ಹುಳಿಯಾರು ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರಯಲು ಬರುವ ಹೋಬಳಿಯ ವಿವಿಧ ಭಾಗದ ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಬ್ಯಾಂಕಿನವರು ಸ್ಪಂದಿಸದಿದೆ ಪರದಾಡಿಸುತ್ತಿದ್ದಾರೆ. ಒಂದು ಖಾತೆ ತೆರೆಯಲು ಬೆಳಿಗ್ಗಿನಿಂದ ಸಂಜೆಯವರೆಗೆ ಕಾದುಕೂರುವಂತಾಗಿರುವುದಲ್ಲದೆ , ಉಚಿತ ಫಾರಂಗಳನ್ನು ನೀಡದ ಮ್ಯಾನೇಜರ್ ಸೈಬರ್ ಸೆಂಟರ್ ನಲ್ಲಿ ಆನ್ ಲೈನ್ ಮೂಲಕ ಖಾತೆ ಓಪನ್ ಮಾಡಿಸಿಕೊಂಡು ಬರುವಂತೆ ಹೇಳಿ ಕಳುಹಿಸುತ್ತಿರುವುದು ಸಮಸ್ಯೆಯಾಗಿದೆ.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನ ಬ್ಯಾಂಕ್ ಖಾತೆಗೆ ಸಂದಾಯವಾಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಬ್ಯಾಂಕ್ ಖಾತೆ ಹೊಂದಿರಬೇಕಿದೆ. ಹಾಗಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಅಕೌಂಟ್ ಮಾಡಿಸಲು ಬ್ಯಾಂಕ್ ನತ್ತ ಮುಗಿಬಿದ್ದಿದ್ದಾರೆ. ಪಟ್ಟಣದಲ್ಲಿ ಎಸ್.ಬಿ.ಐ , ಎಸ್.ಬಿ.ಎಂ ಹಾಗೂ ಕೆನರಾಬ್ಯಾಂಕ್ ಸೇರಿ ಒಟ್ಟು ಮೂರು ರಾಷ್ಟ್ರೀಕೃತ ಬ್ಯಾಂಕ್ ಇವೆ. ಈ ಎಲ್ಲಾ ಬ್ಯಾಂಕ್ ಗಳಲ್ಲೂ ಸಹ ಹೆಚ್ಚುಮಂದಿ ವಿದ್ಯಾರ್ಥಿಗಳೆ ತುಂಬಿರುವುದು ಕಂಡುಬರುತ್ತಿದೆ.
ಕೆನರಾ ಬ್ಯಾಂಕ್ ಹಾಗೂ ಎಸ್.ಬಿ.ಎಂ ಬ್ಯಾಂಕ್ ಗಳಲ್ಲಿ ಬ್ಯಾಂಕ್ ನವರೇ ಆಕೌಂಟ್ ಓಪನಿಂಗ್ ಫಾರಂಗಳನ್ನು ಉಚಿತವಾಗಿ ಕೊಟ್ಟು ಖಾತೆ ತೆರೆಯುತ್ತಿದ್ದರೆ. ಎಸ್.ಬಿ.ಐ ನಲ್ಲಿ ಮಾತ್ರ ವಿನಾಕಾರಣ ಆಕೌಂಟ್ ಓಪನಿಂಗ್ ಫಾರಂ ನೀಡದೆ ಸೈಬರ್ ಸೆಂಟರ್ ಗೆ ಕಳುಹಿಸಿ ಅಲ್ಲಿ ಆನ್ ಲೈನ್ ನಲ್ಲಿ ಖಾತೆ ತೆರೆದು ನಂತರ ಆ ಫಾರಂ ಅನ್ನು ಬ್ಯಾಂಕ್ ಗೆ ತಂದು ಕೊಡುವಂತೆ ಮ್ಯಾನೇಜರ್ ಕಳುಹಿಸುತ್ತಿದ್ದಾರೆ. ಮೊದಲು ಸೂಕ್ತ ದಾಖಲೆಗಳನ್ನು ಮ್ಯಾನೇಜರ್ ಗೆ ತೋರಿಸಿ ಅವರಿಂದ ಸಹಿ ಪಡೆದು ನಂತರ ಅವರು ಸೂಚಿಸುವ ಸೈಬರ್ ಸೆಂಟರ್ ಗೆ ಹೋಗಿ ೭೦ ರೂ ಹಣ ತೆತ್ತು ಆಕೌಂಟ್ ಓಪನ್ ಮಾಡಿಸಿಕೊಂಡು ಬರ ಬೇಕಿದೆ. ಅದರಲ್ಲೂ ಮ್ಯಾನೇಜರ್ ಹೇಳಿದ ಸಮಯದಲ್ಲೇ ಬಂದು ಆ ಫಾರಂಗಳನ್ನು ನೀಡಬೇಕಿದ್ದು ತಡವಾಗಿ ಬಂದಲ್ಲಿ ನಾವು ಹೇಳಿದ ಸಮಯ ಆಗಿದೆ ನಾಳೆ ಬನ್ನಿ ಈಗ ಆಗುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಖಾತೆ ತೆರೆಯಲು ಬಂದ ಪೋಷಕರು ದೂರುತ್ತಾರೆ.
ಪಟ್ಟಣದಲ್ಲಿ ಹತ್ತಾರೂ ಕಂಪ್ಯೂಟರ್ ಕೇಂದ್ರಗಳಿದ್ದರೂ ಸಹ ಮ್ಯಾನೇಜರ್ ಯಾವುದೋ ಒಂದು ಕೇಂದ್ರಕ್ಕೆ ಮಾತ್ರ ಹೋಗುವಂತೆ ಸೂಚಿಸುತ್ತಿದ್ದಾರೆ. ಅಲ್ಲಿಗೆ ಹೋದರೆ ಅಲ್ಲಿಯೂ ಕಾದುಕೋರುವಂತಾಗಿದೆ. ಬೇರೆ ಕಂಪ್ಯೂಟರ್ ಕೇಂದ್ರಗಳಿಗೆ ಹೋಗಿ ಮಾಡಿಸಿಕೊಂಡು ಬರಬಹುದಾ ಎಂದರೆ ಅದಕ್ಕೆ ಉತ್ತರಿಸದೆ ತಾವು ಹೇಳಿದಲ್ಲಿಗೆ ಹೋಗಿ ಖಾತೆ ತೆರೆಸಿಕೊಂಡು ಬನ್ನಿ ಎಂದು ಕಳುಹಿಸುತ್ತಿದ್ದಾರೆ. ವಿಧಿಯಿಲ್ಲದೆ ಅವರು ಹೇಳುವ ಕಂಪ್ಯೂಟರ್ ಕೇಂದ್ರಕ್ಕೆ ಹೋಗಿ ಆಕೌಂಟ್ ಓಪನ್ ಮಾಡಿಸಿಕೊಂಡು ಬರುವಂತಾಗಿದೆ.
ಆಕೌಂಟ್ ಮಾಡಿಸಲು ಮೊದಲು ಬಂದು ಟೋಕಲ್ ಪಡೆಯಬೇಕಿದ್ದು ಅದು ೧೨ ಮಂದಿಗೆ ಮಾತ್ರ ಅವಕಾಶ ಮಾಡಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಬ್ಯಾಂಕ್ ಬಾಗಿಲು ತೆರೆಯುವುದಕ್ಕೂ ಮುಂಚೆಯೇ ಆಗಮಿಸಿ ಬ್ಯಾಂಕ್ ಬಾಗಿಲು ತೆರೆಯುವುದನ್ನೆ ನೋಡುವಂತಾಗಿದೆ. ಖಾತೆ ತೆರೆಯಲು ಬೆಳಿಗ್ಗೆ ಬಂದ ವಿದ್ಯಾರ್ಥಿಗಳು ಬ್ಯಾಂಕ್ ಸಮಯ ಮುಗಿಯುತ್ತಾ ಬಂದರೂ ಸಹ ಖಾತೆ ತೆರೆಯಲು ಪರದಾಡುವಂತಾಗಿದೆ.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಗ್ರಾಮೀಣ ಭಾಗದ ಜನರು ಆಕೌಂಟ್ ಓಪನ್ ಮಾಡಿಸಲು ೭೦ ರೂ ಹಣವನ್ನು ವ್ಯರ್ಥವಾಗಿ ನೀಡಬೇಕಿದ್ದು , ಹಿಂದಿನಂತೆ ಬ್ಯಾಂಕ್ ನಿಂದಲೇ ಉಚಿತವಾಗಿ ಖಾತೆ ತೆರೆಯುವ ಫಾರಂಗಳನ್ನು ನೀಡಿ ಖಾತೆ ತೆರೆಯಲು ಅನುಕೂಲ ಮಾಡಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ