ಪ್ರಸ್ತುತ ಗ್ರಾಮ ಪಂಚಾಯ್ತಿಗಳಲ್ಲಿ ಗೆದ್ದ ಸದಸ್ಯರು ಗ್ರಾಮದ ಅಭಿವೃದ್ದಿಯತ್ತ ಗಮನಗೊಡದೆ ಜನರ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತ ಸಂಘದಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳು ಗ್ರಾಮದ ಅಭಿವೃದ್ದಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಸಾಗಿ ಎಂದು ಸಾಹಿತಿ ಪ್ರೋ.ಗಂಗಾಧರಪ್ಪ ತಿಳಿಸಿದರು.
ಹುಳಿಯಾರು ಹೋಬಳಿಯ ವಿವಿಧ ಗ್ರಾ.ಪಂ.ಯಲ್ಲಿ ರೈತಸಂಘದಿಂದ ಆಯ್ಕೆಯಾದ ಸದಸ್ಯರನ್ನು ಸಾಹಿತಿ ಪ್ರೋ.ಗಂಗಾಧರಪ್ಪ ಅಭಿನಂದಿಸಿದರು. |
ಹುಳಿಯಾರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಯಲ್ಲಿ ರೈತಸಂಘದ ಮೂಲಕ ಸ್ಪರ್ಧಿಸಿ ಚುನಾಯಿತರಾದ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬಾಗಿರುವ ಹಳ್ಳಿಗಳು ಮೊದಲು ಅಭಿವೃದ್ದಿಯಾಗಬೇಕು ಅದಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆ ಚುರುಕಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು. ವಿವಿಧ ರಾಜಕೀಯ ಪಕ್ಷದ ಹೆಸರಿನಲ್ಲಿ ಗೆಲ್ಲುವ ಸದಸ್ಯರು ಅಮಿಷಕ್ಕೆ ಒಳಗಾಗಿ ತಮ್ಮ ಪಕ್ಷವನ್ನೇ ಬದಲಿಸಿ ತಮ್ಮಿಷ್ಟದಂತೆ ಆಡಳಿತ ನಡೆಸುತ್ತಾರೆ. ರೈತಸಂಘದ ಹೆಸರಿನಲ್ಲಿ ಆಯ್ಕೆಯಾದ ಸದಸ್ಯರುಗಳು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷ ಸೇರದೆ ಸ್ವತಂತ್ರವಾಗಿಯೇ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಎಂದರು.
ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳಿಂದ ಗ್ರಾಮೀಣ ಭಾಗದ ರೈತರು ವಂಚಿತರಾಗುತ್ತಿದ್ದು ಅಂತಹ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವ ಕಾರ್ಯವನ್ನು ಮಾಡಿ. ಈ ಬಾರಿ ಹತ್ತನ್ನೆರಡು ಸ್ಥಾನ ಪಡೆದಿರುವ ರೈತ ಸಂಘ ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ಸಂಖ್ಯೆಯ ಸದಸ್ಯರನ್ನು ಹೊಂದಲು ಸಹಕಾರಿಯಾಗಲಿದೆ ಎಂದರು.
ಈ ವೇಳೆ ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹಸಿರುಸೇನೆ ಸಂಚಾಲಕ ಕೆಂಕೆರೆ ಸತೀಶ್, ಪಾತ್ರೆಸತೀಶ್,ತಿಮ್ಮನಹಳ್ಳಿ ಲೋಕಣ್ಣ,ಕಾಡಿನರಾಜನಾಗಣ್ಣ, ಗುರುದೇಗೌಡ್ರು, ಪ್ರಕಾಶಯ್ಯ,ಮಂಜು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ