ಸರ್ಕಾರದಿಂದ ರೈತರ ಅಭಿವೃದ್ದಿಗಾಗಿ ಹತ್ತಾರು ಯೋಜನೆಗಳು ಹಾಗೂ ಸೌಲಭ್ಯಗಳಿದ್ದು ರೈತರು ಅವುಗಳನ್ನು ಪಡೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿ.ಪಂ.ಸದಸ್ಯೆ ಜಾನಮ್ಮರಾಮಂಚ್ರಯ್ಯ ತಿಳಿಸಿದರು.
ಹುಳಿಯಾರು ಸಮೀಪದ ಹಂದನಕೆರೆಯಲ್ಲಿ ಕೃಷಿ ಇಲಾಖೆಯಿಂದ ಅಯೋಜಿಸಿದ್ದ ಕೃಷಿ ಅಭಿಯಾನ ಸಂವಾದ ಕಾರ್ಯಕ್ರಮವನ್ನು ಜಿ.ಪಂ.ಸದಸ್ಯೆ ಜಾನಮ್ಮ ಉದ್ಘಾಟಿಸಿದರು. |
"ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆಯ ಸಹಭಾಗಿತ್ವದಲ್ಲಿ ಹಂದನಕೆರೆಯಲ್ಲಿ ಮಂಗಳವಾರ ಅಯೋಜಿಸಿದ್ದ " ಕೃಷಿ ಅಭಿಯಾನ-೨೦೧೫-೧೬" ರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಕೃಷಿ ಯಾಂತ್ರೀಕರಣಯೋಜನೆ,ಕೃಷಿಭಾಗ್ಯ,ಸಾವಯವ ಭಾಗ್ಯ ಯೋಜನೆಯಂತಹ ಹಲವು ಯೋಜನೆಗಳಿದ್ದು ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕೆಂದರು. ಉತ್ತಮ ಇಳುವರಿಯ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ಇನ್ನಿತರ ವಸ್ತುಗಳನ್ನು ಸಬ್ಸಿಡಿದರಲ್ಲಿ ಕೃಷಿ ಇಲಾಖೆಯಲ್ಲಿ ದೊರೆಯುವುದಿದ್ದು ಅವುಗಳನ್ನು ತಮ್ಮ ಹೊಲಗಳಿಗೆ ಹಾಕುವ ಮೂಲಕ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಅಭಿವೃದ್ದಿಯಾಗುವಂತೆ ತಿಳಿಸಿದರು. ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಕೃಷಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಪ್ರಚಾರ ಮಾಡುವ ಮೂಲಕ ರೈತರಿಗೆ ತಿಳಿಸುವ ಕಾರ್ಯ ಮಾಡುವಂತೆ ಮನವಿ ಮಾಡಿದರು.
ಅಧ್ಯಕ್ಷತೆವಹಿಸಿದ್ದ ತಾಲ್ಲೂಕು ಸಹಾಯಕ ಕೃಷಿನಿರ್ದೇಶಕ ಡಾ.ಹೆಚ್.ಹೊನ್ನದಾಸೇಗೌಡ ಮಾತನಾಡಿ, ರೈತರಿಗೆ ನೆರವಾಗುವ ದೃಷ್ಠಿಯಲ್ಲಿ ಈಗಾಗಲೇ ಹಂದನಕೆರೆಯಲ್ಲಿ ಬಾಡಿಗೆ ಆಧಾರಿತ ಯಂತ್ರಗಳ ಕೇಂದ್ರವನ್ನು ಸ್ಥಾಪಿಸಿದ್ದು , ಮುಂದಿನ ದಿನದಲ್ಲಿ ಹುಳಿಯಾರು ಹಾಗೂ ಕಸಬಾ ಹೋಬಳಿಯಲ್ಲಿ ಇಂತಹ ಕೇಂದ್ರವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ತಮ್ಮ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಹಾಗೂ ಅದಕ್ಕೆ ಬೇಕಾದ ದಾಖಲೆಗಳ ಬಗ್ಗೆ ಕೃಷಿ ಅಧಿಕಾರಿಗಳು ಸಂಪೂರ್ಣ ವಿವರವನ್ನು ನೀಡುವುದಾಗಿ ತಿಳಿಸಿದರು.
ಕೃಷಿ ವಿಜ್ಞಾನಿ ಜಿಕೆವಿಕೆಯ ಡಾ.ಶ್ರೀನಿವಾಸರೆಡ್ಡಿ ರೈತರೊಂದಿಗೆ ಸಂವಾದ ನಡೆಸಿ ಬೆಳೆಗೆ ತಗುಲುವ ರೋಗಬಾಧೆ ಹಾಗೂ ಅವುಗಳ ಹತೋಟಿ ಕ್ರಮದ ಬಗ್ಗೆ ವಿವರಿಸಿದರು. ಗ್ರಾ.ಪಂ.ಸದಸ್ಯ ಸಿದ್ದಲಿಂಗಯ್ಯ,ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾಲಕ್ಷ್ಮಮ್ಮ, ರೇಷ್ಮೆ ಇಲಾಖೆಯ ರಾಜಣ್ಣ, ಹಂದನಕೆರೆ ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ.ಇ.ಮಲ್ಲಿಕಾರ್ಜುನ್, ಸಹಾಯಕ ಕೃಷಿ ಅಧಿಕಾರಿಗಳಾದ ಸೋಮಶೇಖರಯ್ಯ,ಮೋಹನ್ ಹಾಗೂ ರೈತ ಅನುವುಗಾರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ