ಹುಳಿಯಾರು ಹೋಬಳಿಯ ಗ್ರಾಮಾಂತರ ಪ್ರದೇಶವಾದ ಕೆರೆಸೂರಗೊಂಡನಹಳ್ಳಿಯಲ್ಲಿ ಗ್ರಾಮಸ್ಥರ ಸೌಕರ್ಯಕ್ಕಾಗಿ ಕೋರಿಕೆ ಮೇರೆ ಬಸ್ ನಿಲುಗಡೆ ಸೌಕರ್ಯವಿದ್ದರೂ ಸಹ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ಮಾತ್ರ ಕೈನೀಡಿದರೂ ನಿಲ್ಲಿಸದೆ ಸಾಗುತ್ತಿದ್ದು , ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗಿದೆ.
ಕೆರೆಸೂರಗೊಂಡನಹಳ್ಳಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು. |
ಕೆರೆಸೂರಗೊಂಡನಹಳ್ಳಿ, ತಮ್ಮಡಿಹಳ್ಳಿ,ಗೊಲ್ಲರಹಟ್ಟಿ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿ ನಿತ್ಯ ಹುಳಿಯಾರು ಹಾಗೂ ತಿಪಟೂರಿನ ಕಾಲೇಜಿಗೆ ಹೋಗುತ್ತಿದ್ದಾರೆ. ಹುಳಿಯಾರು- ಹೊಸದುರ್ಗ ಮಾರ್ಗದಲ್ಲಿ ಕೆರೆಸೂರಗೊಂಡನಹಳ್ಳಿಯಿದ್ದು ಈ ಭಾಗದ ವಿದ್ಯಾರ್ಥಿಗಳು ಬಸ್ ಪಾಸ್ ಸಹ ಮಾಡಿಸಿದ್ದಾರೆ. ಬಸ್ ಪಾಸ್ ಇದ್ದರೂ ಹಾಗೂ ನಿಲುಗಡೆ ಸೌಲಭ್ಯದ ನಾಮಫಲಕ ಹಾಕಿದ್ದರೂ ಸಹ ಬಸ್ ಮಾತ್ರ ನಿಲ್ಲುತ್ತಿಲ್ಲ.
ಸಮಸ್ಯೆ ಏನು: ಹುಳಿಯಾರು ಬಿಟ್ಟರೆ ಮುಂದಿನ ಸ್ಟೇಜ್ ಯಳನಡಾಗಿದ್ದು ಕೆರೆಸೂರಗೊಂಡನಹಳ್ಳಿಯನ್ನು ಎಲೆಕ್ಟಾನಿಕ್ ಯಂತ್ರದಲ್ಲಿ ಸೇರಿಸಿಲ್ಲ ಹಾಗಾಗಿ ಬಸ್ ನಿಲ್ಲಿಸಲು ಆಗುವುದಿಲ್ಲ ಎಂದು ಕಂಡಕ್ಟರ್ ಹೇಳುತ್ತರಾದರೂ ಯಳನಡುಗೆ ಟಿಕೆಟ್ ಕೊಂಡರೂ ಸಹ ನಿಲ್ಲಿಸದಿರುವುದು ಸಮಸ್ಯೆಯಾಗಿದೆ. ಪಾಸ್ ವಿದ್ಯಾರ್ಥಿಗಳಿಗೆ ಕೆರೆಸೂರಗೊಂಡನಹಳ್ಳಿ ಇಳಿಸಿ, ಹತ್ತಿಸಿಕೊಳ್ಳಬಹುದಿದ್ದರೂ ಸಹ ಬಸ್ಸೇ ನಿಲ್ಲದಿರುವುದು ತೊಂದರೆಗೆ ಕಾರಣವಾಗಿದೆ.
ಈ ಬಸ್ ಮಾರ್ಗದಲ್ಲಿ ಅರ್ಧಗಂಟೆಗೊಂದರಂತೆ ನಿತ್ಯ ಅನೇಕ ಬಸ್ ಸಂಚರಿಸುತ್ತಿದ್ದು ,ಬಸ್ ನಿಲುಗಡೆ ನಾಮಫಲಕ ಹಾಕಿದ್ದರೂ ಸಹ ಬಸ್ ಮಾತ್ರ ನಿಲ್ಲಿಸದೇ ಹೋಗುತ್ತಿರುವ ಬಗ್ಗೆ ಸಾರಿಗೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾವೇದಿಕೆ ಯವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ