ಹುಳಿಯಾರು ಪಟ್ಟಣದ ಬಸ್ ನಿಲ್ದಾಣದಲ್ಲಿ, ಆಸ್ಪತ್ರೆ ಆವರಣ ಸೇರಿದಂತೆ ಎಲ್ಲೆಂದರಲ್ಲಿ ಕಳೆದ ಕೆಲ ದಿನಗಳಿಂದ ಕಸ ತೆಗೆಯದೆ ಬಿಟ್ಟು ಸಾರ್ವಜನಿಕರ ಅಸಹನೆಗೂ ಕಾರಣವಾಗಿ ತೊಂದರೆ ಬಗ್ಗೆ ಪತ್ರಿಕೆಗಳಲ್ಲಿ ಗಮನ ಸೆಳೆದ ನಂತರ ಎಚ್ಚೆತ್ತ ಗ್ರಾ.ಪಂ.ಯವರು ಇದೀಗ ಕಸ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಕಸದ ತೆರವು ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರು. |
ಪಟ್ಟಣದ ಬಸ್ ನಿಲ್ದಾಣಕ್ಕೆ ನಿತ್ಯ ಹಲವು ಬಸ್ ಹಾಗೂ ನೂರಾರು ಪ್ರಯಾಣಿಕರು ಬಂದೋಗುತ್ತಾರೆ. ಅಲ್ಲದೆ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಪೆಟ್ಟಿಗೆ ಅಂಗಡಿಗಳಿದ್ದು ನಿತ್ಯ ಪ್ಲಾಸ್ಟಿಕ್ , ಕಾಗದ, ಟೀಗ್ಲಾಸ್ ಸೇರಿದಂತೆ ಇನ್ನಿತರ ವಸ್ತುಗಳ ತ್ಯಾಜ್ಯ ಉಂಟಾಗುತ್ತದೆ. ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಕಾಪಾಡಬೇಕಿದ್ದ ಗ್ರಾ.ಪಂ.ನವರು ಇತ್ತ ಗಮನ ಹರಿಸದೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡುವಂತೆ ಮಾಡಿದ್ದರು. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ರಾಶಿರಾಶಿ ಕಸ ಬಿದ್ದು ಆಸ್ಪತ್ರೆಗೆ ಬರುವವರ ಹಿಡಿಶಾಪಕ್ಕೆ ಗುರಿಯಾಗಿತ್ತು. ಇಷ್ಟು ಸಾಲದೆಂಬಂತೆ ಪಟ್ಟಣದ್ದೆಲ್ಲೆಡೆ ಕಸದ ರಾಶಿಯೇ ಕಂಡುಬರುತ್ತಿದ್ದು ಸದಸ್ಯರೇ ಸಮಸ್ಯೆ ಬಗ್ಗೆ ಗಮನಹರಿಸಿ ಸ್ವಚ್ಚತೆಗೆ ನಿಂತ ಪರಿಣಾಮ ಇದೀಗ ಇಲ್ಲಿನ ಪಂಚಾಯ್ತಿ ಆಡಳಿತವೂ ಕೂಡ ಮೈಕೊಡವಿ ನಿಂತಿದೆ.
ಪಂಚಾಯ್ತಿಯಲ್ಲಿ ಪೌರಕಾರ್ಮಿಕರಿದ್ದರೂ ಸಹ ಅವರಿಂದ ಕೆಲಸ ಮಾಡಿಸಲು ಸಂಬಳ ಕೊಡದಿರುವುದು ಕಾರಣವಾಗಿದೆ. ಸದ್ಯ ಹೊಸ ಸದಸ್ಯರ ಅಧಿಕಾರ ಸ್ವೀಕರಿಸುವವರೆಗೂ ಪಿಡಿಓ ಅವರೇ ಉಸ್ತುವಾರಿ ವಹಿಸುತ್ತಿದ್ದು ಅವರು ಪರಸ್ಥಳದಿಂದ ಬರುವ ಕಾರಣ ಇತ್ತಗಮನ ಹರಿಸಲು ಸಮಯ ಸಾಲದೆ ಈ ದುಸ್ಥಿತಿ ಉಂಟಾಗುವಂತಾಗಿದೆ. ಅಂತೂಇಂತೂ ಕಡೆಗೂ ಪಂಚಾಯ್ತಿ ಆಡಳಿತ ಎಚ್ಚೆತ್ತಿದ್ದರಿಂದ ಸ್ವಚ್ಚತಾ ಕಾರ್ಯ ನಡೆಯುವಂತಾಗಿದೆ. ನಿಲ್ದಾಣ ಸೇರಿದಂತೆ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಟ್ಯ್ರಾಕ್ಟರ್ ಗೆ ತುಂಬಿಸಿ ಪಟ್ಟಣದಿಂದ ಹೊರಗೆ ಸಾಗಿಸುವ ಕಾರ್ಯ ಮಾಡುವ ಮೂಲಕ ಸ್ವಚ್ಚತೆ ಮಾಡಿದ್ದಾರೆ. ಇದೇ ರೀತಿ ಪ್ರತಿ ದಿನ ಬಸ್ ನಿಲ್ದಾಣದಲ್ಲಿ ಉಂಟಾಗುವ ಕಸವನ್ನು ಒಂದೆಡೆ ಗುಡಿಸಿ ತೆರವು ಮಾಡಿದರೆ ಪ್ರಯಾಣಿಕರಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಿದಂತಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ