ಹುಳಿಯಾರು ಹೋಬಳಿ ಕಾರೇಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀರಂಗನಾಥಸ್ವಾಮಿಯ ವೈಭವಯುತ ಬ್ರಹ್ಮರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಗಾರದಲ್ಲಿ ವಾದ್ಯಮೇಳಗಳೊಂದಿಗೆ ಜರುಗಿತು.
ಹುಳಿಯಾರು ಹೋಬಳಿ ಕಾರೇಹಳ್ಳಿಯ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ನಡೆಯಿತು. |
ರಥೋತ್ಸವದ ಅಂಗವಾಗಿ ರಥವನ್ನು ಬಗೆಬಗೆ ಹೂ ಹಾರ, ಬಾವುಟಗಳಿಂದ ಸಿಂಗರಿಸಿದ್ದಲ್ಲದೆ, ಪುಣ್ಯಾಹ, ಅನ್ನಶಾಂತಿ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿದ್ದರು. ನಂತರ ರಂಗನಾಥಸ್ವಾಮಿಯ ಮೂಲಸ್ಥಾನದಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಬೆನಕನಹಳ್ಳಿಯ ಕರಿಯಮ್ಮ, ಯರೇಹಳ್ಳಿಯ ಕೆಂಪಮ್ಮ ಹಾಗೂ ಹೊಯ್ಸಳಕಟ್ಟೆ ಕರಿಯಮ್ಮ ದೇವರು, ಕೆಂಚರಾಯ, ಭೂತಪ್ಪ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ವಾದ್ಯ ಮೇಳದೊಂದಿಗೆ ರಥದಲ್ಲಿಗೆ ಕರೆದೊಯ್ಯಲಾಯಿತು. ರಥವನ್ನು ಪ್ರದಕ್ಷಿಣೆ ಬಂದು ಸ್ವಾಮಿಯನ್ನು ರಥಕ್ಕೇರಿಸಿ ರಥದ ಎದುರಿಗಿದ್ದ ಬಾಳೆಕಂದನ್ನು ತುಂಡರಿಸಿದ ನಂತರ ರಥವನ್ನೆಳೆಯಲಾಯಿತು. ರಥವನ್ನೆಳೆಯಲು ಕಾತುರದಿಂದಿದ್ದ ಭಕ್ತರು ಜೈಕಾರ ಹಾಕುತ್ತಾ ತೇರನ್ನೆಳೆದು ಸಂಭ್ರಮಿಸಿದರು. ದೂರದೂರುಗಳಿಂದ ಆಗಮಿಸಿದ ಭಕ್ತರು ಸ್ವಾಮಿಗೆ ಹಣ್ಣುಕಾಯಿ ಮಾಡಿಸಿ,ರಥಕ್ಕೆ ನಮಸ್ಕರಿಸುವ ಮೂಲಕ ತಮ್ಮ ಭಕ್ತಿಭಾವ ಅರ್ಪಿಸಿದರು.
ರಥೋತ್ಸವದ ನಂತರ ದಸೂಡಿಯ ಕೊಟ್ಟಿಗೆ ರಂಗೇಗೌಡರ ವಂಶಸ್ಥರಿಂದ ಬ್ರಾಹ್ಮಣರಿಗೆ ವಸಂತ, ಹುಳಿಯಾರಿನ ಸೀನಪ್ಪಶೆಟ್ಟರ ಮಕ್ಕಳು , ಸತ್ಯನಾರಾಯಣ ಮಕ್ಕಳಿಂದ ಆರ್ಯವೈಶ್ಯ ಮಂಡಳಿಯವರಿಗೆ, ತಿಮ್ಮನಹಳ್ಳಿಯ ಅಳ್ಳಪ್ಪ ವಂಶಸ್ಥರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಉಚಿತ ಸಾಮೂಹಿಕ ವಿವಾಹ: ರಥೋತ್ಸವದ ಅಂಗವಾಗಿ ಇದೇ ಪ್ರಥಮಬಾರಿಗೆ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ದಸೂಡಿಯ ಕೊಟ್ಟಿಗೆ ರಂಗೇಗೌಡರ ಮೊಮ್ಮಗ ಆರ್.ಜನಾರ್ಧನ್ ಅವರ ಸೇವಾರ್ಥದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಮೂರು ಜೋಡಿಗಳು ಸಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಗೋಪುರ ಕುಂಭಾಭಿಷೇಕ: ಮೇಲ್ಭಾಗದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದ ನೂತನ ಗೋಪುರದ ಕುಂಭಾಭಿಷೇಕ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯ ಇದೇ ದಿನ ಯಶಸ್ವಿಯಾಗಿ ನೆರವೇರಿತು ಗೋಪುರದ ದಾನಿಗಳಾದ .ಶಿರಾದ ಹನುಮಂತ್ ಪೆಟ್ರೋಲ್ ಬಂಕ್ ಮಾಲೀಕರಾದ ಟಿ.ಆರ್.ಶ್ರೀರಂಗ ದಂಪತಿಗಳು ಉಪಸ್ಥಿತಿಯಲ್ಲಿ ಬೆಂಗಳೂರಿನ ಶ್ರೀಧರ ದೀಕ್ಷಿತ್ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ಕಳಸ ಪ್ರತಿಷ್ಠಾಪನೆ ,ಸುದರ್ಶನ ಹೋಮ,ಲಕ್ಷ್ಮಿಹೋಮ ನೆರವೇರಿಸಿ ಪೂರ್ಣಾಹುತಿ ಸಮರ್ಪಿಸಲಾಯಿತು.
ಜಾತ್ರಾಮಹೋತ್ಸವಕ್ಕೆ ಉಪವಿಭಾಗಾಧಿಕಾರಿ ಡಾ.ಪ್ರಜ್ಞಾ ಅಮೆಂಬಳ, ತಹಸೀಲ್ದಾರ್ ಕಾಮಾಕ್ಷಮ್ಮ, ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ದಸೂಡಿ ರಂಗಸ್ವಾಮಿ, ಸಮಿತಿಯ ಸದಸ್ಯರು ಹಾಗೂ ಹುಳಿಯಾರು,ಗಾಣಧಾಳು,ಹೊಯ್ಸಳಕಟ್ಟೆ,ದಸೂಡಿ,ಕೆಂಕೆರೆ,ಬಡಕೇಗುಡ್ಳು,ಮಾರುಹೊಳೆ,ತಿಮ್ಮನಹಳ್ಳಿ,ಕಲ್ಲೇನಹಳ್ಳಿ,ಲಕ್ಕೇನಹಳ್ಳಿ,ಯಗಚಿಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭಕ್ತಾಧಿಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ