ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನುಗಳ ಬಗ್ಗೆ ಅರಿವನ್ನುಂಟು ಮಾಡುವುದರಿಂದ ಮುಂದಿನ ಅವರ ಜೀವನದಲ್ಲಿ ಕಾನೂನು ಪಾಲನೆ ಮಾಡುವಂತೆ ಮಾಡಬಹುದಾಗಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಆರ್.ರವಿಚಂದ್ರ ಅಭಿಪ್ರಾಯಪಟ್ಟರು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್.ಶಾಲೆಯಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಹಾಯಕ ಸರ್ಕಾರಿ ಅಭಿಯೋಜಕ ಆರ್.ರವಿಚಂದ್ರ ಉದ್ಘಾಟಿಸಿದರು. |
ಜಿಲ್ಲಾಕಾನೂನು ಸೇವಾಪ್ರಾಧಿಕಾರ, ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾ.ಪಂ.ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಸಹಯೋಗದಲ್ಲಿ ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆಯಲ್ಲಿ ಸೋಮವಾರ ಅಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ನ್ಯಾಯಾಲಯಕ್ಕೆ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಹೆಚ್ಚಿನ ವಿದ್ಯಾವಂತರುಗಳೇ ಕಾನೂನಿನ ಬಗ್ಗೆ ಅರಿವಿದ್ದು ಸಹ ಕಾನೂನಿನ ಪಾಲನೆ ಮಾಡದೆ ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಕಾನೂನುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗದಿದ್ದರೂ ಸಹ ಕಾನೂನುಗಳ ಕಿರುಪರಿಚಯವನ್ನು ಮಾಡಿಕೊಡುವ ಮೂಲಕ ಅವರಲ್ಲಿ ಅರಿವನ್ನು ಮೂಡಿಸಬೇಕಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಬಿ.ಸಂತೋಷ್ ಮಾತನಾಡಿ ಕಾನೂನಿನಡಿ ಪ್ರತಿಯೊಬ್ಬರು ಸಮಾನರಾಗಿದ್ದು ಕಾನೂನು ಉಲ್ಲಂಘನೆ ಮಾಡಿದವರಿಗೆ ತಕ್ಕ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಪ್ರಸ್ತುತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಅದರಡಿ ಮಕ್ಕಳು ಅಥವಾ ಪೋಷಕರು ದೂರು ದಾಖಲಿಸಬಹುದಾಗಿದೆ ಎಂದರು.
ವಕೀಲರಾದ ರತ್ನರಂಜಿನಿ ಹಾಗೂ ಎಂ.ಎಸ್.ರಮೇಶ್ ಅವರು ಮೋಟಾರು ವಾಹನ ಕಾಯ್ದೆ , ಜನನ ಮರಣ ನೊಂದಣಿಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಆದರ್ಶ್, ವಾಸವಿ ಸಂಸ್ಥೆಯ ಕಾರ್ಯದರ್ಶಿ ರಾಮ್ ನಾಥ್, ಟಿ.ಆರ್.ಎಸ್.ಆರ್.ಶಾಲೆಯ ಮುಖ್ಯಶಿಕ್ಷಕ ಎಂ.ವಿ.ರಮೇಶ್, ವಾಸವಿ ಶಾಲೆಯ ಮುಖ್ಯಶಿಕ್ಷಕ ಮಹೇಶ್, ಕನಕದಾಸ ಶಾಲೆಯ ಮುಖ್ಯಶಿಕ್ಷಕ ಎಸ್,ಚನ್ನಬಸಪ್ಪ, ಎ.ಎಸ್.ಐ ಶಿವಣ್ಣ, ಶಿಕ್ಷಕರಾದ ಕೆ.ಎಂ.ಗಂಗಾಧರಯ್ಯ, ರೇಣುಕಪ್ರಸಾದ್,ಮಂಜುನಾಥ್,ಮಂಜುಳಾ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ