ಕಳೆದ ೨೦ ದಿನಗಳಿಂದ ಚುನಾವಣೆಯ ಹಣಾಹಣಿಯಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಹಾಗೂ ಮತದಾರರು ಇದೀಗ ಚುನಾವಣೆ ಮುಗಿದು ಫಲಿತಾಂಶ ಬಂದಿದ್ದು, ಯಾರು ಅಧ್ಯಕ್ಷರಾಗುತ್ತಾರೆ, ಉಪಾಧ್ಯಕ್ಷರಾಗುತ್ತಾರೆ, ಯಾವ ವರ್ಗಕ್ಕೆ ಮೀಸಲಾತಿ ಬರುತ್ತದೆಂಬ ಲೆಕ್ಕಾಚಾರದಲಿ ತೊಡಗಿದ್ದಾರೆ.
ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಇದೇ ೧೫ ರ ಒಳಗಾಗಿ ತಿಳಿಸುವುದಾಗಿ ಚುನಾವಣಾ ಅಯೋಗ ಹೇಳಿದ್ದು, ಯಾವ ವರ್ಗದವರಿಗೆ ಮೀಸಲಾತಿ ಬರುತ್ತದೆಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಸ್ಯರು ಹಾಗೂ ಜನರು ದಿನಗಣನೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ಗುರ್ತಿಸಿಕೊಂಡು ಆಯ್ಕೆಯಾಗಿರುವ ಗ್ರಾ.ಪಂ.ಸದಸ್ಯರುಗಳು ತಮ್ಮತಮ್ಮಲ್ಲೇ ಗುಂಪುಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷದ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಹಾಗೂ ಗಟ್ಟಿ ಮಾಡಿಕೊಳ್ಳುವಳ್ಳಿ ಮುಂದಾಗಿದ್ದಾರೆ.
ಕೆಲ ಸದಸ್ಯರು ತೆರೆಮರೆಯಲ್ಲಿ ತಮ್ಮ ರಾಜಕೀಯ ಪಕ್ಷದ ಮುಖಂಡರ ಭೇಟಿ ಮಾಡಿ ತಮ್ಮಲ್ಲಿರುವ ವರ್ಗದವರಿಗೆ ಮೀಸಲಾತಿ ಬರುವಂತೆ ಮಾಡಿ ಎಂದು ಒತ್ತಾಯ ಸಹ ಮಾಡುತ್ತಿದ್ದಾರೆ. ಕೆಲ ಸದಸ್ಯರು ಕಳೆದ ವರ್ಷಗಳ ಹಿಂದಿನ ಗ್ರಾಮ ಪಂಚಾಯ್ತಿಯ ಅಧ್ಯಕ್ಷಗಾದಿಯ ಮೀಸಲಾತಿಯನ್ನು ಗಮನಿಸಿ ಈ ಬಾರಿ ಇಂತಹ ವರ್ಗಕ್ಕೆ ಬಂದರು ಬರಬಹುದೆಂಬ ಲೆಕ್ಕಾಚಾರ ಸಹ ಹಾಕುತ್ತಿದ್ದಾರೆ. ಪಕ್ಷೇತರವಾಗಿ ಗೆದ್ದವರನ್ನು ಹಾಗೂ ತಮ್ಮ ಎದುರು ಪಕ್ಷದವರನ್ನು ತಮ್ಮತ್ತ ಸೆಳೆಯಲು ಕೆಲ ರಾಜಕೀಯ ಪಕ್ಷದವರು ಸದಸ್ಯರುಗಳಿಗೆ ಕೆಲ ಆಮಿಷವೊಡ್ಡುವುದಲ್ಲದೆ, ತಂತ್ರಗಳನ್ನು ಮಾಡಲು ಸಿದ್ದರಾಗುತ್ತಿದ್ದಾರೆ. ಕೆಲ ಪಂಚಾಯ್ತಿಗಳಲ್ಲಿ ಪಕ್ಶೇತರರಿಗೆ ಡಿಮ್ಯಾಂಡಿದ್ದು ಚುನಾವಣೆಯಲ್ಲಿ ಹಣದ ಹೊಳೆ ಹರಿದಂತೆ ಪಕ್ಷೇತರರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಹಣದ ಹರಿವು ನಡೆಯುವುದರಲ್ಲಿ ಎರಡುಮಾತಿಲ್ಲ.
ಒಟ್ಟಾರೆ ಇಷ್ಟು ದಿನ ಚುನಾವಣೆಯ ಪ್ರಚಾರ, ಮತದಾನ ಹಾಗೂ ಫಲಿತಾಂಶದ ಗುಂಗಿನಲ್ಲಿದ್ದ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಮತದಾರರು ಇದೀಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಯನ್ನು ಯಾರು ಏರುತ್ತಾರೆ, ಯಾರಿಗೆ ಆ ಸ್ಥಾನ ದಕ್ಕಲಿದೆ ಎಂದು ತಮ್ಮಲ್ಲೇ ಲೆಕ್ಕಾಚಾರ ಹಾಕುತ್ತಿದ್ದು ಚುನಾವಣಾ ಅಯೋಗ ಯಾವಾಗ ಮೀಸಲಾತಿ ಪ್ರಕಟಿಸುತ್ತದೆಯೋ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ