ಕಳೆದ ನೂರಾರು ಶತಮಾನದ ಹಿಂದಿನ ಐತಿಹಾಸಿಕ ಹಿನ್ನಲೆಯನ್ನು ಹುಡುಕುತ್ತಾ ಸಾಗಿದರೆ ಅಂದು ನಡೆದ ಘಟನೆಗಳ ಬಗ್ಗೆ ತಿಳಿಯುವುದು ಆ ಕಾಲದಲ್ಲಿ ರಚನೆಯಾದ ಶಾಸನಗಳಿಂದ ಮಾತ್ರ ಹಾಗಾಗಿ ಶಾಸನಗಳು ಇತಿಹಾಸವನ್ನು ತಿಳಿಸುವ ವಾಹಿನಿಗಳಾಗಿವೆ ಎಂದು ಶಾಸನಗಳ ಸಂಶೋಧಕ ಚಿತ್ರದುರ್ಗದ ಡಾ.ರಾಜಶೇಖರಪ್ಪ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ "ಶಾಸನಗಳು ಏನು- ಎತ್ತ , ಶಾಸನಗಳ ಸುತ್ತಮುತ್ತ " ವಿಷಯ ಕುರಿತು ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಶಾಸನಗಳ ಕುರಿತು ತಿಳಿಸಿದರು.
ಚರಿತ್ರೆಯನ್ನು ಕಟ್ಟುವ ಇಟ್ಟಿಗೆಯಂತೆ ಶಾಸನಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಈ ಹಿಂದೆ ನಡೆದ ಅನೇಕ ವಿಚಾರಗಳನ್ನು ನಮಗೆ ತಿಳಿಸುತ್ತವೆ. ಈ ಶಾಸನಗಳಲ್ಲಿ ಅನೇಕ ವಿಧವಾದ ಶಾಸನಗಳಿದ್ದು ಇದುವರೆಗು ದೊರೆತಿರುವ ಶಾಸನಗಳಲ್ಲಿ ಶಿಲಾ ಶಾಸನಗಳೇ ಹೆಚ್ಚಿನವು ಎಂದರು. ಶಾಸನಗಳ ಬಗ್ಗೆ ಜನಸಾಮಾನ್ಯರು ತಪ್ಪುಕಲ್ಪನೆ ಹೊಂದಿ ಶಾಸನಗಳು ಇರುವ ಜಾಗದಲ್ಲಿ ನಿಧಿ,ಸಂಪತ್ತು ಇದೆ ಎಂದು ತಪ್ಪು ತಿಳಿದು ಅವುಗಳನ್ನು ವಿಗ್ನಗೊಳಿಸುವಲ್ಲಿ ಮುಂದಾದ ಅನೇಕ ಘಟನೆಗಳು ನಡೆದಿವೆ. ಈರೀತಿ ಮಾಡುವುದರಿಂದ ಅನೇಕ ಮಾಹಿತಿಗಳು ನಮಗೆ ದೊರೆಯದಂತಾಗುತ್ತದೆ ಎಂದರು.
ಹಿಂದಿನ ಕಾಲದ ರಾಜರುಗಳು ತಮ್ಮ ಆಳ್ವಿಕೆ ಕಾಲದಲ್ಲಿ ಘಟಿಸಿದ ಮಹತ್ವ ಘಟನೆಗಳು, ಯುದ್ದದಲ್ಲಿ ಗೆದ್ದ ನೆನಪಾಗಿ ಅಥವಾ ವೀರಮರಣದ ಸಂಕೇತವಾಗಿ , ಗ್ರಾಮಗಳನ್ನು ದತ್ತು ನೀಡಿದ ಕುರುಹಾಗಿ ಶಾಸನಗಳನ್ನು ಕೆತ್ತಿಸಿ ಅವುಗಳನ್ನು ತಮ್ಮ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸುತ್ತಿದ್ದರು. ಈರೀತಿ ಸ್ಥಾಪಿಸಿದ ಅನೇಕ ಶಾಸನಗಳು ಸಂಶೋಧನೆಯ ಫಲವಾಗಿ ನಮಗೆ ಲಭಿಸಿವೆ ಎಂದು ತಿಳಿಸಿದರು. ರಾಜ್ಯದಲ್ಲಿ ದೊರೆತಿರುವ ಶಾಸನಗಳಲ್ಲಿ ಅತಿಹೆಚ್ಚು ಚಿತ್ರದುರ್ಗ ಜಿಲ್ಲೆಯ ಅಕ್ಕಪಕ್ಕದ ಹಳ್ಳಿಗಳ್ಳಿ ದೊರೆತಿದ್ದು ಅವುಗಳನ್ನು ಸಂರಕ್ಷಿಸಿರುವುದಾಗಿ ತಿಳಿಸಿದರು.
ಪ್ರತಿ ಗ್ರಾಮಗಳ ದೇವಾಲಯ ಅಥವಾ ಪ್ರಮುಖ ಸ್ಥಳಗಳಲ್ಲಿ ಇಂತಹ ಶಾಸನಗಳು ಕಂಡುಬರುತ್ತವೆ ಅಂತಹವುಗಳನ್ನು ಸಂರಕ್ಷಿಸುವಲ್ಲಿ ನಾವುಗಳು ಮುಂದಾಗಬೇಕು. ಇದರಿಂದ ನಮ್ಮ ನಾಡಿನ ಹಿರಿಮೆಯ ಬಗ್ಗೆ ಮುಂದಿನ ಪೀಳಿಗೆಯವರಿಗೆ ತಿಳಿಸಲು ಸಹಕಾರಿಯಾಗಲಿದೆ ಎಂದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಕನ್ನಡ ಉಪನ್ಯಾಸಕರಾದ ಶಂಕರಲಿಂಗಯ್ಯ, ಗೋವಿಂದ್, ಚಿಕ್ಕನಾಯಕನಹಳ್ಳಿ ಕಾಲೇಜಿನ ಉಪನ್ಯಾಸಕರಾದ ಕೃಷ್ಣಮೂರ್ತಿ, ಸುರೇಶ್, ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ