ಜಿಲ್ಲೆಯಲ್ಲಿಯೇ ಅತಿ ದೊಡ್ಡ ಪಂಚಾಯ್ತಿಯಾಗಿರುವ ಬರೋಬರಿ ೩೯ ಸದಸ್ಯರನ್ನು ಹೊಂದಿರುವ ಹುಳಿಯಾರು ಗ್ರಾ.ಪಂ. ಮತಎಣಿಕೆ ಕೇಂದ್ರ ಬೆಳಿಗ್ಗೆಯಿಂದಲೂ ಭರ್ತಿ ಅಭ್ಯರ್ಥಿಗಳಿಂದ ತುಂಬಿ ಎಲ್ಲರ ಗಮನ ಸೆಳೆಯುತ್ತಿತ್ತು.
ಬಿಸಿಲನ್ನೂ ಲೆಕ್ಕಿಸದೆ ಅಭ್ಯರ್ಥಿಗಳ ಫಲಿತಾಂಶಕ್ಕೆ ಕುತೂಹಲದಿಂದ ಎದುರು ನೋಡುತ್ತಿದ್ದ ಬೆಂಬಲಿಗರು. |
ಹುಳಿಯಾರು ಪಂಚಾಯ್ತಿಯ ಮತಎಣಿಕೆ ತಾಲ್ಲೂಕು ಕೇಂದ್ರವಾದ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ನಡೆದಿದ್ದು, ಇದಕ್ಕಾಗಿ ಎರಡು ಕೊಠಡಿಗಳಲ್ಲಿ ಮತಎಣಿಕೆ ವ್ಯವಸ್ಥೆ ಮಾಡಲಾಗಿತ್ತು. ಹೋಬಳಿ ವ್ಯಾಪ್ತಿಯ ೧೦ ಪಂಚಾಯ್ತಿಯ ಮತಎಣಿಕೆಯೂ ಚಿ.ನಾ.ಹಳ್ಳಿಯಲ್ಲಿ ನಡೆದಿದ್ದರಿಂದ ಬೆಳಿಗ್ಗೆಯೇ ಕಾಲೇಜಿನ ಸುತ್ತಮುತ್ತ ಆವರಣ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು. ಹುಳಿಯಾರಿನ ೧೩ ಬ್ಲಾಕ್ ಗಳ ಪೈಕಿ ಎರಡೆರಡು ಬ್ಲಾಕ್ ಗಳಂತೆ ಏಕಕಾಲಕ್ಕೆ ೪ ಬ್ಲಾಕ್ ಗಳ ಮತಎಣಿಕೆ ನಡೆಸಲಾಯಿತು. ಬೆಳಿಗ್ಗೆ ೮ ರಿಂದ ಪ್ರಾರಂಭವಾದ ಮತಎಣಿಕೆ ಕಾರ್ಯದಲ್ಲಿ ೧ ಗಂಟೆಯ ಸಮಯಕ್ಕೆ ೪ ಬ್ಲಾಕ್ ಗಳ ಮತಎಣಿಕೆ ಸಂಪೂರ್ಣಗೊಂಡು ವಿಜೇತರನ್ನು ಘೋಷಿಸಲಾಯಿತು. ಒಟ್ಟು ೧೬೨ ಮಂದಿ ಸ್ಪರ್ಧಿಸಿರುವುದರಿಂದ ಮತ ಎಣಿಕೆ ಕಾರ್ಯಕ್ಕೆ ಹೆಚ್ಚಿನ ಸಮಯ ಹಿಡಿದು ಸಂಜೆಯಾದರೂ ಮುಂದುವರೆದಿತ್ತು. ಹೆಚ್ಚಿನ ಬ್ಲಾಕ್ ಗಳಲ್ಲಿ ೧೦ಕ್ಕೂ ಮೇಲ್ಪಟ್ಟು ಅಭ್ಯರ್ಥಿಗಳಿದ್ದು ೧೦ ನೇ ಬ್ಲಾಕ್ ನಲ್ಲಿ ೨೮ ಅಭ್ಯರ್ಥಿಗಳಿದಿದ್ದು ಎಣಿಕೆಕಾರ್ಯ ವಿಳಂಬವಾಗುವಂತಾಯಿತು. ಅಭ್ಯರ್ಥಿಗಳ ಪರ ಮತಎಣಿಕೆ ಏಜೆಂಟರ್ ಗಳೂ ಹಾಗೂ ಮತಎಣಿಕೆಕಾರ್ಯ ಸಿಬ್ಬಂದಿಗಳು ಸೇರಿದ್ದರಿಂದ ಕೊಠಡಿಗಳು ಜನದಟ್ಟಣೆಯಿಂದ ಕೂಡಿತ್ತು. ಪ್ರತಿಯೊಬ್ಬರಿಗೂ ಮತಪತ್ರಗಳನ್ನು ತೋರಿಸಿ ಮತಎಣಿಕೆ ಮಾಡುತ್ತಿದ್ದರಿಂದ ಯಾವುದೇ ಗೊಂದಲ , ಗಲಾಟೆಯಿಲ್ಲದೆ ಮತಎಣೆಕೆ ಸುಗಮವಾಗಿ ನಡೆಯಿತು. ಒಂದೆರಡು ಬ್ಲಾಕ್ ಗಳನ್ನು ಹೊರತುಪಡಿಸಿದರೆ ಎಲ್ಲಾ ಬ್ಲಾಕ್ ಗಳಲ್ಲೂ ತೀವ್ರ ಪೈಪೋಟಿಯ ಚುನಾವಣೆ ನಡೆದಿದ್ದರಿಂದ ಮತಎಣಿಕೆ ಕಾರ್ಯ ಕುತೂಹಲ ಕೆರಳಿಸಿತ್ತು.ಕೆಲವೊಂದೆರಡು ಅಭ್ಯರ್ಥಿಗಳು ನಿರೀಕ್ಷಿಸಿದಂತೆ ಗೆಲುವು ಸಾಧಿಸಿದರೆ, ತೀವ್ರ ಪೈಪೋಟಿ ನೀಡುತ್ತಾರೆಂದು ಭಾವಿಸಿದ್ದ ಅಭ್ಯರ್ಥಿಗಳು ಹೇಳ ಹೆಸರಿಲ್ಲದಂತೆ ಸೋತಿದ್ದಾರೆ. ಈ ಬಾರಿ ಅಭಿವೃದ್ದಿ ಹೆಸರಿನಲ್ಲಿ ಮತಯಾಚಿಸಿದವರು ಗೆಲ್ಲಲು ತಿಣುಕಿದರೆ, ಹಣ ಹಾಗೂ ಮತ್ತಿತರ ಆಮಿಷವೊಡ್ಡಿದ್ದ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ವ್ಯಂಗ್ಯವೆನಿಸಿದೆ.
ಒಟ್ಟಾರೆ ಈ ಬಾರಿ ಪಂಚಾಯ್ತಿಗೆ ಹೆಚ್ಚು ಹೊಸಮುಖಗಳು ಆಯ್ಕೆಯಾಗುತ್ತಾರೆಂಬ ನಿರೀಕ್ಷೆ ಹುಸಿಯಾಗಿದ್ದು ಈ ಹಿಂದೆ ಸದಸ್ಯರೇ ಹೆಚ್ಚು ಆಯ್ಕೆಯಾಗಿದ್ದು ಹುಳಿಯಾರು ಗ್ರಾ.ಪಂ. ಈ ಹಿಂದಿನಂತೆಯೇ ಉಳಿಯುತ್ತದೆಯೋ ಅಥವಾ ಅಭಿವೃದ್ದಿಪಥದತ್ತ ಸಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ