ವರದಿ : ಡಿ.ಆರ್.ನರೇಂದ್ರಬಾಬು
ಹುಳಿಯಾರು: ರಾಜ್ಯದಲ್ಲಿ ಕಳೆದೊಂದು ದಶಕದಿಂದ ನೀರಾ ಹೋರಾಟದಲ್ಲಿ ತೊಡಗಿಕೊಂಡಿದ್ದ ತೆಂಗುಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಸಿದ್ದರಾಮಯ್ಯನವರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ನೀರಾನೀತಿ ರೂಪಿಸಿ ನೀರಾ ಇಳಿಸಲು ಅನುಮತಿ ನೀಡಲು ಮುಂದಾಗಿರುವುದು ತೆಂಗುಬೆಳೆಗಾರರಲ್ಲಿ ಹರ್ಷತಂದಿದೆ.
ನೀರಾ ಇಳಿಸುತ್ತಿರುವುದು ( ಸಂಗ್ರಹಚಿತ್ರ) |
ಏನಿದು ನೀರಾ : ನೀರಾ ತೆಂಗಿನ ಮರದಿಂದ ಉತ್ಪತ್ತಿಯಾಗುವ ಆರೋಗ್ಯಕರ ಪೇಯವಾಗಿದೆ. ತೆಂಗಿನಮರದ ಸುಳಿಯಭಾಗದಲ್ಲಿ ಎಳೆಯ ಹೊಂಬಾಳೆಯ ತುದಿ ಕತ್ತರಿಸಿದಾಗ ಅದರಿಂದ ಸುರಿಯುವ ರಸವೇ ನೀರಾವಾಗಿದ್ದು ಇದನ್ನು ಶೇಖರಿಸಿ ಸೂರ್ಯೋದಯದ ಮುನ್ನವೇ ಸೇವಿಸಿದಲ್ಲಿ ಆರೋಗ್ಯಕರವಾಗಿರುತ್ತದೆ. ಸೂರ್ಯೋದಯದ ನಂತರ ಇದು ಹುಳಿ ಹೆಂಡವಾಗಿ ಪರಿವರ್ತನೆಯಾಗುವುದರಿಂದ ಇದನ್ನು ಸಾರಾಯಿ ಎಂದೇ ಪರಿಗಣಿಸಲಾಗುತ್ತದೆ. ಅಬಕಾರಿ ಕಾಯ್ದೆಯಡಿ ಇದನ್ನು ಸಾರಾಯಿ ಎಂದೇ ಪರಿಗಣಿಸಿದ್ದು ಸಾರ್ವಜನಿಕವಾಗಿ ಮಾರುವಂತಿಲ್ಲ ಎಂದು ಸೂಚಿಸಿದೆ.
ಆಲ್ಕೋಹಾಲಾ? : ನೀರಾ ಹಾಗೂ ನೀರಾ ಇಳಿಸಿ ಮಾರಾಟ ಮಾಡುವುದರ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ನೀರಾ ಮತ್ತು ಬರಿಸುವ ಪೇಯ ಇದನ್ನು ಕೆಲವೇ ಗಂಟೆಯೋಳಗೆ ಕುಡಿಯದೆ ಹೋದಲ್ಲಿ ಮದ್ಯವಾಗಿ ಪರಿವರ್ತನೆಯಾಗುವ ಕಾರಣದಿಂದ ಇದನ್ನು ಅಬಕಾರಿ ಇಲಾಖೆ ವ್ಯಾಪ್ತಿಗೆ ಸೇರಿದಿದ್ದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಇದೊಂದೆ ಕಾರಣದಿಂದಾಗಿ ನೀರಾ ಮಾರಾಟ ಬಲು ದುಸ್ಥರವಾಗಿದ್ದು , ತೆಂಗಿನಮರದಿಂದ ಇಳಿಸಿದ ಕೆಲವೇ ಗಂಟೆಗಳಲ್ಲಿ ಮದ್ಯವಾಗುವ ಇದನ್ನು ಸಂಸ್ಕರಿಸಿ ಮಾರಾಟ ಮಾಡುವುದಕ್ಕೆ ಸಮಗ್ರನೀತಿ ರೂಪಿಸಬೇಕೆಂದು ಹಾಗೂ ಅಬಕಾರಿ ತಿದ್ದುಪಡಿಗೆ ಬದಲಾವಣೆ ತರಬೇಕೆಂದು ತೆಂಗುಬೆಳೆಗಾರರ ಬಹುದಿನಗಳ ಬೇಡಿಕೆಯಾಗಿತ್ತು.
ನೀರಾ ನೈಸರ್ಗಿಕ ಪೇಯವಾಗಿದ್ದು ಅಲ್ಕೋಹಾಲ್ ಪ್ರಮಾಣ ಶೇ.೧ ರಷ್ಟಿದ್ದು, ವಿದೇಶಿ ತಂಪು ಪಾನೀಯಗಳ ಪ್ರಮಾಣಕ್ಕಿಂತ ಕಡಿಮೆ ಇದಾಗ್ಯೂ ತಡವಾದಲ್ಲಿ ಇದು ಸಾರಾಯಿಯಾಗುತ್ತದೆ ತಪ್ಪು ತಿಳುವಳಿಕೆ ಜನರಲ್ಲಿದೆ. ಇದನ್ನು ಹೋಗಲಾಡಿಸಿ ನೀರಾ ನೈಸರ್ಗಿಕ ತಾಜಾತನ ಕಳೆದುಕೊಳ್ಳದಂತೆ ಸಂರಕ್ಷಿಸಿಡಲು ಕೇಂದ್ರೀಯ ಆಹಾರ ಸಂಶೋಧನ ಸಂಸ್ಥೆ ತಂತ್ರಜ್ಞಾನ ಬಳಸಿಕೊಂಡು ಮಾರಾಟ ಮಾಡಬಹುದಾಗಿದೆ.
ಕಳೆದ ೧೦ ವರ್ಷದ ಹಿಂದೆ ತೆಂಗಿಗೆ ನುಸಿರೋಗ ತಗುಲಿದಾಗ ಕಂಗೆಟ್ಟಿದ ರೈತರಿಗೆ ನೀರಾ ಇಳಿಸುವುದು ಪರ್ಯಾಯವಾಗಿ ಕಂಡು ರೈತರು ನೀರಾ ತೆಗೆಯುವ ಮೂಲಕವಾದರೂ ಲಾಭ ಮಾಡಿಕೊಳ್ಳುವ ದೃಷ್ಠಿಯಿಂದ ನೀರಾ ನೀತಿ ಘೋಷಿಸುವಂತೆ ಒತ್ತಾಯಿಸಿದ್ದರು.ರೈತಸಂಘದ ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಣದ ಬೆಂಬಲದಿಂದ ಇದಕ್ಕಾಗಿ ಹೋರಾಟವೇ ಪ್ರಾರಂಭವಾಗಿತ್ತು. ಈ ಬಗ್ಗೆ ಸಿಹಿನೀರಾ ಪ್ರಸರಣಾ ಸಮಿತಿಯೊಂದನ್ನು ರಚಿಸಿಕೊಂಡು ಸರ್ಕಾರಕ್ಕೆ ಒತ್ತಡಕೂಡ ಹೇರಲಾಗಿತ್ತು.
ಸದ್ಯ ಸರ್ಕಾರ ಬಜೆಟ್ ನಲ್ಲಿ ನೀರಾಭಾಗ್ಯ ಘೋಷಿಸಿದ್ದು ಅಬಕಾರಿ ಕಾಯ್ದೆ ನಿರ್ಬಂಧ ಸಡಿಲಗೊಳಿಸಲು ಮುಂದಾಗಿರುವುದು ಸಹಜವಾಗಿಯೇ ನೀರಾ ಮಾರಾಟಗಾರರಲ್ಲಿ ಸಂತಸ ಮೂಡಿದೆ. ಸದ್ಯ ಈ ಘೋಷಣೆಯಿಂದ ಈಗಾಗಲೇ ಆಸ್ತಿತ್ವಕ್ಕೆ ಬಂದಿರುವ ೫ ತೆಂಗು ಉತ್ಪಾದಕ ಕಂಪನಿಗಳಲ್ಲಿ ಸಹಸ್ರಾರು ಉದ್ಯೋಗಗಳು ಸೃಷ್ಠಿಯಾಗಲಿದ್ದು ಸರ್ಕಾರಕ್ಕೆ ಕೋಟಿಗಟ್ಟಲೇ ಆದಾಯ ಬರಲಿದೆ ಎನ್ನುತ್ತಾರೆ ಸಿಹಿನೀರಾ ಪ್ರಸರಣಾ ಸಮಿತಿಯ ರಾಜ್ಯ ಸಂಚಾಲಕರಾದ ಅಣೇಕಟ್ಟೆ ವಿಶ್ವನಾಥ್.
ತೆಂಗುಬೆಳೆಗಾರರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ನೆನ್ನೆತಾನೆ ನೀರಾ ಇಳಿಸಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿತರುವುದಾಗಿ ಘೋಷಿಸಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಪಟ್ಟಣದಲ್ಲಿ ನೀರಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಪೋಲೀಸ್ ನವರು ಬಂಧಿಸಿದ್ದಾರೆ.
--------------------------------------------------
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಂಗುಬೆಳೆಗಾರರ ಕಷ್ಟವನ್ನು ಅರಿತು ನೀರಾ ಇಳಿಸಲು ಹಾಗೂ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದು ಸಂಕಷ್ಟದಲ್ಲಿದ್ದ ತೆಂಗು ಬೆಳೆಗಾರರಿಗೆ ನೆರವಾದಂತಾಗಿದೆ : ರಾಜ್ಯ ಹಸಿರುಸೇನೆಯ ಕಾರ್ಯದರ್ಶಿ ಕೆಂಕೆರೆಸತೀಶ್ .
----------------------------------------------
ನೀರಾ ಮಾರಾಟ : ರೈತನ ಮೇಲೆ ಮೊಕದ್ದಮೆ
--------------
ರಾಜ್ಯ ಸರ್ಕಾರ ಒಂದೆಡೆ ಬಜೆಟ್ ನಲ್ಲಿ ನೀರಾ ಮಾರಾಟಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದರೆ ಮತ್ತೊಂದೆಡೆ ಅಬಕಾರಿ ಇಲಾಖೆಯವರು ನೀರಾ ಮಾರಲು ಮುಂದಾದ ರೈತನ ಮೇಲೆ ಮೊಕದ್ದಮೆ ಹೂಡಿರುವುದು ವಿಪರ್ಯಾಸವಾಗಿದೆ.ಹುಳಿಯಾರು ಸಮೀಪದ ಯರೇಹಳ್ಳಿ ತೋಟವೊಂದರ ಮೇಲೆ ದಾಳಿ ಮಾಡಿ ನೀರಾ ಮತ್ತು ಅದರ ಪರಿಕರಗಳನ್ನು ನಾಶಪಡಿಸಿದ್ದಲ್ಲದೆ ಇಳಿಸಿ ಮಾರಾಟದಲ್ಲಿ ತೊಡಗಿಕೊಂಡಿದ್ದ ಈರಣ್ಣ ಎಂಬಾತನ ಮೇಲೆ ಅಬಕಾರಿ ಇಲಾಖೆಯವರು ಶುಕ್ರವಾರ ಬೆಳಿಗ್ಗೆ ಕ್ರಮಕೈಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ