ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಹೋಬಳಿ ವ್ಯಾಪ್ತಿಯ ಕೆಲವೊಂದು ಗ್ರಾಮ ಪಂಚಾಯ್ತಿಗಳಲ್ಲಿ ಚುನಾವಣೆ ನಡೆಯಲಿದ್ದು , ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ.
ಪಂಚಾಯ್ತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಆದಾಗಿನಿಂದ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹತ್ತಾರು ರೀತಿಯ ಕಸರತ್ತು ಮಾಡಿ ನಾನಾದಾರಿ ಹಿಡಿದಿದ್ದರು. ಸಾಲದಕ್ಕೆ ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆ ನಿಧಾನವಾಗಿ ಸಾಕಷ್ಟು ಸಮಯ ಹಿಡಿದಿದ್ದರಿಂದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಇನ್ನಷ್ಟು ಹೈರಾಣಾಗುವಂತೆ ಮಾಡಿತ್ತು.
ಬಹುತೇಕ ಪಂಚಾಯ್ತಿಗಳಲ್ಲಿ ಪ್ರವಾಸ ಎನ್ನುವುದು ಮಾಮೂಲಿ ವಿಚಾರವಾಗಿದ್ದು , ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮಾರ್ಗವಾಗಿತ್ತು. ಸದಸ್ಯರ ನಾನಾಬೇಡಿಕೆಗಳನ್ನು ಪೂರೈಸುವುದರಲ್ಲಿ ಆಕಾಂಕ್ಷಿಗಳಲ್ಲಿ ಸಾಕಪ್ಪಾ ಪಂಚಾಯ್ತಿ ಸಹವಾಸ ಎನ್ನುವಂತೆ ಮಾಡಿತ್ತು.
ಒಟ್ಟಾರೆ ಇಂದಿನಿಂದ ನಾಲ್ಕು ದಿನ ತಾಲ್ಲೂಕಿನಾಧ್ಯಂತ ನಡೆಯಲಿರುವ ಚುನಾವಣೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರವಾಸಕ್ಕೆ ಸದಸ್ಯರನ್ನು ಕರೆದು ಕೊಂಡು ಹೋಗಿರುವ ಪಂಚಾಯ್ತಿಗಳ ಚುನಾವಣೆಯಲ್ಲಿ ನೇರ ಹಣಾಹಣಿಯಿದ್ದು ಕುತೂಹಲಕ್ಕೆ ಕಾರಣವಾದರೆ, ಎಲ್ಲೂ ಹೋಗದೆ ಎಲ್ಲಾ ಸದಸ್ಯರುಗಳು ಊರಲ್ಲಿ ಇರುವ ಪಂಚಾಯ್ತಿಗಳಲ್ಲಿ ಅಧಿಕಾರ ವಿಭಜನೆ ಹಾದಿ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಕೆಂಕೆರೆ : ಒಟ್ಟು ೧೭ ಸದಸ್ಯರ ಬಲ ಹೊಂದಿರುವ ಕೆಂಕೆರೆ ಗ್ರಾ.ಪಂಯಲ್ಲಿ ಕಳೆದ ಜೂ.೨ರಂದು ಸದಸ್ಯರ ಚುನಾವಣೆ ನಡೆದಿದ್ದು ಒಟ್ಟು ೯ ಜನ ಮಹಿಳೆಯರು , ೮ ಮಂದಿ ಪುರುಷರು ಆಯ್ಕೆಯಾಗಿದ್ದು,. ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ-ಬಿ ಮಹಿಳೆಗೆ ಬಂದಿದೆ. ಇದರನ್ವಯ ನಾಲ್ಕು ಜನ ಸ್ಪರ್ಧಿಸಲು ಅವಕಾಶವಿತ್ತಾದರೂ ಸದ್ಯ ೫ ನೇ ಬ್ಲಾಕ್ ನ ಜಯಮ್ಮ, ೧ ನೇ ಬ್ಲಾಕ್ ನ ಆಶಾ ಹಾಗೂ ೪ ನೇ ಬ್ಲಾಕ್ ಮಂಗಳಮ್ಮ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರು ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದು ತಮ್ಮಲೇ ಅಧಿಕಾರ ವಿಭಜನೆ ಮಾಡಿಕೊಂಡಿರುವ ಮಾತು ಕೇಳಿಬಂದಿದೆ. ಯಾರು ಅಧ್ಯಕ್ಷಗಾದಿ ಏರಲಿದ್ದಾರೆ ಎಂಬುದು ಇಂದು ಬಯಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ