ಮತದಾನ ಮಾಡಲು ಹಲವೆಡೆಯಿಂದ ತಂತಮ್ಮ ಹಳ್ಳಿಗಳಿಗೆ ಆಗಮಿಸಿದ್ದ ಹೋಬಳಿಯ ಮತದಾರರು ಮತದಾನ ಮುಗಿಸಿ ಬೆಂಗಳೂರಿಗೆ ವಾಪಸ್ಸ್ ಹೋಗಲು ಬುಧವಾರ ಮುಂಜಾನೆ ಹರಸಾಹಸ ಪಡುವಂತಾಯಿತು. ಹೆಚ್ಚಿನ ಸರ್ಕಾರಿ ಬಸ್ ಗಳು ಚುನಾವಣೆ ಕಾರ್ಯಕ್ಕೆ ಉಪಯೋಗವಾಗಿದ್ದರಿಂದ ಬಸ್ ಗಳು ಸಹ ವಿರಳವಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗಲು ಬುಧವಾರ ಬೆಳಿಗ್ಗೆ ಜನ ಪರದಾಡುತಿರುವುದು |
ಮಂಗಳವಾರದ ಮತದಾನಕ್ಕೆ ಬೆಂಗಳೂರು ಸೇರಿದಂತೆ ಇತರೆಡೆಯಿಂದ ಕೆಲವರು ಸ್ವಯಂಪ್ರೇರಣೆಯಿಂದ ಮತದಾನ ಮಾಡಲು ಆಗಮಿಸಿದ್ದರೆ, ಮತ್ತೆ ಕೆಲವರನ್ನು ಗ್ರಾ.ಪಂ. ಕಣದಲ್ಲಿದ್ದ ಅಭ್ಯರ್ಥಿಗಳು ಪೋನ್ ಮಾಡಿ ಹೋಗಿ ಬರುವ ಖರ್ಚನ್ನು ಕೊಡುವುದಾಗಿ ಕರೆಸಿಕೊಂಡಿದ್ದರು, ಹೀಗಾಗಿ ಬೆಂಗಳೂರಿನಲ್ಲಿದ್ದ ಈ ಭಾಗದ ಸಾಕಷ್ಟು ಮಂದಿ ಹೇಗೋ ಓಟು ಹಾಕಿದಂಗೂ ಆಗುತ್ತೆ ಮನೆಕಡೆ ಹೋಗಿಬಂದಂಗೂ ಆಗುತ್ತದೆಂದು ಆಗಮಿಸಿದ್ದರು. ಇದೀಗ ಓಟು ಹಾಕಿದ್ದು ಮುಗಿದಿದ್ದು ಮತ್ತೆ ಕಾರ್ಯನಿಮಿತ್ತ ಬೆಂಗಳೂರು ಕಡೆ ಹೊರಟವರಿಗೆ ಬಸ್ಸಿನ ಸಮಸ್ಯೆ ಕಾಡಿದೆ.
ಮುಂಜಾನೆ ಮೂರುಗಂಟೆಯಿಂದಲೇ ಹೊಸದುರ್ಗದಿಂದ ಹುಳಿಯಾರು ಮಾರ್ಗವಾಗಿ ಬೆಂಗಳೂರು ಕಡೆ ಹೋಗುವ ಬಸ್ ಗಳು ಅಲ್ಲಿಂದಲೇ ಭರ್ತಿಯಾಗಿ ಬರುತ್ತಿದ್ದರಿಂದ ಹುಳಿಯಾರು ನಿಲ್ದಾಣಕ್ಕೆ ಬಸ್ ಬಂದರೂ ಸಹ ಬಸ್ ನಲ್ಲಿ ನಿಲ್ಲಲ್ಲು ಜಾಗವಿಲ್ಲದಂತೆ ಜನ ತುಂಬಿದ್ದರು. ಬೆಂಗಳೂರಿಗೆ ಹೋಗುವ ಖಾಸಗಿ ಬಸ್ ಗಳು ಬಾರದೆಯಿದ್ದು ಪ್ರಯಾಣಿಕರು ಪರಿತಪಿಸುವಂತಾಗಿತ್ತು. ಬಸ್ ಯಾವುದೇ ಬಂದರೂ ಸಾಕು ಜನ ಜೇನುನೋಣದಂತೆ ಅದರಬಳಿ ಮುತ್ತಿಕೊಂಡು, ಜಾಗವಿಲ್ಲದ್ದನ್ನು ಕಂಡು ನಿರಾಸೆಯಿಂದ ವಾಪಸ್ಸಾಗುತ್ತಿದ್ದರು.
ಹಬ್ಬಹರಿದಿನಗಳಲ್ಲೂ ಸಹ ಇದೇ ಸಮಸ್ಯೆಯಿದ್ದು ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಇಂತಹ ದಿನಗಳಲ್ಲಿ ಹುಳಿಯಾರಿನಿಂದ ಬೆಂಗಳೂರು ಕಡೆ ಹೋಗಲು ಕೆಲವೊಂದು ವಿಶೇಷ ಬಸ್ ಗಳನ್ನು ಬಿಡಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ