ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಯ ಚುನಾವಣೆಯ ಮತದಾನ ಯಾವುದೇ ಗಲಾಟೆ ,ಗದ್ದಲಗಳಿಲ್ಲದೆ ಮಂಗಳವಾರ ಶಾಂತಿಯುತವಾಗಿ ನಡೆಯಿತು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಡಶಾಲೆಯ ಮತಗಟ್ಟೆಯೊಂದರಲ್ಲಿ ಮಹಿಳೆಯರು ಸರದಿಸಾಲಿನಲ್ಲಿ ಸಾಗಿ ಮತಚಲಾಯಿಸಿದರು. |
ಹುಳಿಯಾರಿನ ಎಂಪಿಎಸ್ ಶಾಲೆಯ ಮತಗಟ್ಟೆಯೊಂದಕ್ಕೆ ಹತ್ತನೇ ಬ್ಲಾಕ್ ನ ಅಂಗವಿಕಲ ವ್ಯಕ್ತಿ ಸಂಬಂಧಿಕರ ನೆರವಿನೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. |
ಹುಳಿಯಾರಿನ ಮತಗಟ್ಟೆಯೊಂದಕ್ಕೆ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. |
ಹುಳಿಯಾರು ಗ್ರಾ.ಪಂ.ನ ೩೯ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದ್ದು, ಎಂಪಿಎಸ್ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ೧ ನೇಬ್ಲಾಕ್ ನಿಂದ ೮ ನೇ ಬ್ಲಾಕ್ ವರೆಗಿನ ಮತದಾರರು ಮತಚಲಾಯಿಸಿದರೆ, ಉರ್ದುಶಾಲೆಯ ಮತಗಟ್ಟೆಯಲ್ಲಿ ೯ ಮತ್ತು ೧೦ ನೇ ಬ್ಲಾಕ್ ನ ಮತದಾರು ಹಾಗೂ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯ ಮತಗಟ್ಟೆಯಲ್ಲಿ ೧೧ ನೇ ಬ್ಲಾಕ್ , ೧೨ನೇ ಬ್ಲಾಕ್ ಹಾಗೂ ೧೩ ನೇ ಬ್ಲಾಕ್ ನ ಮತದಾರರು ಮತಹಾಕಿದರು.
ಬೆಳಗ್ಗೆ ೭ ರಿಂದ ಪ್ರಾರಂಭವಾದ ಮತದಾನ ಸಂಜೆ ೫ ರವರೆಗೂ ನಡೆಯಿತು. ಯಾವುದೇ ಅಹಿತಕರಘಟನೆ ನಡೆಯದಂತೆ ಪ್ರತಿ ಬೂತ್ ಹಾಗೂ ಮತಕೇಂದ್ರದ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಮತಕೇಂದ್ರದಿಂದ ನೂರು ಮೀ ದೂರದವರೆಗೆ ಯಾರು ಯಾವುದೇ ಪ್ರಚಾರ ಕಾರ್ಯ ಮಾಡದಂತೆ, ಅಂಗಡಿಗಳನ್ನು ತೆರೆಯದಂತೆ ಕೆಂಪು ಬಾವುಟ ಕಟ್ಟಿ ನಿರ್ಬಂಧ ಹಾಕಿದ್ದರು.
ಮತದಾನ ಪ್ರಾರಂಭಗೊಂಡ ಕೆಲ ಗಂಟೆಗಳಕಾಲ ಚುರುಕಿನಿಂದ ಮತದಾನ ನಡೆದಿದ್ದು ಮಧ್ಯಾಹ್ನದ ಬಿಸಿಲು ಹೆಚ್ಚಾದಂತೆ ಮತದಾನ ನಿಧಾನಗೊಂಡು ಸಂಜೆ ನಾಲ್ಕರವರೆಗೂ ನೀರಸವಾಗಿತ್ತು. ಕೆಲ ಬೂತ್ ಗಳಲ್ಲಿ ಚುನಾವಾಣ ಸಿಬ್ಬಂದಿಗಳು ಮತದಾರರಿಗಾಗಿ ಎದುರು ನೋಡುವಂತಾಗಿತ್ತು.ಸಂಜೆ ನಾಲ್ಕರ ನಂತರ ಮತದಾನ ಚುರುಕುಗೊಂಡು ಮತದಾರರು ಹಿಂಡುಹಿಂಡಾಗಿ ಬಂದು ಮತಚಲಾಯಿಸಿದರು. ವೃದ್ದರು , ಅಂಗವಿಕಲರು ಸಂಬಂಧಿಕರ ನೆರವಿನೊಂದಿಗೆ ಬೈಕ್ ,ಕಾರ್, ಆಟೋದಲ್ಲಿ ಮತಗಟ್ಟೆಯಲ್ಲಿಗೆ ಬಂದು ಮತದಾನ ಮಾಡಿದರು. ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹುಳಿಯಾರಿನ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸೈ ಬಿ.ಪ್ರವೀಣ್ ಕುಮಾರ್ ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಯಲ್ಲಿನ ಮತಕೇಂದ್ರಗಳಲ್ಲಿಗೆ ಗಸ್ತು ತಿರುಗುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ