ಹುಳಿಯಾರು ಹೋಬಳಿಯ ರೈತಸಂಘ, ಹಸಿರುಸೇನೆ ಹಾಗೂ ರೈತರ ಸಹಕಾರದಲ್ಲಿ ಪಟ್ಟಣದಲ್ಲಿ ಇದೇ ಪ್ರಪ್ರಥಮ ಬಾರಿಗೆ ಪಟ್ಟಣದ ನಾಢಕಛೇರಿ ಆವರಣದಲ್ಲಿ ಮಾರ್ನಿಂಗ್ ಮಾರ್ಕೆಟ್ ಪ್ರಾರಂಭಿಸಿದ್ದು, ಜಿ.ಪಂ.ಸದಸ್ಯೆ ಮಂಜುಳಾ ಗವಿರಂಗಯ್ಯ ಭಾನುವಾರ ಬೆಳಿಗ್ಗೆ ಚಾಲನೆ ನೀಡಿದರು.
ಹುಳಿಯಾರಿನ ನಾಢಕಛೇರಿ ಆವರಣದಲ್ಲಿ ನೂತನವಾಗಿ ಪ್ರಾರಂಭವಾದ ಮುಂಜಾನೆ ಮಾರುಕಟ್ಟೆಗೆ ಜಿ.ಪಂ.ಸದಸ್ಯೆ ಮಂಜುಳಾ ಚಾಲನೆ ನೀಡಿದರು. |
ಈ ವೇಳೆ ಮಾತನಾಡಿದ ಅವರು ರೈತರು ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಮೂಲಕ ಮಾರುತ್ತಿದ್ದರೇ ಹೊರತು ತಾವೇ ನೇರವಾಗಿ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಇದೀಗ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತ ಸಂಘದ ಸದಸ್ಯರೆಲ್ಲಾ ಸೇರಿ ಮುಂಜಾನೆ ಮಾರುಕಟ್ಟೆಯನ್ನು ತೆರೆದಿದ್ದು ರೈತರು ತಾವು ಬೆಳೆದ ಬೆಳೆಯನ್ನು ಈ ಮಾರುಕಟ್ಟೆಯಲ್ಲಿಗೆ ತಂದು ಮಾರುವಂತೆ ತಿಳಿಸಿದರು. ಅಲ್ಲದೆ ಯಾವುದೇ ಮಧ್ಯವರ್ತಿಗಳಿಗೆ ರೈತರು ತಾವು ಬೆಳೆದ ಉತ್ಪನ್ನವನ್ನು ಮಾರದೇ ತಾವೇ ಸ್ವತ: ವ್ಯಾಪಾರ ಮಾಡುವಂತೆ ಹೇಳಿದರು.
ರೈತ ಮುಖಂಡ ಹೊಸಹಳ್ಳಿ ಚಂದ್ರಪ್ಪ ಮಾತನಾಡಿ, ರೈತರು ತಾವು ಬೆಳೆದ ಬೆಳೆಯನ್ನು ಸೈಕಲ್ ಮೂಲಕ ಮನೆಮನೆ ಬಾಗಿಲಿಗೆ ಹೋಗಿ ಮಾರುವ ಬದಲು ರೈತರೆಲ್ಲಾ ಒಂದೆಡೆ ಸೇರಿ ತಾವು ಬೆಳೆದ ಉತ್ಪನ್ನಗಳನ್ನು ಮಾರುವಂತಾಗುವ ನಿಟ್ಟಿನಿಂದ ಈ ಮಾರುಕಟ್ಟೆ ತೆರೆದಿದ್ದು, ಪ್ರತಿನಿತ್ಯ ಮುಂಜಾನೆ ೫ ರಿಂದ ೧೧ರ ವರೆಗೆ ವಹಿವಾಟು ನಡೆಸಲಿದ್ದು, ಹೋಬಳಿಯ ಎಲ್ಲಾ ರೈತರು ಇಲ್ಲಿಯೇ ಬಂದು ವ್ಯಾಪಾರ ಮಾಡುವಂತೆ ಮನವಿ ಮಾಡಿದರು.
ನೂತನವಾಗಿ ಪ್ರಾರಂಭವಾದ ಮಾರುಕಟ್ಟೆಯಲ್ಲಿ ಹತ್ತಾರೂ ಬಗೆಯ ಸೊಪ್ಪು,ತರಕಾರಿ ಸೇರಿದಂತೆ ಅಡುಗೆಗೆ ಬೇಕಾದ ಇನ್ನಿತರ ಉತ್ಪನ್ನಗಳನ್ನು ರೈತರೇ ತಂದು ಮಾರಾಟ ಮಾಡಲು ಮುಂದಾಗಿದ್ದರು. ಹೋಬಳಿಯ ತಮ್ಮಡಿಹಳ್ಳಿ, ಕೋರಗೆರೆ,ಕೆಂಕೆರೆ, ಕರೆಸೂರಗೊಂಡನಹಳ್ಳಿ, ಉಪ್ಪಾರಹಳ್ಳಿ,ಭಟ್ಟರಹಳ್ಳಿ, ಮೋಟಿಹಳ್ಳಿ, ಬೋರನಕಣಿವೆ ಸೇರಿದಂತೆ ಸುತ್ತಮುತ್ತಲ ಅನೇಕ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದು ತಮ್ಮದೇ ಆದ ಸಣ್ಣ ಅಂಗಡಿಯನ್ನು ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.
ಮಾರುಕಟ್ಟೆಯಲ್ಲಿ ನೀರಾ ಮಾರಾಟ ಜೋರಾಗಿದ್ದು, ರೈತ ಈರಣ್ಣ ತಂದಿದ್ದ ಸಿಹಿ ನೀರಾಗೆ ಹೆಚ್ಚು ಬೇಡಿಕೆ ಇತ್ತು. ರೈತರು ತಂದು ಹಾಕಿಕೊಂಡಿದ್ದ ಫ್ರೆಶ್ ತರಕಾರಿ,ಸೊಪ್ಪನ್ನು ಕೊಂಡುಕೊಳ್ಳಲು ಸಾರ್ವಜನಿಕರು ಸಹ ಮುಂದಾಗಿದ್ದು ಕಂಡು ಬಂತು.
ಈ ವೇಳೆ ಬೆಸ್ಕಾಂನ ಗವಿರಂಗಯ್ಯ, ಪ್ರಗತಿಪರ ರೈತರಾದ ಉಪ್ಪಾರಹಳ್ಳಿ ರೇವಣ್ಣ, ಕೆರೆಸೂರಗೊಂಡನಹಳ್ಳಿ ಮರುಳಪ್ಪ, ಕೆಂಕೆರೆ ರಾಜಣ್ಣ, ಸಂಘದ ಪರಮೇಶ್,ಕೊಟ್ರೇಶ್, ಲಿಂಗರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ