ಯುಗಾದಿ ಹಬ್ಬಕ್ಕೆಂದು ತಮ್ಮ ತಮ್ಮ ಊರುಗಳಿಗೆ ಆಗಮಿಸಿದ್ದ ಜನ ಹಬ್ಬ ಮುಗಿಸಿ ವಾಪಸ್ಸ್ ಬೆಂಗಳೂರಿಗೆ ಹೋಗಲು ಬಸ್ ಗಾಗಿ ಪರದಾಡುವಂತಾಗಿತ್ತು. ಪಟ್ಟಣದ ಬಸ್ ನಿಲ್ದಾಣ ರಾತ್ರಿಯಿಂದಲೇ ಹೆಚ್ಚು ಜನದಟ್ಟಣೆ ಉಂಟಾಗಿತ್ತಲ್ಲದೆ, ಬೆಂಗಳೂರು ಕಡೆ ಹೋಗುವ ಸರ್ಕಾರಿ ಹಾಗೂ ಖಾಸಗಿ ಬಸ್ ಗಳೆಲ್ಲಾ ತುಂಬಿ ಕಾಲಿಡಲು ಸ್ಥಳಾವಕಾಶವಿಲ್ಲದಾಗಿತ್ತು.
ಹುಳಿಯಾರು ಬಸ್ ನಿಲ್ದಾಣಕ್ಕೆ ಬಂದ ಬಸ್ ಹತ್ತಲು ಪರದಾಡುತ್ತಿರುವ ಪ್ರಯಾಣಿಕರು. |
ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸಾಕಷ್ಟು ಹಳ್ಳಿಯವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಯುಗಾದಿ ಹಬ್ಬದ ಆಚರಣೆಗಾಗಿ ಶುಕ್ರವಾರ ಆಗಮಿಸಿದ್ದರು. ಮನೆ ಮಂದಿಯಲ್ಲ ಸೇರಿ ಎರಡು ದಿನಗಳ ಕಾಲ ಹಬ್ಬ ಆಚರಿಸಿದ ಬಳಿಕ ವಾಪಸ್ಸ್ ಕೆಲಸಕ್ಕೆ ಹೋಗುವ ಸಲುವಾಗಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಂಗಳೂರುಕಡೆ ಹೊರಟಿದ್ದಾರೆ. ಪಟ್ಟಣದ ಅಕ್ಕಪಕ್ಕದ ಹಳ್ಳಿಯವರು ಬೆಂಗಳೂರಿಗೆ ಹೋಗಬೇಕೆಂದರೆ ಹುಳಿಯಾರು ಪಟ್ಟಣಕ್ಕೆ ಬಂದು ಹೋಗಬೇಕಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.
ಹುಳಿಯಾರಿನಿಂದ ಬೆಂಗಳೂರಿಗೆ ತೆರಳುವ ಬಸ್ಸುಗಳು ಹೊಸದುರ್ಗದಿಂದಲೇ ಬರಬೇಕಿದ್ದು ಅಲ್ಲಿಂದ ಬರುವ ಬಸ್ ಗಳೆಲ್ಲಾ ಭರ್ತಿಯಾಗಿರುತ್ತಿದ್ದರಿಂದ ಪ್ರಯಾಣಿಕರು ಸೀಟಿಗಾಗಿ ಹರಸಾಹಸ ಪಡುವಂತಾಯಿತು. ಸೀಟ್ ಬೇಡ ನಿಂತುಕೊಂಡೆ ಹೋಗೋಣವೆಂದರೂ ಸಹ ಕಾಲಿಡಲು ಜಾಗವಿಲ್ಲದಂತೆ ಬಸ್ ಗಳು ರಶ್ ಆಗಿದ್ದವು. ಖಾಸಗಿ ಬಸ್ ಗಳು ಭಾನುವಾರ ರಾತ್ರಿಯೇ ಬೆಂಗಳೂರು ಕಡೆ ಜನರನ್ನು ತುಂಬಿಕೊಂಡು ಹೋಗಿದ್ದು ಬೆಳಿಗ್ಗೆ ಸಮಯದಲ್ಲಿ ಖಾಸಗಿ ಬಸ್ ಗಳು ವಿರಳವಾಗಿದ್ದವು. ಬರುವ ಸರ್ಕಾರಿ ಬಸ್ ಗಳು ಫುಲ್ ಆಗಿರುತ್ತಿದ್ದವು. ಬೆಂಗಳೂರು ಕಡೆ ಬಸ್ ಬಂತು ಎಂದರೆ ಸಾಕು ಜನ ಒಮ್ಮೆಲೆ ಬಸ್ ನತ್ತ ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು .
ಬೇಡಿಕೆ ಮೇಲೆ ನಿಲುಗಡೆಯಿದ್ದ ಹಳ್ಳಿಗಳಲ್ಲಿ ಯಾವೊಂದು ಬಸ್ ಗಳು ನಿಲ್ಲಿಸದೆ ಬರುತ್ತಿದ್ದು ಹಳ್ಳಿಗಳಲ್ಲಿನ ಪ್ರಯಾಣಿಕರು ಚಾಲಕರಿಗೆ ಹಿಡಿಶಾಪ ಹಾಕುತ್ತಿದ್ದರು. ಹಬ್ಬದ ಸಮಯದಲ್ಲಿ ಹೆಚ್ಚುವರಿ ಬಸ್ ಬಿಡುವುದರ ಮೂಲಕ ಅನುಕೂಲ ಕಲ್ಪಿಸಬೇಕೆಂಬ ಮಾತುಗಳು ಕೇಳಿಬಂದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ