ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮ ಪಂಚಾಯ್ತಿಯ ೧೭ ಸದಸ್ಯರ ಆಯ್ಕೆಗಾಗಿ ಮಂಗಳವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಅಭ್ಯರ್ಥಿಗಳ ಗೆಲುವಿನ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿಟ್ಟಿದ್ದಾರೆ.
ಕಳೆದ ಬಾರಿ ೧೮ ಸ್ಥಾನಗಳಿದ್ದ ಪಂಚಾಯ್ತಿಯಲ್ಲಿ ಈ ಬಾರಿ ೧ ಸ್ಥಾನ ಕಡಿಮೆಯಾಗಿ ೧೭ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ದೊಡ್ಡಬಿದರೆಯಲ್ಲಿ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಪುರುಷರ ತಲಾ ಒಂದೊಂದು ಸ್ಥಾನ ಹಂಚಿಕೆಯಾಗಿದ್ದು, ಎಸ್.ಸಿ ಮಹಿಳಾ ಮೀಸಲು ೧ ಸ್ಥಾನಕ್ಕೆ ನಾಲ್ವರು ಹಾಗೂ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೂ ನಾಲ್ವರು ಸ್ಪರ್ಧಿಸಿದ್ದರು. ಸಾಮಾನ್ಯ ಪುರುಷ ಸ್ಥಾನಕ್ಕೆ ಮೂರು ಮಂದಿ ಕಣದಲ್ಲಿದ್ದರು. ತಮ್ಮತಮ್ಮಲೇ ಪೈಪೋಟಿ ಹೊಂದಿ ಮತದಾರರನ್ನು ಸೆಳೆಯಲು ಕಡೆಕ್ಷಣದವರೆಗೆ ಇನ್ನಿಲ್ಲದ ಕಸರತ್ತು ಸಹ ಮಾಡಿ ಮತಯಾಚಿಸಿದ್ದರು.
ಕಳೆದ ಬಾರಿ ಅಧ್ಯಕ್ಷೆಯಾಗಿದ್ದ ಶಶಿಕಲಾ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸಿದ್ದು ಇವರ ಪ್ರತಿಸ್ಪರ್ಧಿಯಾಗಿ ಜಯಮ್ಮ ಹಾಗೂ ನಾಗರತ್ಮ ಸ್ಪರ್ಧೆವೊಡ್ಡಿದ್ದರು. ಪುರುಷ ಅಭ್ಯರ್ಥಿಗಳಲ್ಲಿ ಡಿ.ಎಲ್.ಕುಮಾರ್, ಯೋಗೀಶ್ ಹಾಗೂ ಸತೀಶ್ ಅವರ ನಡುವೆ ತೀವ್ರ ಪೈಪೋಟಿ ನಡೆದಿದ್ದು ಈ ಮೂವರ ಪೈಕಿ ಯಾರು ಗೆಲ್ಲುತ್ತಾರೆಂಬುದು ಕುತೂಹಲ ಮೂಡಿಸಿದೆ.
ದೊಡ್ಡಬಿದರೆಯ ಒಟ್ಟು ೧೦೩೯ ಮತಗಳಲ್ಲಿ ೮೬೧ಮತ ಚಲಾವಣೆಯಾಗಿದ್ದು ಮತದಾರರು ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಮತಪೆಟ್ಟಿಗೆಯಲ್ಲಿದ್ದು ಎಣಿಕೆಯ ದಿನ ಯಾವಾಗ ಬರುತ್ತದೆ ಎಂದು ಅಭ್ಯರ್ಥಿ ಹಾಗೂ ಮತದಾರರು ಕಾಯುತ್ತಿದ್ದಾರೆ.
ಗೆಲ್ಲುವ ಭರವಸೆ ಹೊಂದಿರುವ ಕೆಲ ಸದಸ್ಯರು ಜೂನ್ ೫ರ ಎಣಿಕೆಗೆ ಚಿ.ನಾ.ಹಳ್ಳಿಗೆ ಹೋಗಲು ಈಗಾಗಲೇ ತಮ್ಮ ಬೆಂಬಲಿಗರನ್ನು ಸಿದ್ದಗೊಳಿಸಿಕೊಳ್ಳಲು ಮುಂದಾಗಿದ್ದು ಹೋಗಿಬರಲು ಟ್ರ್ಯಾಕ್ಟರ್ ವ್ಯವಸ್ಥೆ ಹಾಗೂ ಊಟ,ತಿಂಡಿ ವ್ಯವಸ್ಥೆಯ ಸಿದ್ದತೆಯೊಂದಿಗೆ ಮತ ಎಣಿಕೆಗೆ ಹೋಗಲು ಕಾತುರದಿಂದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ