ಚಿಕ್ಕನಾಯಕನಹಳ್ಳಿ ಸುದ್ದಿ
ರಾಜ್ಯ ಸರ್ಕಾರದ ಜನೋಪಯೋಗಿ ಯೋಜನೆಯಾದ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಗೆ ತಾಲೂಕಿಗೆ ರೂ.೧೨ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಅವರು ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ಬಿಜೆಪಿ ಸರ್ಕಾರದ, ನಮ್ಮ ಊರು-ನಮ್ಮ ರಸ್ತೆಯ ರೂಪಾಂತರವೇ ನಮ್ಮ ಗ್ರಾಮ-ನಮ್ಮ ರಸ್ತೆ ಎಂದಾಗಿದೆ. ಸದರಿ ಯೋಜನೆಯಲ್ಲಿ ರೂ ೧೨,೬೧,೮೬೦೦೦ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಟೆಂಡರ್ ಪ್ರಕ್ರಿಯೆಯು ಮುಗಿದಿದೆ. ಈ ಮೂಲಕ ತಾಲೂಕಿನಲ್ಲಿ ಎಂಟು ರಸ್ತೆ ಕಾಮಗಾರಿ ಮತ್ತು ಒಂದು ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಭಾವನಹಳ್ಳಿ-ಹೊನ್ನೆಬಾಗಿ, ಚಿಕ್ಕರಾಂಪುರ-ಬರಶಿಡ್ಲಹಳ್ಳಿ, ಆಶ್ರೀಹಾಲ್-ರಾಮನಹಳ್ಳಿ, ನುಲೇನೂರು-ಕಲ್ಲೇನಹಳ್ಳಿ, ರಸ್ತೆಗಳು ಮತ್ತು ಸಿದ್ದನಕಟ್ಟೆ ಬಳಿ ಸೇತುವೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇದೇ ತಿಂಗಳ ೨೭ರಂದು ಶುಕ್ರವಾರ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹೇಮಾವತಿ ಕಾಮಗಾರಿ ಪ್ರಾರಂಭದ ಬಗ್ಗೆ ಮಾತನಾಡಿ ಪರಿಹಾರ ನೀಡಿಕೆಯಲ್ಲಿ ಆದ ವಿಳಂಬದಿಂದಾಗಿ ಕಾಮಗಾರಿ ಪ್ರಗತಿಗೆ ಹಿನ್ನಡೆಯಾಗಿದೆ. ಪರಿಹಾರ ವಿತರಣೆಗಾಗಿ ಸರ್ಕಾರ ರೂ ೨೫ ಕೋಟಿ ಮೀಸಲಾಗಿಟ್ಟಿದೆ. ಆದಷ್ಟು ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು. ತಾಲೂಕಿಗೆ ಬಹಳ ವರ್ಷಗಳ ಹಿಂದೆಯೇ ಮಂಜೂರು ದೊರೆತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕೈಗೂಡದಿದ್ದ ಸಾರಿಗೆ ಸಂಸ್ಥೆ ಬಸ್ ಡಿಪೋವನ್ನು, ಜಮೀನು ಮಂಜೂರಿಗಾಗಿ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮಂಜೂರು ದೊರೆತ ತಕ್ಷಣ ಅದನ್ನು ಕೂಡ ಪ್ರಾರಂಭಿಸಲಾಗುವುದು ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ