ಖಾಸಗಿ ಬಸ್ ನವರಿಂದ ಪಂಚಾಯ್ತಿಯವರು ಸುಂಕ ಕಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ನಿಲ್ದಾಣದ ಸಮಸ್ಯೆ ಬಗ್ಗೆ ಮಾತ್ರ ಗಮನಹರಿಸಿಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಾಗಲಿ, ಕೂರಲು ಆಸನದ ವ್ಯವಸ್ಥೆಯಾಗಲಿ ಇಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ.
ನಿಲ್ದಾಣದಲ್ಲಿ ನೀರು ನಿಂತಿರುವುದರಿಂದ ಬೈಕ್ ಹಾಗೂ ಆಟೋ ಸಂಚಾರವೂ ದುಸ್ಥರವಾಗಿದ್ದು ಎಲ್ಲಿ ಜಾರಿ ಬಿಡುತ್ತೇವೆ ಎಂಬ ಭಯದಲ್ಲಿ ವಾಹನವನ್ನು ಚಲಾಯಿಸುವಂತಾಗಿದೆ. ಕೆಲ ಆಟೋದವರು ತಮ್ಮ ನಿಲ್ದಾಣದ ಕಡೆಯಿದ್ದ ಗುಂಡಿಗೆ ಮಣ್ಣು ಹಾಕುವ ಕಾರ್ಯ ಮಾಡಿಕೊಳ್ಳಲು ಮುಂದಾಗಿದ್ದರೆ ಬಸ್ ಬಂದು ನಿಲ್ಲುವ ಜಾಗ ಮಾತ್ರ ಕೆಸರಿನಿಂದಲೇ ಕೂಡಿದೆ.
ಪ್ರತಿಬಾರಿ ಮಳೆ ಬಂದಾಗಲೂ ಸಹ ಬಸ್ ನಿಲ್ದಾಣದಲ್ಲಿ ಈ ಸಮಸ್ಯೆ ಉದ್ಭವಿಸುತ್ತಿದ್ದು ಪಂಚಾಯ್ತಿವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ , ನಿಲ್ದಾಣದಲ್ಲಿನ ಗುಂಡಿಗಳನ್ನು ಟಾರ್ ಹಾಕಿ ಶಾಶ್ವತವಾಗಿ ಮುಚ್ಚಿಸದಿದ್ದರೂ ಸಹ ತಾತ್ಕಾಲಿಕವಾಗಿ ಮಣ್ಣುಜೆಲ್ಲಿ ಹಾಕಿ ಕೆಸರು ಉಂಟಾಗುವುದನ್ನಾದರೂ ಪಂಚಾಯ್ತಿಯವರು ತಪ್ಪಿಸಿದರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಟೀ ಅಂಗಡಿಯ ಮಂಜುನಾಥ ತಿಳಿಸುತ್ತಾರೆ.
ಹುಳಿಯಾರು ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣ ಮಾಡುವುದಾಗಿ ತಿಳಿಸಿದ್ದ ಶಾಸಕರು ನಿಲ್ದಾಣದಲ್ಲಿದ್ದ ಹಳೆ ತಂಗುದಾಣವನ್ನು ತೆಗೆಸಿ ತಗಡಿನ ಶೀಟ್ ಗಳನ್ನು ಹಾಗೂ ನೆಲಕ್ಕೆ ಕಲ್ಲು ಹಾಕಿಸಿರುವುದನ್ನು ಬಿಟ್ಟರೆ ಮತ್ತಾವುದೇ ಕಾರ್ಯ ನಡೆದಿಲ್ಲ. ಇದನ್ನು ಕಂಡ ಸಾರ್ವಜನಿಕರು ಇದೇಕೋ ಶಾಸಕರು ಈ ಬಗ್ಗೆ ತಾತ್ಸಾರ ತೋರಿದ್ದಾರೆ ಎನ್ನುತ್ತಿದ್ದಾರೆ.
ಈ ಹಿಂದೆಯಿದ್ದ ಸದಸ್ಯರುಗಳಿಗೆ ಇಲ್ಲಿನ ಸಂಪೂರ್ಣ ಸಮಸ್ಯೆ ಗೊತ್ತಿದ್ದರೂ ಸಹ ಬಗೆಹರಿಸುವಲ್ಲಿ ಮುಂದಾಗಿರಲಿಲ್ಲ ಈಗ ಹೊಸದಾಗಿ ಸದಸ್ಯರು ಆಯ್ಕೆಯಾಗಿದ್ದು ಇವರೇನಾದರೂ ಈ ಬಗ್ಗೆ ಗಮನಹರಿಸುತ್ತಾರೋ, ಇಲ್ಲವೋ ಎಂದು ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ