ಕೆಂಕೆರೆ,ಹುಳಿಯಾರು, ದೊಡ್ಡಬಿದರೆ, ಚಿಕ್ಕನಾಯಕನಹಳ್ಳಿ ಮಾರ್ಗದ ಹೆದ್ದಾರಿಯಲ್ಲಿ ಕಳೆದೊಂದು ವಾರದಿಂದ ರಸ್ತೆ ದುರಸ್ಥಿ ಕಾರ್ಯ ಸಾಗುತ್ತಿದ್ದು ಸದ್ಯಕ್ಕೆ ರಸ್ತೆ ಅಕ್ಕಪಕ್ಕ ಮಣ್ಣು ಹಾಕುವ ಕೆಲಸ ಸಾಗಿದ್ದು, ಸಮರ್ಪಕವಾಗಿ ನಡೆಯದ ಕಾರ್ಯದಿಂದಾಗಿ ದ್ವಿಚಕ್ರ ಹಾಗೂ ಪಾದಾಚಾರಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದ್ದು ಸ್ವಲ್ಪ ಹೆಚ್ಚುಕಡಿಮೆಯಾದರೂ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ.
ಹುಳಿಯಾರು-ಚಿ.ನಾ.ಹಳ್ಳಿ ಹೆದ್ದಾರಿಯ ರಸ್ತೆ ಇಕ್ಕೆಲದಲ್ಲಿ ಮಣ್ಣು ಹಾಕಿ ಡೋಸ್ ಮಾಡದೆ ಬಿಟ್ಟಿರುವ ದಪ್ಪ ದಪ್ಪ ಮಣ್ಣುಹೆಂಟೆಗಳು. |
ಹುಳಿಯಾರು ಮೂಲಕ ಹಾದು ಹೋಗಿರುವ ರಸ್ತೆ ಸಾಕಷ್ಟು ಕಡೆ ಗುಂಡಿ ಬಿದ್ದು ಸಂಚಾರ ದುಸ್ಥರವಾಗಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಗಮನ ಸೆಳೆದಿದ್ದರಿಂದಲೋ ಏನೋ ರಸ್ತೆ ದುರಸ್ತಿಕಾರ್ಯ ಪ್ರಾರಂಭವಾಗಿ ಕೆಲವೆಡೆ ಗುಂಡಿ ಮುಚ್ಚುವ ಕಾರ್ಯ ಸಾಗಿದರೆ, ಮತ್ತೆಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲೂ ಬಿದ್ದಿದ್ದ ಕೊರಕಲಿಗೆ ಮಣ್ಣು ಮುಚ್ಚುವ ( ಶೋಲ್ಡರ್ ವರ್ಕ್) ಕಾರ್ಯ ಸಾಗಿದೆ. ಕರ್ನಾಟಕ ಸ್ಟೇಟ್ ಹೈವೇಸ್ ಇಂಪ್ರೂವ್ ಮೆಂಟ್ ಪ್ರಾಜೆಕ್ಟ್ ಅಂದರೆ ಕೆ-ಶಿಪ್ ನವರು ಸದ್ಯ ಜಿಲ್ಲೆಯ ಗಡಿಭಾಗವಾದ ಕುದುರೆಕಣಿವೆಯಿಂದ ಆದಿ ಚುಂಚನಗಿರಿವರೆಗೆ ದುರಸ್ಥಿ ಹಾಗೂ ನಿರ್ವಹಣ ಕಾರ್ಯಕ್ಕೆ ಮುಂದಾಗಿದ್ದಾರೆ.
ರಸ್ತೆಯ ಗುಂಡಿ ಮುಚ್ಚುವುದು,ಜಂಗಲ್ ಸವರುವುದು ಹಾಗೂ ಶೋಲ್ಡರ್ ವರ್ಕ್ ಕಾಮಗಾರಿ ನಡೆಯಲಿದ್ದು , ಕಳೆದೊಂದು ವಾರದಿಂದ ಡಾಂಬರ್ ರಸ್ತೆಯ ಇಕ್ಕೆಲಗಳಲ್ಲೂ ಕೊರಕಲು ಬಿದ್ದಿರುವೆಡೆ ಮಣ್ಣು ತುಂಬುವ ಕಾರ್ಯ ಆರಂಭಿಸಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಮಣ್ಣನ್ನು ಹಿಟಾಚಿ ಮೂಲಕ ತೆಗೆದು ರಸ್ತೆ ಬದಿಗೆ ಹಾಕಿ ಕೆಲವೆಡೆ ಡೋಸರ್ ಮೂಲಕ ಮಟ್ಟ ಮಾಡುತ್ತಿದ್ದರೆ ಬಹುತೇಕ ಕಡೆ ಹಾಗೆಯೇ ಬಿಟ್ಟಿದ್ದು ಸಮಸ್ಯೆಗೆ ಕಾರಣವಾಗಿದೆ.
ರಸ್ತೆಯ ಎರಡು ಬದಿಯಲ್ಲಿ ಹಾಕಿರುವ ಮಣ್ಣು ಗುಡ್ಡೆಯಾಗಿ ಬಿದಿದ್ದು ಎದುರಿನಿಂದ ವಾಹನ ಬಂದಲ್ಲಿ ದ್ವಿಚಕ್ರವಾಹನದವರು ಕೆಳಗಿಳಿಯಲು ಪರದಾಡುವಂತಾಗಿದೆ.ಅಲ್ಲದೆ ರಸ್ತೆ ಪಕ್ಕದ ಗುಂಡಿಗಳಿಂದಲೇ ಕರಲು ಮಣ್ಣು ಹಾಕುತ್ತಿದ್ದು , ಯಾವೊಂದು ವಾಹನ ಹೋದರು ಆಳೆತ್ತರಕ್ಕೆ ಧೂಳೆದ್ದು ಎದುರಿನಿಂದ ಬರುವ ವಾಹನವೂ ಕಾಣದಂತಾಗಿ ಪ್ರಯಾಣ ದುಸ್ಥರವಾಗಿ ಪರಿಣಮಿಸಿದೆ. ನೀರು ಹಾಕಿ ರೋಲ್ ಮಾಡಬೇಕಿದ್ದರೂ ಕೇವಲ ಡೋಸರ್ ಮೂಲಕವೇ ಮಣ್ಣನ್ನು ಮಟ್ಟಮಾಡುವ ಕಾರ್ಯ ಮಾಡುತ್ತಿದ್ದು ಇದರಿಂದ ಮಣ್ಣು ಬಿಗಿಯಾಗಿ ಕೂರದೆ ವಾಹನಗಳ ಜಾರಿಕೆಗೆ ಕಾರಣವಾಗಿದೆ. ಮಣ್ಣು ಸುರಿದ ತಕ್ಷಣವೇ ಮಟ್ಟ ಮಾಡಿ ಬಿಗಿ ಮಾಡದಿದ್ದಲ್ಲಿ ಪ್ರಾಣಾಪಾಯವಾಗುವ ಸಂಭವ ಸಾಕಷ್ಟಿದೆ. ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರು ಕೂಡಲೇ ಈ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ.
---------
ರಸ್ತೆ ಬದಿಯಲ್ಲಿನ ಗುಂಡಿಗಳಿಂದ ಮಣ್ಣನ್ನು ತೆಗೆದು ಹಾಕುವ ಬದಲು ಬೇರೆಡೆಯಿಂದ ಬಿಗಿಯಾದ ಕೆಮ್ಮಣ್ಣನ್ನು ತಂದು ಹಾಕಿ ರೋಡ್ ರೋಲರ್ ನಲ್ಲಿ ಬಿಗಿ ಮಾಡಿದೆ ರಸ್ತೆ ಬದಿ ಮಣ್ಣನ್ನೇ ಹಾಕಿ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವೆ : ನವೀನ್, ತಾ.ಪಂ.ಸದಸ್ಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ