ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷತೊಡಕು ಎಂದು ಆಚರಿಸಿಕೊಂಡು ಬರುವ ಪರಿಪಾಟವಿದ್ದು, ವರ್ಷ ತೊಡಕಿನಂದು ಖಾರದಊಟ ಸರ್ವೆ ಸಾಮಾನ್ಯವಾಗಿರುವ ಹಿನ್ನಲೆಯಲ್ಲಿ ಖಾರದ ಅಡುಗೆ ಅಂದರೆ ಮಾಂಸದ ಅಡುಗೆಗಾಗಿ ಕೋಳಿ ಕೊಂಡುಕೊಳ್ಳಲು ಮಾಂಸಾಹಾರಿಗಳು ಪಟ್ಟಣಕ್ಕೆ ಆಗಮಿಸಿದ್ದು ಕೋಳಿ ವ್ಯಾಪಾರ ಕಳೆಗಟ್ಟುವಂತೆ ಮಾಡಿತ್ತು.
ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಇದೆ.
ಕೋಳಿ ವ್ಯಾಪಾರ ; ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಅಡುಗೆ ಮಾಡಿ ಹಬ್ಬ ಆಚರಿಸುವುದು ಒಂದೆಡೆಯಾದರೆ, ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಮಾಂಸಹಾರಿ ವರ್ಗದ ಜನ ಈ ಹಬ್ಬವನ್ನು ಕುರಿ ಕೋಳಿ ಮಾಂಸದಿಂದ ಅಡುಗೆ ಮಾಡಿ ವರ್ಷದ ತೊಡಕಾಗಿ ಆಚರಿಸುತ್ತಾರೆ. ಮಾಂಸಾಹಾರಿಗಳು ಯುಗಾದಿ ದಿನಕ್ಕಿಂತ ವರ್ಷತೊಡಕಿನ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಲ್ಲದೆ ಅಂದು ತಮಗೆ ಬೇಕಾದಷ್ಟು ಕೋಳಿ ,ಕುರಿ ಮಾಂಸವನ್ನು ಕೊಂಡು ತಂದು ಅದರ ಖಾದ್ಯ ಸಿದ್ದಗೊಳಿಸಿ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಊಣಬಡಿಸುವುದು ವಾಡಿಕೆಯಾಗಿದೆ.
ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ಕೋಳಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಪ್ರಾರಂಭಗೊಂಡು ಫಾರಂಕೋಳಿ ಕೆಜಿಗೆ ೬೫ ರೂ, ಬಾಯ್ಲರ್ ಕೋಳಿ ಕೆಜಿಗೆ ೧೦೦ರೂನಂತೆ ವ್ಯಾಪಾರ ನಡೆಯುತ್ತಿತ್ತು. ಮಾಂಸದ ಅಡುಗೆ ಸಿದ್ದ ಪಡಿಸಲು ಬೇಕಾದ ಶುಂಠಿ,ಕೊತ್ತಂಬರಿ,ಸೌತೆಕಾಯಿ,ನಿಂಬೆಹಣ್ಣಿಗೂಸಹ ಬೇಡಿಕೆಯಿತ್ತು.
ಕಳೆದ ವರ್ಷದ ಹಬ್ಬದಲ್ಲಿ ಪಟ್ಟಣದ ಕೋಳಿ ಅಂಗಡಿಗಳ ಮುಂದೆ ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಹೆಚ್ಚಾಗಿ ಆಗಮಿಸಿದ್ದರಿಂದ ಜಾತ್ರೆವಾತಾವರಣ ಉಂಟಾಗಿತ್ತು. ಆದರೆ ಈ ಬಾರಿ ಬಸ್ ನಿಲ್ದಾಣದಲ್ಲಿ ಕೋಳಿ ಅಂಗಡಿಗಳು ಇಲ್ಲದ ಕಾರಣ ಕೋಳಿ ಕೊಳ್ಳಲು ಬಂದ ಕೆಲವರು ಅಂಗಡಿಯ ಹುಡುಕಾಟದಲ್ಲಿದ್ದು ಬಸ್ ನಿಲ್ದಾಣದಲ್ಲಿ ಅಂಗಡಿಗಳಿರುವ ಜಾಗವನ್ನು ಕೇಳಿ ಹೋಗುತ್ತಿದ್ದರು.
ವ್ಯಾಪಾರದಲ್ಲಿ ಇಳಿಕೆ : ಹುಳಿಯಾರು ಪಟ್ಟಣಕ್ಕೆ ಶ್ರೀರಾಂಪುರ, ಮತ್ತಿಘಟ್ಟ, ಮತ್ತೋಡ್ ಸೇರಿದಂತೆ ಸುಮಾರು ೨೦ ಕಿ.ಮೀ.ದೂರದ ಊರುಗಳಿಂದ ಜನ ಬಂದ ಕೋಳಿಗಳನ್ನು ಕೊಂಡುಕೊಳ್ಳುತ್ತಿದ್ದರು ಆದರೆ ಈ ಬಾರಿ ಬಸ್ ನಿಲ್ದಾಣದ ಅಂಗಡಿಗಳನ್ನು ತೆರವು ಮಾಡಿದ್ದರಿಂದ ಇಲ್ಲಿದ್ದ ಕೊಳಿ ಅಂಗಡಿಗಳೆಲ್ಲಾ ಚದುರಿದ್ದು ಜಾಗಸಿಗದೆ ಪರದಾಡುವಂತಾಗಿತ್ತು. ಇದನ್ನರಿತ ಜನರು ಹುಳಿಯಾರಿನಲ್ಲಿ ಕೋಳಿ ಸಿಗುತ್ತದೆಯೋ ಎಲ್ಲವೋ ಎಂದು ಹೊಸದುರ್ಗ, ಚಿ.ನಾ.ಹಳ್ಳಿ, ಹಿರಿಯೂರು ಕಡೆ ಹೋಗಿದ್ದು ಹುಳಿಯಾರಿನ ಅಕ್ಕಪಕ್ಕದ ಜನರನ್ನು ಬಿಟ್ಟರೆ ದೂರದೂರುಗಳ ಹಳೆ ಗಿರಾಕಿಗಳು ಸಹ ಬಾರದೆಯಿದ್ದು ಕೋಳಿ ವ್ಯಾಪಾರವನ್ನು ಕುಂದುವಂತೆ ಮಾಡಿದೆ. ಕಳೆದಬಾರಿ ಫಾರಂಕೋಳಿ ಪ್ರತಿ ಕೆಜಿಗೆ ೮೦ ರೂ ಇದ್ದರೂ ಸಹ ಜನ ಹೆಚ್ಚಾಗಿ ಬಂದು ಕೊಂಡುಕೊಳ್ಳುತ್ತಿದ್ದು ಆದರೆ ಈಬಾರಿ ಅದೇ ಫಾರಂಕೋಳಿ ಬೆಲೆ ಕೆಜಿಗೆ ೬೫ ರೂ ಆಗಿದ್ದರೂ ಕೊಳ್ಳುವ ಜನ ಕಡಿಮೆಯಾಗಿದ್ದಾರೆ.
ಬಸ್ ನಿಲ್ದಾಣದಿಂದ ಅಂಗಡಿಗಳನ್ನು ತೆಗೆಸಿದ ನಂತರ ಕೋಳಿ ಅಂಗಡಿಯವರು ಜಾಗ ಸಿಗದೆ ಚೆಲ್ಲಾಪಿಲ್ಲಿಯಾಗಿದ್ದು ಜನರು ಬರುತ್ತಾರೋ ಇಲ್ಲವೋ ಎಂದು ಕಳೆದ ಬಾರಿ ತಸಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಾಲ್ಕರಿಂದ ಐದು ಲಾರಿ ಲೋಡ್ ಕೋಳಿಗಳನ್ನು ಮಾತ್ರ ತಮಿಳುನಾಡು, ಬಳ್ಳಾರಿ,ಹೊಸಪೇಟೆ ಭಾಗದಿಂದ ತರಿಸಿದ್ದೇವೆ. ತೆರವಿಗೂ ಮುನ್ನಾ ೭೦-೮೦ ಜನ ಕೋಳಿ ವ್ಯಾಪಾರ ಮಾಡುತ್ತಿದ್ದು ಹತ್ತು ಲಕ್ಷದವರೆಗೆ ವಹಿವಾಟು ನಡೆದಿತ್ತು ಆದರೆ ಈ ಬಾರಿ ಕೇವಲ ೩೦ ಜನ ಮಾತ್ರ ವ್ಯಾಪಾರ ಮಾಡುತ್ತಿದ್ದು ವಹಿವಾಟು ಐದಾರು ಲಕ್ಷಕ್ಕೆ ಕುಸಿದಿದೆ. ಹೋದ ಯುಗಾದಿಯಲ್ಲಿ ೭೦ ಜಾಲ ಕೋಳಿ ಮಾರಿದ್ದೆ ಆದರೆ ಈಸಲ ೩೦ಜಾಲ ಕೋಳಿ ಮಾರುವುದು ದುಸ್ಥರವಾಗಿದೆ ಎಂದು ಕೋಳಿ ಶ್ರೀನಿವಾಸ್ ತಿಳಿಸುತ್ತಾರೆ.
---------------------
ಬಸ್ ನಿಲ್ದಾಣದಲ್ಲಿದ್ದ ಅಂಗಡಿಗಳ ತೆರವಿನಿಂದಾಗಿ ಕೋಳಿ ಅಂಗಡಿಯವರು ದಿಕ್ಕಾಪಾಲಿಗಿದ್ದು ಈಗ ಅಂಗಡಿಗಳಿರುವ ಜಾಗ ಸರಿಯಾಗಿ ತಿಳಿಯದೆ ಕೋಳಿ ಕೊಳ್ಳಲು ಗಿರಾಕಿಗಳು ಬರುತ್ತಿಲ್ಲ. ಈ ಹಿಂದೆ ಬರುತ್ತಿದ್ದ ಸಾಕಷ್ಟು ಹಳೆ ಗಿರಾಕಿಗಳು ಇತ್ತ ಸುಳಿಯದೆ ವ್ಯಾಪಾರ ಡಲ್ಲಾಗಿದೆ : ಕೋಳಿ ವ್ಯಾಪಾರಿ ಕೋಳೀಶ್ರೀನಿವಾಸ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ