ರೈತರ ಸಾಂಪ್ರದಾಯ ಆಚರಣೆಯಾದ ಕಾರಹುಣ್ಣಿಮೆಯು ಪಟ್ಟಣದ ವೀರಭದ್ರಸ್ವಾಮಿ ದೇವಾಲಯ ಪಕ್ಕದ ಆವರಣದಲ್ಲಿ ಮಂಗಳವಾರ ರಾತ್ರಿ ಮೂಲನಕ್ಷತ್ರದಲ್ಲಿ ಗ್ರಾಮದೇವತೆ ದುರ್ಗಮ್ಮದೇವಿಯ ಸಮ್ಮುಖದಲ್ಲಿ ಊರಗೌಡರ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು.
ಕಾರಬ್ಬಕ್ಕೆ ಸಿಂಗರಿಸಿರುವ ಕರುಗಲ್ಲು. |
ಗ್ರಾಮೀಣ ಭಾಗದ ರೈತರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಕಾರಬ್ಬವೂ ಸಹ ಒಂದಾಗಿದ್ದು , ಇದನ್ನು ಎಲ್ಲಾ ರೈತರು ಆಚರಿಸುತ್ತಾರೆ. ಹುಳಿಯಾರು ಹಾಗೂ ಶೆಟ್ಟಿಕೆರೆಯಲ್ಲಿ ನಡೆಯುವ ಕಾರಬ್ಬದ ಆಚರಣೆ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಪ್ರಾಮುಖ್ಯತೆ ಪಡೆದಿದೆ. ಹಿಂಗಾರು ಬೆಳೆಗಳಾದ ರಾಗಿ,ಹುರುಳಿ ಸೇರಿದಂತೆ ಇನ್ನಿತರ ಬೆಳೆಯನ್ನು ಬಿತ್ತುವ ಮೊದಲು ಯಾವ ಬೆಳೆಯನ್ನು ಬಿತ್ತಿದರೆ ಹೆಚ್ಚು ಫಸಲು ಬರುತ್ತದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಕಾರಬ್ಬದ ಆಚರಣೆಯನ್ನು ಇಂದಿಗೂ ನಡೆಯುತ್ತಿದೆ.
ಆಚರಣೆ ಹೇಗೆ : ಪಟ್ಟಣದ ವೀರಭದ್ರಸ್ವಾಮಿ ದೇವಾಲಯದ ಪಕ್ಕದ ಜಾಗದಲ್ಲಿ ಈ ಹಿಂದೆಯೇ ಸ್ಥಾಪಿಸಿರುವ ಕರುಗಲ್ಲುಗಳಿದ್ದು ( ೨ ದೊಡ್ಡ ಕಲ್ಲುಗಳನ್ನು ಎದುರು ಬದುರು ನಿಲ್ಲಿಸಿರುವುದು) ಆ ಕಲ್ಲುಗಳ ಮಧ್ಯಭಾಗದಲ್ಲಿ ಕಾರೆಕುಕ್ಕುವ ಕಾರ್ಯ ನಡೆಯಲಿದೆ. ಕರುಗಲ್ಲನ್ನು ಸ್ವಚ್ಚಗೊಳಿಸಿ ಬೇವಿನಸೊಪ್ಪು ಹಾಗೂ ಅಂಬಳ್ಳಿ ಕಟ್ಟಿ ಸಿಂಗರಿಸಿರುತ್ತಾರೆ. ಹೊಸ ಗಡಿಗೆಯಲ್ಲಿ ಹಿಂಗಾರು ಬೆಳೆಗಳಾದ ರಾಗಿ,ಸಾವೆ, ಹುರಳಿ ಸೇರಿದಂತೆ ಇತರ ಬೆಳೆಗಳನ್ನು ಹಿಡಿಯಷ್ಟು ಹಾಕಿ ನೀರು ತುಂಬಿ ಗ್ರಾಮದೇವತೆಯ ದೇವಾಲಯದಲ್ಲಿ ಪೂಜಿಸಿಕೊಂಡು ವಾದ್ಯದೊಂದಿಗೆ ಗ್ರಾಮದೇವತೆ ದುರ್ಗಮ್ಮನೊಂದಿಗೆ ಕರುಗಲ್ಲ್ ಬಳಿ ತರುತ್ತಾರೆ. ನಂತರ ಆ ಕುಂಭವನ್ನು ಕರುಗಲ್ಲಿನ ಮಧ್ಯದಲ್ಲಿಟ್ಟು ಪೂಜಿಸಿ, ಊರಗೌಡರ ಹಾಗೂ ದೇವರ ಅಪ್ಪಣೆ ಪಡೆದು ಜೊಡೆತ್ತುಗಳನ್ನು ಕುಂಟೆಯೊಂದಿಗೆ ಹೂಡಿ ಅವುಗಳಿಂದ ಆ ಕುಂಭವನ್ನು ಹೊಡೆಯುತ್ತಾರೆ. ಹೊಡೆದ ರಭಸಕ್ಕೆ ಯಾವ ಕಾಳು ನೀರಿನಜೊತೆ ಹರಿದು ಮುಂದೆ ಬರುತ್ತದೋ ಆ ಬೆಳೆ ಈ ಬಾರಿ ಹೆಚ್ಚಾಗಿ ಬೆಳೆಯುತ್ತದೆ ಎಂಬ ನಂಬಿಕೆಯಿದೆ. ಅದರಂತೆ ಈ ಭಾಗದ ರೈತರು ಆ ಬೆಳೆಯನ್ನು ಹೆಚ್ಚು ಬಿತ್ತುವುದು ಹಿಂದಿನಿಂದ ನಡೆದುಕೊಂಡುಬಂದಿದೆ.
ಈ ಬಾರಿಯ ಆಚರಣೆಯಲ್ಲಿ ಹೆಸರು ಉತ್ತಮಬೆಳೆ ಬರುವ ನಿರೀಕ್ಷೆಯಿದ್ದು ನಂತರ ಹಿಂಗಾರು ಬೆಳೆಗಳಾದ ರಾಗಿ ಹಾಗೂ ಅಲಸಂದೆ ಕಾಳು ಬೆಳೆಯಬಹುದಾಗಿದೆ.
ಕಾರಬ್ಬದ ಆಚರಣೆ ಪಟ್ಟಣದಲ್ಲಿ ವಿಶೇಷವಾಗಿದ್ದು ಅಂದು ಪಟ್ಟಣದ ಮನೆಗಳಲ್ಲಿ ಸಿಹಿ ಅಡುಗೆ ಮಾಡುವುದಲ್ಲದೆ, ದನಕರು ಇರುವ ಮನೆಯವರು ಅವುಗಳ ಮೈತೊಳೆದು, ಕೊಂಬಿಗೆ ಬಣ್ಣ ಹಾಕಿ ಪೂಜಿಸಿ ನೈವೇದ್ಯ ನೀಡುವುದು ಇಲ್ಲಿ ವಾಡಿಕೆಯಾಗಿದ್ದು ಅದರ ಆಚರಣೆ ಇಂದಿಗೂ ಜೀವಂತವಾಗಿದೆ. ಕಾರೆಕುಕ್ಕುವ ಕಾರ್ಯದಲ್ಲಿ ದೇವಸ್ಥಾನ ಸಮಿತಿಯ ಕನ್ವಿನರ್ ವಿಶ್ವನಾಥ್, ಗುಂಚಿಗೌಡರುಗಳಾದ ಚಂದ್ರಯ್ಯ, ಮಂಜುನಾಥ್, ನೀರಿನಗಾಡಿ ದುರ್ಗಣ್ಣ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ