ಗ್ರಾಮ ಪಂಚಾಯ್ತಿಯ ಚುನಾವಣೆಯ ಮತದಾನ ಮಂಗಳವಾರ ಮುಗಿದಿದ್ದು ಚುನಾವಣೆಯ ಕಾವು ಸ್ವಲ್ಪ ಕಡಿಮೆಯಾದಂತೆ ಕಂಡರೂ ಸಹ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳ ಸೋಲುಗೆಲುವಿನ ಫಲಿತಾಂಶ ಇದೇ ೫ ರ ಶುಕ್ರವಾರದಂದು ಪ್ರಕಟವಾಗಲಿದ್ದು, ಅಲ್ಲಿಯವರೆಗೂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ಯಾರುಗೆಲ್ಲುತ್ತಾರೆಂಬುದರ ಬಗ್ಗೆ ಬುಧವಾರ ಬೆಳಿಗ್ಗೆ ಬಸ್ ನಿಲ್ದಾಣ ಸ್ವಚ್ಚಗೊಳಿಸಲು ಬಂದ ಪೌರಕಾರ್ಮಿಕರಲ್ಲೂ ಕುತೂಹಲ ಮೂಡಿಸಿದ್ದು ಅವರುಗಳು ಸಹ ಚರ್ಚೆಯಲ್ಲಿ ತೊಡಗಿರುವುದು. |
ಹುಳಿಯಾರು ಗ್ರಾ.ಪಂ. ಚುನಾವಣೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಕುತೂಹಲ ಕೆರಳಿಸಿದ್ದು ಒಟ್ಟು ೧೬೨ ಅಭ್ಯರ್ಥಿಗಳು ಕಣದಲಿದ್ದು ೩೯ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿದೆ. ಚುನಾವಣೆಗಾಗಿ ಕಳೆದೊಂದು ತಿಂಗಳಿನಿಂದ ನಾನಾರೀತಿಯಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಸದ್ಯ ನಿರಾಳರಾಗಿದ್ದಾರೆ.
ಲೆಕ್ಕಾಚಾರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಅವರ ಪರ ಬೆಂಬಲಿಗರು ತಾವು ಮಾಡಿದ ಖರ್ಚು ವೆಚ್ಚ ಯಾವರೀತಿ ಗೆಲುವು ತರಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದರೆ. ಮತದಾರರು ತಾವು ಬೆಂಬಲಿಸಿದ ಅಭ್ಯರ್ಥಿ ಸೋಲುವನೋ , ಗೆಲ್ಲುವನೋ ಎಂದು ಗುಣಾಕಾರ, ಭಾಗಾಕಾರದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮುಂಜಾನೆಯಿಂದ ನಿನ್ನೆಯ ಬ್ಲಾಕ್ ವಾರು ಮತಚಲಾವಣೆಯ ಪಟ್ಟಿ ಕೈಯ್ಯಲಿಡಿದಿರುವ ಕೆಲ ಅಭ್ಯರ್ಥಿಗಳು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಾವಿಗಾಗಲೇ ಗೆಲುವಿನ ಹಾದಿಯಲ್ಲಿದ್ದೇವೆಂದು ಬೀಗುತ್ತಿದ್ದಾರೆ. ಕಾಫಿ,ಟೀ ಅಂಗಡಿಯಿಂದ ಹಿಡಿದು ಕ್ಷೌರದ ಅಂಗಡಿಯವರೆಗೆ, ಜನನಿಬಿಡ ಪ್ರದೇಶದಿಂದ ಹಿಡಿದು ಅರಳಿಕಟ್ಟೆಯವರೆಗೆ ಎಲ್ಲೆಂದರೆಲ್ಲಿ ಚುನಾವಣೆಯ ವಿಚಾರವೇ ಮಾತಾಗಿದೆ. ಈಗಾಗಲೇ ಅಭ್ಯರ್ಥಿಗಳು ಮತದಾರರಿಗೆ ಖರ್ಚು ಮಾಡಿರುವ ಆಧಾರದ ಮೇಲೆ ಸೋಲುಗೆಲುವಿನ ನಿಷ್ಕರ್ಷೆಯಾಗುತ್ತಿದ್ದು, ಇಂತವರೇ ಗೆಲ್ಲುತ್ತಾರೆಂಬ ಬೆಟಿಂಗ್ ಕೂಡ ಶುರುವಾಗಿದೆ.
ಕೆಲವರು ಈಗಾಗಲೇ ಗೆದ್ದಿದ್ದೇವೆಂದು ಬೀಗುತ್ತಿದ್ದು ಎಲ್ಲಾ ಅವರವರ ಊಹೆಗೆ ತಕ್ಕಂತೆ ಚರ್ಚಿಸುತ್ತಿದ್ದಾರೆ.ಕೆಲವರಿಗೆ ತಮ್ಮ ಹಿನ್ನಡೆ ಈಗಾಗಲೇ ಅರಿವಿಗೆ ಬಂದಿದ್ದು ಫಲಿತಾಂಶ ಬರುವವರೆಗೂ ಇಲ್ಲಿರುವುದೇ ಬೇಡವೆಂದು ಸ್ಥಳಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಮತ ಎಣಿಕೆ ದಿನಕ್ಕೆ ಬೆಂಬಲಿಗರೊಂದಿಗೆ ತೆರಳ ಬೇಕಿರುವ ಅಭ್ಯರ್ಥಿಗಳು ಅನಿವಾರ್ಯವಾಗಿ ಆ ದಿನದ ಖರ್ಚುವೆಚ್ಚವನ್ನು ಭರಿಸಬೇಕಿದ್ದು ಸೋತರೆ ಹೇಗಪ್ಪ ಎಂಬ ಚಿಂತೆ ಕೆಲವರಲ್ಲಿ ಮನೆಮಾಡಿದೆ.
ಕಳೆದ ಬಾರಿಗಿಂತ ಈ ಬಾರಿ ಮತದಾನದಲ್ಲಿ ಏರಿಕೆಯಾಗಿದ್ದು ನೂತನವಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದನ್ನು ಮತದಾರರು ಮತಪೆಟ್ಟಿಗೆಯಲ್ಲಿ ಗೌಪ್ಯವಾಗಿಟ್ಟಿದ್ದಾರೆ. ಫಲಿತಾಂಶಕ್ಕೆ ಇನ್ನೊಂದು ದಿನವಷ್ಟೆ ಬಾಕಿ ಉಳಿದಿದ್ದು ಸೋಲುಗೆಲುವಿನ ನಿರ್ಧಾರವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ