ಒತ್ತುವರಿ ತೆರವಿನಿಂದ ತೆರನಾಗಿದ್ದ ಪಟ್ಟಣದ ಬಸ್ ನಿಲ್ದಾಣದ ಕೆರೆ ಜಾಗದಲ್ಲಿ ಮತ್ತೆ ಅನಧಿಕೃತವಾಗಿ ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿದ್ದು ಅವುಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆಯವರು ಭಾನುವಾರ ನೋಟೀಸ್ ನೀಡಿದ್ದಾರೆ.
ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿ ತಲೆಎತ್ತಿದ್ದ ಪೆಟ್ಟಿಗೆ ಅಂಗಡಿಗಳು. |
ಬಸ್ ನಿಲ್ದಾಣದ ಈ ಕೆರೆಜಾಗವನ್ನು ಒತ್ತುವರಿ ಮಾಡಿಕೊಂಡು ನೂರಾರು ಅಂಗಡಿಗಳನ್ನು ತೆರೆದಿದ್ದರು. ಕೆರೆ ಒತ್ತುವರಿ ಜಾಗ ತೆರವಿನ ಹಿನ್ನಲೆಯಲ್ಲಿ ಹಾಗೂ ಸುಪ್ರಿಂಕೋರ್ಟ್ ಆದೇಶದ ಮೇರೆಗೆ ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಮಕ್ಷಮದಲ್ಲಿ ಈ ಅಂಗಡಿಗಳನ್ನು ತೆರವುಗೊಳಿಸಿ ಕೆರೆ ಜಾಗವನ್ನು ವಿಶಾಲಗೊಳಿಸಲಾಗಿತ್ತು. ಅಲ್ಲದೆ ಈ ಜಾಗದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ನಿರ್ಬಂಧ ಸಹ ಹೇರಲಾಗಿ ಯಾರೂ ಈ ಜಾಗದಲ್ಲಿ ಮತ್ತೆ ಅಂಗಡಿಯಿಡಲು ಮುಂದಾಗಿರಲಿಲ್ಲ.
ಇದೀಗ ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ಧಿಕಾರ್ಯ ನಡೆಯುತ್ತಿದ್ದು, ಪ್ರಯಾಣಿಕರು ಕೂರಲು ಹಾಗೂ ನಿಲ್ಲುವ ಸ್ಥಳದಲ್ಲಿ ಕೆಲವರು ಹೂ,ಬಾಳೆಹಣ್ಣು, ಟೀ ಅಂಗಡಿ, ಎಲೆ,ಅಡಿಕೆ ಅಂಗಡಿಯಂತಹ ಸಣ್ಣಪುಟ್ಟ ಅಂಗಡಿಗಳನ್ನು ಅನಧಿಕೃತವಾಗಿ ಇಟ್ಟುಕೊಂಡಿದ್ದರು. ಇದೀಗ ಈ ಜಾಗದಲ್ಲಿ ನೆಲಹಾಸಿನ ಕಲ್ಲು ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಅಂಗಡಿಯನ್ನು ತೆಗೆಸಿದ್ದಾರೆ. ಈ ಸ್ಥಳದಿಂದ ಅಂಗಡಿಗಳನ್ನು ತೆಗೆದ ಅಂಗಡಿದಾರರು ತಮ್ಮ ಅಂಗಡಿಗಳನ್ನು ಇತ್ತೀಚೆಗೆ ತಾನೇ ತೆರವುಗೊಂಡು ವಿಶಾಲವಾಗಿದ್ದ ಕೆರೆ ಜಾಗಕ್ಕೆ ವರ್ಗಾಯಿಸಿಕೊಂಡು ತಮ್ಮ ವ್ಯಾಪರಕ್ಕೆ ಮುಂದಾಗಿದ್ದಾರೆ.
ಕೆರೆ ಜಾಗದಲ್ಲಿ ಅಂಗಡಿಯನ್ನಿಟ್ಟುಕೊಂಡು ತೆರವಾದ ಬಳಿಕ ಬೇರೆಡೆಗೆ ಹೋಗಿದ್ದ ಅಂಗಡಿದಾರರು ಇದನ್ನು ಕಂಡು ತಮ್ಮನ್ನು ಇಲ್ಲಿಂದ ತೆಗಿಸಿ ಇದೀಗ ಇವರು ಅಂಗಡಿ ಇಟ್ಟುಕೊಂಡಿದ್ದಾರಲ್ಲದೆಂದು ಅವರು ಸಹ ಅಂಗಡಿಯಿಡುವುದಾಗಿ ಬಂದು ಸಣ್ಣಪುಟ್ಟ ಪೆಟ್ಟಿಗಳನ್ನು ಇಟ್ಟಿದ್ದು, ಮತ್ತೆ ಕೆರೆ ಅಂಗಳದಲ್ಲಿ ಗೂಡಂಗಳು ತಲೆ ಎತ್ತುವಂತಾಗಿದೆ.
ಅಂಗಡಿ ತೆರವುಗೊಳಿಸುವಂತೆ ಅಂಗಡಿದಾರರಿಗೆ ಪೊಲೀಸ್ ಇಲಾಖೆಯಿಂದ ನೀಡಿರುವ ನೋಟೀಸ್.
|
ಇದನ್ನು ಗಮನಿಸಿದ ಪೊಲೀಸರು ಕೆರೆಜಾಗದಲ್ಲಿ ಯಾರ ಅನುಮತಿಯಿಲ್ಲದೆ ಇಟ್ಟಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿರುವುದಲ್ಲದೆ, ತಪ್ಪಿದಲ್ಲಿ ಕಾನೂನುಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪರವಾನಿಗೆಯಿಲ್ಲದೆ, ಯಾರ ಸಮ್ಮತಿಯೂ ಇಲ್ಲದೆ ಅತಿಕ್ರಮವಾಗಿ ಕೆರೆ ಜಾಗದಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿರುವುದು ಕಾನೂನುಬಾಹಿರವಾಗಿದ್ದು, ನೋಟೀಸ್ ನಂತೆ ಅಂಗಡಿ ತೆರವುಗೊಳಿಸದೆ ಹೋದಲ್ಲಿ ಸೂಕ್ತ ಕಾನೂನುರೀತ್ಯಾ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ವರದಿಸಲ್ಲಿಸಲಾಗುವುದು ಎಂದು ಬಿ.ಪ್ರವೀಣ್ ಕುಮಾರ್ ತಿಳಿಸಿದರು.
--------------
ನಾವು ಮೊದಲಿನಿಂದಲೂ ಇಲ್ಲಿಯೇ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡಿ ಬದುಕುತ್ತಿದ್ದೆವು, ಸ್ವಲ್ಪವೂ ಕರುಣೆಯಿಲ್ಲದೆ ನಮ್ಮನ್ನು ಇಲ್ಲಿಂದ ತೆರವುಗೊಳಿಸಿ ಇದೀಗ ಬೇರೆಯವರು ಇದೇ ಜಾಗದಲ್ಲಿ ಅಂಗಡಿಯಿಡಲು ಮುಂದಾಗಿದ್ದಾರೆ ಇದರಿಂದ ನಾವೂ ಸಹ ಅನಿವಾರ್ಯವಾಗಿ ಅಂಗಡಿಗಳನಿಡುವ ಪ್ರಯತ್ನ ಮಾಡಿದ್ದೇವೆ : ಕೋಳಿಶ್ರೀನಿವಾಸ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ