ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷವಾಗಿರುವ ಯುಗಾದಿಹಬ್ಬದ ಆಚರಣೆ ಅಂಗವಾಗಿ ಪಟ್ಟಣದಲ್ಲಿ ಗುರುವಾರ ನಡೆದ ಹಬ್ಬಸಂತೆ ಬಲು ಜೋರಾಗಿತ್ತು. ಸಂತೆಗೆ ಹಳ್ಳಿಗಳ ಜನ ತಂಡೋಪ ತಂಡವಾಗಿ ಆಗಮಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ಮಗ್ನರಾಗಿದ್ದರು.
ಹುಳಿಯಾರಿನಲ್ಲಿ ಹಬ್ಬದ ಅಂಗವಾಗಿ ನಡೆದ ಹಬ್ಬ ಸಂತೆಯಲ್ಲಿ ಉಡುದಾರ ಮಾಡುತ್ತಿರುವುದು. |
ಹಬ್ಬಸಂತೆಯಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಕೊಂಡು ವಾಪಸ್ಸ್ ಹಿಂತಿರುಗುತ್ತಿರುವ ಜನರು. |
ಪಟ್ಟಣದ ಗಾಂಧಿಪೇಟೆ, ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು. ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ನಮ್ಮ ಹಳ್ಳಿಗರಲಿದ್ದು ಹಬ್ಬದ ದಿನ ಸಂಪೂರ್ಣ ಹೊಸದನ್ನು ಹಾಕಿಕೊಳ್ಳಬೇಕೆಂಬ ದೃಷ್ಠಿಯಿಂದ ಉಡುದಾರವನ್ನು ಸಹ ಕೊಂಡುಕೊಳ್ಳುತ್ತಿದ್ದು ಕಂಡುಬಂತು.
ಯುಗಾದಿ ಉಡುದಾರ : ಹಬ್ಬದ ಅಂಗವಾಗಿ ಉಡುದಾರದ ವ್ಯಾಪಾರ ತಕ್ಕಮಟ್ಟಿಗಿದ್ದು, ಕೆಲ ವ್ಯಾಪಾರಸ್ಥರು ಉಡುದಾರದ ಕೆಂಪು ಹಾಗೂ ಕಪ್ಪು ಬಣ್ಣದ ದೊಡ್ಡಹುಂಡೆಗಳನ್ನು ತಂದು ೧೦ ರೂಗೆ ೨-೩ ಮಾರು ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದರು. ಸಂತೆಯಲ್ಲಿ ಅಷ್ಟೆಅಲ್ಲದೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಯುಗಾದಿ ಉಡುದಾರ ಎಂದು ಕೂಗುತ್ತಾ ವ್ಯಾಪಾರ ಮಾಡುತ್ತಿದ್ದರು. ಶನಿವಾರ ಹಬ್ಬವಿದ್ದು ಶುಕ್ರವಾರವೂ ಸಹ ಉಡುದಾರದ ವ್ಯಾಪಾರ ಮಾಡುತ್ತೇವೆ ಲಾಭವೋ, ಲುಕ್ಸಾನವೋ ಹಿಂದಿನಿಂದ ಮಾಡಿಕೊಂಡು ಬಂದಿರುವುದು ಬಿಡಬಾರದೆಂದು ಉಡುದಾರದ ವ್ಯಾಪರ ಮಾಡಿಕೊಂಡು ಬರುತ್ತಿದ್ದೆವೆ. ಇನ್ನುಳಿದ ದಿನಗಳಲ್ಲಿ ಜಾತ್ರೆಯಲ್ಲಿ ಮಾರಾಟ ಮಾಡುತ್ತೇವೆ ಜಾತ್ರೆಯಿಲ್ಲದ ವೇಳೆ ಕೃಷಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಉಡುದಾರದ ವ್ಯಾಪಾರಿ ಮಂಜಣ್ಣ ತಿಳಿಸುತ್ತಾರೆ.
ಬಟ್ಟೆಅಂಗಡಿಳು ರಶ್: ಯುಗಾದಿ ಹಬ್ಬದಲ್ಲಿ ಹೊಸಬಟ್ಟೆ ತೊಡುವುದು ಸಂಪ್ರದಾಯವಿರುವುದರಿಂದ ಹೊಸಬಟ್ಟೆ ಕೊಳ್ಳಲು ಜನರು ಜವಳಿ ಅಂಗಡಿಗಳತ್ತ ಮುಗಿಬಿದಿದ್ದರು. ಪಟ್ಟಣದ ಶ್ರೀರಾಮ ಹಾಲ್, ಎಸ್.ಅರ್.ಎಸ್. ರುಕ್ಮಿಣಿ ಹಾಲ್, ಜಗನಾಥ್ ರಾವ್, ಎಸ್.ಎಂ.ಎಸ್ ಟೆಕ್ಸ್ ಟೈಲ್ಸ್, ಮರುಳಸಿದ್ದೇಶ್ವರ ಟೆಕ್ಸ್ ಟೈಲ್ಸ್, ದಿನೇಶ್ ಕ್ಲಾತ್ ಸೆಂಟರ್, ದಾವಣಗೆರೆ ಟೆಕ್ಸ್ ಟೈಲ್ಸ್ ಸೇರಿದಂತೆ ಇನ್ನಿತರ ಬಟ್ಟ ಅಂಗಡಿಗಳಲ್ಲಿ ಜನಜಾತ್ರೆಯೇ ಸೇರಿತ್ತು. ಬಟ್ಟೆ ಅಂಗಡಿಗಳಲ್ಲದೆ ಬಸ್ ನಿಲ್ದಾಣ ಹಾಗೂ ಜನ ನಿಬಿಡಪ್ರದೇಶದಲ್ಲಿ ಟೆಂಟ್ ವ್ಯಾಪಾರಿಗಳ ರೆಡಿಮೆಡ್ ಬಟ್ಟೆಯ ಮಾರಾಟವೂ ಸಹ ಇತ್ತು. ದೊಡ್ಡವರ ಬಟ್ಟೆಗಿಂತ ಮಕ್ಕಳ ರೆಡಿಮೆಡ್ ಬಟ್ಟೆಗಳ ಬೆಲೆ ತುಸು ಹೆಚ್ಚಾಗಿದ್ದರೂ ಸಹ ಹಬ್ಬದ ನೆಪದಲ್ಲಿ ಕೊಂಡುಕೊಳ್ಳುತ್ತಿದ್ದರು.ಮಹಿಳೆಯರು ಹಾಗೂ ಯುವತಿಯರು ಬಟ್ಟೆಗಳಿಗೆ ತಕ್ಕಂತೆ ಅಲಂಕಾರಿಕ, ಸೌಂದರ್ಯ ವರ್ಧಕ ವಸ್ತುಗಳ ಹುಡುಕಾಟದಲ್ಲಿ ತೊಡಗಿದ್ದರು. ಫ್ಯಾನ್ಸಿ, ಬಳೆ ಅಂಗಡಿಗಳಲ್ಲಿ ಮಹಿಳೆಯರದ್ದೆ ಸದ್ದಾಗಿತ್ತು.
ಹುಳಿಯಾರಿನಲ್ಲಿ ಯುಗಾದಿಹಬ್ಬದ ಅಂಗವಾಗಿ ನಡೆದ ಹಬ್ಬ ಸಂತೆಯಲ್ಲಿ ದಿನಸಿ ಪದಾರ್ಥಗಳನ್ನು ಕೊಂಡುಕೊಳ್ಳುತ್ತಿರುವ ಜನರು. |
ಹುಳಿಯಾರು ಸುತ್ತಮುತ್ತಲ ಹಳ್ಳಿಯವರು ಆಟೋ, ಟಾಟಾಏಸ್ ವಾಹನದಲ್ಲಿ ಆಗಮಿಸಿದ್ದು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡು ಸಂಜೆ ನಂತರ ವಾಪಸ್ ಹಿಂತಿರುಗುತ್ತಿದ್ದರಲ್ಲದೆ ಬಸ್ ಗಳು ಸಹ ರಶ್ ಆಗಿದ್ದು ಬಸ್ ನಿಲ್ದಾಣದ ತುಂಬೆಲ್ಲಾ ಜನ ಜಾತ್ರೆಯೇ ಕಂಡುಬಂತು.
ಸಂತೆಗೆ ಹೆಚ್ಚು ಆಗಮಿಸಿದ್ದ ಹಿನ್ನಲೆಯಲ್ಲಿ ಕಳ್ಳತನ ಆಗುವ ಸಂಧರ್ಭ ಬರುವುದರಿಂದ ತಮ್ಮ ಲಗೇಜು ಹಾಗೂ ಹಣದ ಬಗ್ಗೆ ಜಾಗೃತಿವಹಿಸುವಂತೆ ಪೊಲೀಸ್ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಚಾರ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ