ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಹಾಗೂ ಇನ್ನಿತರ ಖಾಲಿ ಹುದ್ದೆಗಳ ನೇಮಕಕ್ಕೆ ಒತ್ತಾಯಿಸಿ ಸೋಮವಾರದಂದು ಆರಂಭಗೊಂಡಿದ್ದ ಬೃಹತ್ ಪ್ರತಿಭಟನೆಯು ಮಾರ್ಚ್ ೧೦ ರೊಳಗೆ ಸಮಸ್ಯೆ ಈಡೇರಿಸುವ ತಾಲ್ಲೂಕು ವೈದ್ಯಾಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ದಸೂಡಿ ಆಸ್ಪತ್ರೆ ಮುಂದೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಯವರು ಪ್ರತಿಭಟನೆ ನಡೆಸಿದರು. |
ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೪೨ ಗ್ರಾಮಗಳು ಒಳಪಟ್ಟಿದ್ದು ಕಳೆದ ಒಂದು ವರ್ಷದಿಂದ ವೈದ್ಯಾಧಿಕಾರಿ ಹುದ್ದೆ ಖಾಲಿ ಇತ್ತು. ಅಲ್ಲದೆ ಔಷಧಿ ವಿತರಕ, ಕಿರಿಯ ಪುರುಷ ಆರೋಗ್ಯ ಸಹಾಯಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ, ಲ್ಯಾಬ್ ಟೆಕ್ನಿಷಿಯನ್ , ಮಹಿಳಾ ಆರೋಗ್ಯ ಮೇಲ್ವಿಚಾರಕಿ ಹುದ್ದೆಗಳು ಸಹ ಖಾಲಿಯಿದ್ದು ಸಿಬ್ಬಂದಿ ನಿಯೋಜಿಸುವಂತೆ ಹಲವಾರು ಬಾರಿ ಮನವಿ ಮಾಡಿದಾಗ್ಯೂ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿಯ ಪ್ರತಿಭಟನೆಗೆ ಕರೆಕೊಡಲಾಗಿತ್ತು.
ಧರಣಿನಿರತರೊಂದಿಗೆ ಚರ್ಚಿಸುತ್ತಿರುವ ತಾಲ್ಲೂಕ್ ವೈದ್ಯಾಧಿಕಾರಿ ಶಿವಕುಮಾರ್. |
ದಸೂಡಿ ಗ್ರಾ.ಪಂ ಸದಸ್ಯ ಡಿ.ಬಿ.ರವಿಕುಮಾರ್ ನೇತೃತ್ವದಲ್ಲಿ ರೈತಸಂಘ , ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಬೆಂಬಲದೊಂದಿಗೆ ಸೋಮವಾರ ಬೆಳಿಗ್ಗೆ ಧರಣಿ ಆರಂಭಗೊಂಡಿತು.
ಆಸ್ಪತ್ರೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ ರವಿಕುಮಾರ್ , ಸುಸಜ್ಜಿತ ಸರ್ಕಾರಿ ಆಸ್ಪತ್ರೆಯಿದ್ದರೂ ವೈದ್ಯರು ಹಾಗೂ ಸಿಬ್ಬಂದಿಯವರಿಲ್ಲದೆ ಜನ ಪರದಾಡುತ್ತಿದ್ದು ಶೀಘ್ರವೇ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸುವಂತೆ ಒತ್ತಾಯಿಸಿದರು.
ಗಡಿ ಗ್ರಾಮವಾದ ದಸೂಡಿಯ ಸಾರ್ವಜನಿಕರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದು, ಸುಮಾರು ೮೦ ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದ್ದರೂ ಸಹ ಖಾಯಂ ವೈದ್ಯರಾಗಲಿ, ಸಿಬ್ಬಂದಿಯವರಾಗಲಿ ಇಲ್ಲದಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ರೈತಸಂಘದ ಅಧ್ಯಕ್ಷ ನಾಗರಾಜಣ್ಣ ಮಾತನಾಡಿ, ದಸೂಡಿ ಆಸ್ಪತ್ರೆ ೨೪*೭ ಆಸ್ಪತ್ರೆಯಾಗಿದ್ದು ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸಬೇಕಿದ್ದರೂ ಸಹ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಸೇವೆ ದೊರೆಯುತ್ತಿಲ್ಲ. ಔಷಧಿ ಕೊರತೆ ಸೇರಿದಂತೆ ತುರ್ತು ಪರಿಸ್ಥಿತಿಗೆ ೧೦೮ ಅಂಬ್ಯುಲೆನ್ಸ್ ಸೇವೆ ದೊರೆಯುವುದೂ ದುಸ್ಥರವಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು.
ವಿಷಯ ತಿಳಿದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಶಶಿಕಲಾ ಅವರು ಧರಣಿ ನಿರತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಲ್ಲದೆ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಹಾಗೂ ಕ್ಷೇತ್ರ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಮಧು ಅವರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗ್ಗೆ ವಿವರ ಪಡೆದರು. ಡಿಎಚ್ ಓ ಅವರೊಂದಿಗೆ ಚರ್ಚಿಸಿದ ಶಿವಕುಮಾರ್ ಇನ್ನು ೧೦ ದಿನದ ಒಳಗೆ ಖಾಯಂ ವೈದ್ಯರು ಸೇರಿದಂತೆ ಸಿಬ್ಬಂದಿ ಸಮಸ್ಯೆ ಔಷಧಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು ಹಾಗೂ ಗುರುವಾರದಂದು ಆರೋಗ್ಯ ರಕ್ಷಣಾ ಸಮಿತಿಯ ಸಭೆ ಕರೆದು ಕುಂದುಕೊರತೆಗಳನ್ನು ವಿಚಾರಿಸಿ ಬಗೆಹರಿಸುವುದಾಗಿ ಆಶ್ವಾಸನೆಯಿತ್ತರು.
ಅವರ ಹೇಳಿಕೆಯಿಂದ ಸಮಾಧಾನಗೊಂಡ ಪ್ರತಿಭಟನಾಕಾರರು ಒಂದು ವಾರದ ಗಡುವು ನೀಡಿದ್ದು ಅಷ್ಟರೊಳಗೆ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಪುನಃ ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಶಿವಣ್ಣ, ಪಿ.ಟಿ.ಅಶ್ವತನಾರಾಯಣ ಶೆಟ್ಟಿ, ಸುಂದರಮೂರ್ತಿ,ಆನಂದ್, ಹನುಮಯ್ಯ,ಲಕ್ಷ್ಮಕ್ಕ, ಲಲಿತಮ್ಮ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ