ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದೆ ತಡ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲ ನೀಡಲಿರುವ ಚುನಾಯಿತ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಪ್ರವಾಸದ ನೆಪದಲ್ಲಿ ಅಜ್ಞಾತ ಸ್ಥಳದ ಹಾದಿ ಹಿಡಿದಿದ್ದಾರೆ.
ಹುಳಿಯಾರು ಗ್ರಾ.ಪಂ. ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿಯಿದ್ದರೆ, ಮಹಿಳಾ ಸದಸ್ಯರು ೨೦ ಮಂದಿಯಿದ್ದಾರೆ. ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ದಕ್ಕಿದೆ.
ಅಧ್ಯಕ್ಷ ಸ್ಥಾನ ಈ ಬಾರಿ ಸಾಮನ್ಯಕ್ಕೆ ಬರಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಪುರುಷ ಸದಸ್ಯರುಗಳು ತೆರೆಮರೆಯ ಕಸರತ್ತು ನಡೆಸಿದ್ದರು.ಪಕ್ಷದ ಚಿಹ್ನೆ ಮೂಲಕ ಗೆಲ್ಲದಿದ್ದರೂ ಪಕ್ಷದ ಬೆಂಬಲದಿಂದ ಗೆದಿದ್ದ ಅಭ್ಯರ್ಥಿಗಳು ತಮ್ಮದೆ ಆದ ಲೆಕ್ಕಾಚಾರದಲ್ಲಿ ತೊಡಗಿಕೊಂಡು ಬಹುಮತ ಸಾಬೀತುಪಡಿಸಲು ಬೇಕಾದ 20 ಸದಸ್ಯರ ಬೆಂಬಲ ಪಡೆಯಲು ನಾನಾರೀತಿಯ ಹಾದಿ ಹಿಡಿದಿದ್ದರು. ಆದರೆ ಎಲ್ಲರ ನಿರೀಕ್ಷೆ ತಲೆಕೆಳಗಾಗಿ ಅಧ್ಯಕ್ಷರ ಸ್ಥಾನ ಈ ಬಾರಿಯೂ ಮಹಿಳೆಗೆ ಒಲಿದಿದ್ದರಿಂದ ಹೆಚ್ಚಿನ ಪೈಪೋಟಿ ತಪ್ಪಿದಂತಾಗಿದೆ.
ಪಂಚಾಯ್ತಿಯಲ್ಲಿ ಒಟ್ಟು ೨೦ ಮಂದಿ ಮಹಿಳಾ ಸದಸ್ಯರಿದ್ದು ಈ ಪೈಕಿ ಯಾರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.ತಮ್ಮ ಪಕ್ಷ ಅಧಿಕಾರದಲ್ಲಿರಲಿ ಎಂದು ರಾಜಕೀಯ ಪಕ್ಷಗಳ ನೇತಾರರು ಸಹ ನೇರ ಅಖಾಡಕಿಳಿದಿದ್ದು ಚುನಾಯಿತರಾಗಿರುವ ಸದಸ್ಯರನ್ನೂ ತಾವೇ ಭೇಟಿಯಾಗಿ ಮನವೊಲಿಸಿ ಒಗ್ಗೂಡಿಸುತ್ತಿದ್ದಾರೆ.
ಹುಳಿಯಾರು ಗ್ರಾ.ಪಂ.ಗೆ ಆಯ್ಕೆಯಾದ ಸದಸ್ಯರೊಂದಿಗೆ ಶಾಸಕ ಸುರೇಶ್ ಬಾಬು |
ಅಧ್ಯಕ್ಷ ಗದ್ದುಗೆ ಏರಲು ಎರಡನೇ ಬಾರಿ ಸದಸ್ಯರಾಗಿರುವ ಗೀತಾ ಅಶೋಕ್ ಬಾಬು,ಸಿದ್ದಗಂಗಮ್ಮ ,ಶಶಿಕಲಾ ಅಲ್ಲದೆ ಹೆಚ್.ಎಸ್.ಗೀತಾ,ಲತಾ ಮುಂತಾದವರು ಕಣದಲ್ಲಿದ್ದಾರೆ. ಬಿಜೆಪಿ ಬಣದಿಂದ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿರುವ ವಕೀಲ ರಮೇಶ್ ಬಾಬು ಅವರ ಪತ್ನಿ ಬಿಂಧು ಪೈಪೋಟಿಯಲ್ಲಿದ್ದಾರೆ.ಇವರು ಕೂಡ ವಕೀಲ ವೃತ್ತಿಯಲ್ಲಿದ್ದು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಪೈಪೋಟಿಯಿದ್ದು ಇವರುಗಳ ಪೈಕಿ ಯಾರು ಅಧ್ಯಕ್ಷೆಯಾಗಿ ಗದ್ದುಗೆ ಏರಲಿದ್ದಾರೆ ಎಂಬುದು ತಿಳಿಯದಾಗಿದೆ.
ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನ ಎಸ್ ಸಿ ಗೆ ಮೀಸಲಾಗಿದ್ದು ಆಯ್ಕೆಯಾದ ಸದಸ್ಯರಲ್ಲಿ ಕೇವಲ ಮೂರು ಮಂದಿ ಮಾತ್ರ ಎಸ್ ಸಿ ಸದಸ್ಯರುಗಳಿದ್ದು ಗಣೇಶ್ ಹೆಸರು ಮುಂಚೂಣಿಯಲ್ಲಿದೆ.
ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನ ಹಿಡಿಯಲು ಇವರೆಲ್ಲರೂ ತೀವ್ರ ಕಸರತ್ತು ನಡೆಸಿದ್ದು, ಬಹುಮತ ಸಾಬೀತಿಗೆ ಅವಶ್ಯವಿರುವ ಬಲವನ್ನು ಜತೆಯಲ್ಲಿ ಇಟ್ಟುಕೊಳ್ಳಲು ಪ್ರವಾಸ ದಾರಿ ಹುಡುಕಿದ್ದಾರೆ. ಹುದ್ದೆ ಆಕಾಂಕ್ಷಿಗಳಿಂದ ಚುನಾಯಿತ ಸದಸ್ಯರಿಗೆ ಡಿಮ್ಯಾಂಡ್ ಶುರುವಾಗಿದ್ದು,ಶಾಸಕರ ನೆರವಿನೊಂದಿಗೆ ತಮ್ಮ ಆಯ್ಕೆಗೆ ಅವಶ್ಯವಿರುವ ಸಂಖ್ಯೆಯಷ್ಟು ಸದಸ್ಯರನ್ನು ಕೂಡಿಸಿಕೊಂಡು ಅಜ್ಞಾತ ಸ್ಥಳಕ್ಕೆ ಶುಕ್ರವಾರ ರಾತ್ರಿಯೆ ಪ್ರವಾಸ ಹೋಗಿದ್ದಾರೆ.
ಅಧ್ಯಕ್ಷರ ಚುನಾವಣೆ ಘೋಷಣೆಯಾಗಿ ಚುನಾವಣೆ ದಿನದಂದೇ ನೇರವಾಗಿ ಪಂಚಾಯ್ತಿ ಹಾಲ್ ಗೆ ಆಗಮಿಸುವ ಇವರುಗಳು ಅಲ್ಲಿಯವರೆಗೂ ನಾಟ್ ರೀಚಬಲ್.
ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ನಿಗದಿಗೊಳಿಸಿರುವುದು ಮತ್ತು ಆಯ್ಕೆಯಾದವರ ವಿರುದ್ಧ ಎರಡೂವರೆ ವರ್ಷದವರೆಗೆ ಅವಿಶ್ವಾಸ ಮಂಡಿಸುವಂತಿಲ್ಲ ಎಂಬ ಹೊಸ ನಿಯಮ ತಂದಿರುವುದೆ ಆಕಾಂಕ್ಷಿಗಳಲ್ಲಿ ಹೆಚ್ಚಿನ ಆಸೆಗೆ ಕಾರಣವಾಗಿದೆ. ಯಾವ ರೀತಿಯಲ್ಲಾದರೂ ಸರಿ ,ಹೇಗಾದರೂ ಸರಿ ಅಧಿಕಾರ ಗಿಟ್ಟಿಸಿಕೊಳ್ಳಲೇಬೇಕು ಎಂಬ ನಿರ್ಧಾರದಿಂದ ತೀವ್ರ ಪೈಪೋಟಿ ಎದುರಾಗಿದೆ. ಒಟ್ಟಾರೆ ನಾನಾ ರೀತಿಯ ಲೆಕ್ಕಾಚಾರದ ಮೇಲೆ ಆಯ್ಕೆಯಾದ ಸದಸ್ಯರನ್ನು ಮನವೊಲಿಸಿ ಒಂದುಕಡೆ ಒಗ್ಗಟ್ಟಾಗಿಹಿಡಿ ದಿಟ್ಟುಕೊಳ್ಳುವ ಪ್ರಯತ್ನಕ್ಕೆ ಪ್ರವಾಸ ದಾರಿಮಾಡಿಕೊಟ್ಟಿರಿವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
--
ನಮ್ಮ ಪಕ್ಷದಲ್ಲಿ ಹೆಚ್ಚಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು ಎಲ್ಲರೂ ಒಟ್ಟಾಗಿ ಪ್ರವಾಸಕ್ಕೆ ಹೊರಟ್ಟಿದ್ದೇವೆ.ನಮಗಂತೂ ಪೈಸದ್ದೂ ಖರ್ಚಿಲ್ಲ.ಯಾರಿಗೆ ಬೆಂಬಲ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚುನಾವಣೆ ದಿನಯ ದಿನವೇ ನಾವೆಲ್ಲ ಮತ್ತೆ ವಾಪಸ್ ಬರುವುದು.-ಹೆಸರು ಹೇಳಲಿಚ್ಛಿಸದ ಗ್ರಾ.ಪಂ.ಸದಸ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ