ಜೆಡಿಎಸ್ ಬೆಂಬಲಿತರಿಗೆ ಒಲಿಯಲಿದೆಯೇ ಗದ್ದುಗೆ ಭಾಗ್ಯ ?
-----------------------------------------
ಹುಳಿಯಾರು: ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇನ್ನೂ ಘೋಷಣೆಯಾಗದಿದ್ದು ಈಗ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರುಗಳು ಗದ್ದುಗೆ ಏರಲಿರುವ ಸಂಭವನೀಯತೆ ಹೆಚ್ಚಿದೆ.
ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹುಳಿಯಾರು ಗ್ರಾ.ಪಂ. |
ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದೆ ತಡ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಾಳೆಯದ ಸದಸ್ಯರುಗಳಲ್ಲಿ ಹುಳಿಯಾರು ಪಂಚಾಯ್ತಿಯ ಗದ್ದುಗೆ ಏರಲು ಇನ್ನಿಲ್ಲದ ಕಸರತ್ತು ನಡೆದರೂ ಸಹ ಕಡೆಕ್ಷಣದಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಖುದ್ದಾಗಿ ಅಖಾಡಕ್ಕಿಳಿದಿದ್ದರಿಂದ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಜೆಡಿಎಸ್ ಗೆ ವ್ಯಕ್ತವಾಯಿತು. ಅಂದೇ ಪ್ರವಾಸದ ನೆಪದಲ್ಲಿ ಮೈಸೂರು ಹಾದಿ ಹಿಡಿದ ಜೆಡಿಎಸ್ ಬೆಂಬಲಿಗರ ಸಂಖ್ಯೆ ದಿನೇದಿನೆ ಏರುತ್ತಿದೆ.
ಹುಳಿಯಾರು ಗ್ರಾ.ಪಂ. ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿ ಹಾಗೂ ಮಹಿಳಾ ಸದಸ್ಯರು ೨೦ ಮಂದಿ ಚುನಾಯಿತರಾಗಿದ್ದಾರೆ. ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ದಕ್ಕಿದೆ.
ಸದ್ಯದ ವರ್ತಮಾನದ ಪ್ರಕಾರ ಪ್ರವಾಸದಲ್ಲಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ೩೪ರ ಗಡಿ ದಾಟಿದೆ ಎನ್ನಲಾಗಿದೆ. ನಿಚ್ಚಳ ಬಹುಮತಕ್ಕಿಂತ ಹೆಚ್ಚಿನ ಸದಸ್ಯರಿರುವುದರಿಂದ ಅದೇ ಪಕ್ಷದವರೇ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಹೆಚ್.ಎಸ್.ಗೀತಾ, ಎರಡನೇ ಬಾರಿ ಸದಸ್ಯರಾಗಿರುವ ಗೀತಾ ಅಶೋಕ್ ಬಾಬು, ಸಿದ್ದಗಂಗಮ್ಮ , ನಗೀನಾ ಬಾನು ನಡುವೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿದ್ದು ಹೆಚ್.ಎಸ್.ಗೀತಾ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಏರಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನ ಎಸ್ ಸಿ ಗೆ ಮೀಸಲಾಗಿದ್ದು ಆಯ್ಕೆಯಾದ ಸದಸ್ಯರಲ್ಲಿ ಕೇವಲ ಮೂರು ಮಂದಿ ಮಾತ್ರ ಎಸ್ ಸಿ ಸದಸ್ಯರುಗಳಿದ್ದು ಗಣೇಶ್ ಹೆಸರು ಮುಂಚೂಣಿಯಲ್ಲಿದೆ. ಅವರಲ್ಲೂ ಕೂಡ ಮೂರು ಮಂದಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ೨೦ ತಿಂಗಳ ಅಧಿಕಾರ ಹಂಚಿಕೆ ಮಾತಾಗಿದೆ ಎನ್ನಲಾಗಿದೆ.
ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನ ಹಿಡಿಯಲು ಇವರೆಲ್ಲರೂ ತೀವ್ರ ಕಸರತ್ತು ನಡೆಸಿದ್ದು, ಹುದ್ದೆ ಆಕಾಂಕ್ಷಿಗಳಿಂದ ಚುನಾಯಿತ ಸದಸ್ಯರಿಗೆ ಡಿಮ್ಯಾಂಡ್ ಶುರುವಾಗಿದೆ. ಬಹುಮತ ಸಾಬೀತಿಗೆ ಅವಶ್ಯವಿರುವ ಬಲವನ್ನು ಜತೆಯಲ್ಲಿ ಇಟ್ಟುಕೊಳ್ಳಲು ಪ್ರವಾಸ ದಾರಿ ಹುಡುಕಿರುವ ಇವರು ಅಧ್ಯಕ್ಷರ ಚುನಾವಣೆ ದಿನದಂದೇ ನೇರವಾಗಿ ಪಂಚಾಯ್ತಿ ಹಾಲ್ ಗೆ ಆಗಮಿಸಲಿದ್ದು ಅಲ್ಲಿಯವರೆಗೂ ಇವರೆಲ್ಲರೂ ನಾಟ್ ರೀಚಬಲ್.
ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ನಿಗದಿಗೊಳಿಸಿರುವುದು ಮತ್ತು ಆಯ್ಕೆಯಾದವರ ವಿರುದ್ಧ ಎರಡೂವರೆ ವರ್ಷದವರೆಗೆ ಅವಿಶ್ವಾಸ ಮಂಡಿಸುವಂತಿಲ್ಲ ಎಂಬ ಹೊಸ ನಿಯಮ ತಂದಿರುವುದೆ ಆಕಾಂಕ್ಷಿಗಳಲ್ಲಿ ಹೆಚ್ಚಿನ ಆಸೆಗೆ ಕಾರಣವಾಗಿದೆ. ಹೇಗಾದರೂ ಸರಿ ಅಧಿಕಾರ ಗಿಟ್ಟಿಸಿಕೊಳ್ಳಲೇಬೇಕು ಎಂಬ ಲೆಕ್ಕಾಚಾರದ ಮೇಲೆ ಆಯ್ಕೆಯಾದ ಸದಸ್ಯರನ್ನು ಮನವೊಲಿಸಿ ಒಂದುಕಡೆ ಒಗ್ಗಟ್ಟಾಗಿಹಿಡಿ ದಿಟ್ಟುಕೊಳ್ಳುವ ಪ್ರಯತ್ನಕ್ಕೆ ಪ್ರವಾಸ ದಾರಿಮಾಡಿಕೊಟ್ಟಿರಿವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ