ಪ್ರಸ್ತುತದಲ್ಲಿ ಸಾಕಷ್ಟು ರೈತರು ಹೆಚ್ಚು ಇಳುವರಿ ಪಡೆಯುವ ಹಂಬಲದಲ್ಲಿ ಏತೆಚ್ಚವಾಗಿ ರಾಸಾಯನಿಕ ಗೊಬ್ಬರ, ಕೀಟಾನಾಶಕವನ್ನು ಭೂಮಿಗೆ ಹಾಕುತ್ತಿರುವುದರಿಂದ ಭೂಮಿಯ ಫಲವತ್ತತೆಯ ಸಾರ ನಾಶವಾಗುತ್ತಿದೆ ಎಂದು ತಾಲ್ಲೂಕು ಸಹಾಯಕ ಕೃಷಿನಿರ್ದೇಶಕ ಡಾ.ಹೆಚ್.ಹೊನ್ನದಾಸೇಗೌಡ ವಿಷಾದಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕೃಷಿ ಅಭಿಯಾನ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿನಿರ್ದೇಶಕ ಡಾ.ಹೆಚ್.ಹೊನ್ನದಾಸೇಗೌಡ ಮಾತನಾಡಿದರು. |
"ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರದಂದು ಅಯೋಜಿಸಿದ್ದ " ಕೃಷಿ ಅಭಿಯಾನ-೨೦೧೫-೧೬" ರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ರೈತರು ರಾಸಯನಿಕ ಗೊಬ್ಬರ ಹಾಕುವ ಬದಲು ಸಾವಯವ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಪೈರುಗಳಿಗೆ ಹಾಕುವುದರಿಂದ ಉತ್ತಮ ಇಳುವರಿ ತೆಗೆಯಬಹುದಾಗಿದೆ ಎಂದರು. ಕೃಷಿ ಇಲಾಖೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹತ್ತಾರೂ ಯೋಜನೆಗಳಿವೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ, ಗೊಬ್ಬರ ಹಾಗೂ ಕೀಟನಾಶಕ, ಯಂತ್ರೋಪಕರಣಗಳು ದೊರೆಯುವುದಿದ್ದು ಸೂಕ್ತ ದಾಖಲಾತಿ ನೀಡಿ ಪಡೆಯಬಹುದಾಗಿದೆ.
ಇದೀಗ ಕೃಷಿ ಇಲಾಖೆಯಲ್ಲಿನ ಸೌಲಭ್ಯಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಹಾಕಬೇಕಿದ್ದು , ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಒಮ್ಮೆ ಇಲಾಖೆಗೆ ಕೊಟ್ಟು ಇಲಾಖೆಯು ಕೊಡುವ ಕೆ-ಕಿಸಾನ್ ಕಾರ್ಡ್ ಪಡೆದು ಆ ಮೂಲಕ ಎಲ್ಲಾ ಸೌಲಭ್ಯ ಪಡೆಯಿರಿ ಎಂದರು. ಹೋಬಳಿಯಾದ್ಯಂತ ಎರಡು ದಿನಗಳಕಾಲ ನಡೆದ ಕೃಷಿ ಅಭಿಯಾನದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದು ಅವುಗಳ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕೃಷಿ ವಿಜ್ಞಾನಿಗಳಾದ ಚನ್ನಪ್ಪಗೌಡ ಹಾಗೂ ದರ್ಶನ್ ಕೃಷಿಕಾರ್ಯದಲ್ಲಿ ಎದುರಾಗುವ ತೊಡಕುಗಳು ಹಾಗೂ ಅವುಗಳ ನಿರ್ವಹಣೆ, ತಾಂತ್ರಿಕತೆಯ ಅಳವಡಿಕೆ ಬಗ್ಗೆ ತಿಳಿಸಿದರು. ಜಿ.ಪಂ.ಸದಸ್ಯೆ ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ, ತಾ.ಪಂ.ಸದಸ್ಯೆ ಜಯಲಕ್ಷ್ಮಮ್ಮ, ತೋಟಗಾರಿಕೆ ಇಲಾಖೆಯ ಮಹಾಲಕ್ಷ್ಮಿ, ಆರಣ್ಯ ಇಲಾಖೆಯ ತಾರಕೇಶ್ವರಿ,ರೇಷ್ಮೆ ಇಲಾಖೆಯ ಇಂದಿರಾ ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆ ತಿಳಿಸಿದರು. ಸಾವಯವ ಕೃಷಿಕ ರಾಮಕೃಷ್ಣಪ್ಪ, ಕೃಷಿ ಇಲಾಖೆಯ ಕರಿಬಸವಯ್ಯ, ನೂರುಲ್ಲಾ,ರಂಗನಾಥ್, ತಿಪ್ಪೇಸ್ವಾಮಿ, ಶಿವಣ್ಣ, ಮಲ್ಲಿಕಾರ್ಜುನ್,ರಮೇಶ್ , ರೈತ ಅನುವುಗಾರರು ಸೇರಿದಂತೆ ಹೋಬಳಿಯ ವಿವಿಧ ಹಳ್ಳಿಯ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ