ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿಯ ದೊಡ್ಡೆಣ್ಣೆಗೆರೆ ಪುಟ್ಟ ಗ್ರಾಮವಾಗಿದ್ದರೂ ಸಹ ಧಾರ್ಮಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿದೆ. ಇದು ಅಖಿಲ ಭಾರತ ಬಣಜಾರರ(ಲಂಬಾಣಿ) ಯಾತ್ರಾಸ್ಥಳವಾಗಿದ್ದು ಇದು ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ ಪವಿತ್ರ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ.
ಹುಳಿಯಾರು ಹೋಬಳಿ ದೊಡ್ಡಎಣ್ಣೆಗೆರೆಯಲ್ಲಿ ಭೀಮಾಸತಿ ತೀಥಾರಾಜಸ್ವಾಮಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನಡೆಯಿತು. |
ಯಾರು ಈ ಲಂಬಾಣಿಗರು: ಲಂಬಾಣಿಗಳು,ಬಂಜಾರು,ಅಥವಾ ನಾಯ್ಕ ಎಂದು ಕರೆಯಲಾಗುವ ಈ ಜನಾಂಗ ಮೂಲತಃ ಗುಜರಾತ್,ಆಂಧ್ರ,ರಾಜಾಸ್ಥಾನ,ಮಹಾರಾಷ್ಟ,ಕರ್ನಾಟಕದ ನಿವಾಸಿಗಳಾಗಿದ್ದಾರೆ. ಗುಜರಾತ್ , ರಾಜಸ್ಥಾನ ಮೂಲದ ಇವರು ಲಂಬಾಣಿ ಭಾಷೆ ಮಾತಾಡುವುದಿದ್ದು, ಇವರದ್ದೇ ಆದ ವೇಷ ಭೂಷಣಗಳಿಂದ ಇವರುಗಳನ್ನು ಲಂಬಾಣಿಗಳೆಂದು ಗುರ್ತಿಸಬಹುದಾಗಿದೆ. ಸಾಮಾನ್ಯವಾಗಿ ಇವರು ಊರ ಹೊರಭಾಗದಲ್ಲಿ ತಮ್ಮದೇ ಆದ ತಾಂಡಗಳಲ್ಲಿ ವಾಸಿಸುತ್ತಾರೆ. ಬಂಜಾರ ಮಹಿಳೆಯರು ಕಸೂತಿ ವಸ್ತ್ರದಿಂದ ಕೂಡಿದ ತೊಡುಗೆ ಹಾಗೂ ಬಣ್ಣ ಬಣ್ಣದ ಹರಳು, ಬೆಳ್ಳಿಯ ನಾಕಾಣೆ,ಎಂಟಾಣೆಯಿಂದ ಮಾಡಿಸಿಕೊಂಡ ಕಾಸಿನ ಸರ,ತಲೆಗೆ ಗುಗ್ಗರಿ, ಕೈಗೆ ಪ್ರಾಣಿಯ ಕೊಂಬಿನಿಂದ ಮಾಡಿದ ಬಳೆ ಮುಂತಾದವುಗಳನ್ನು ಅಡಿಯಿಂದ ಮುಡಿಯವರೆಗೆ ತೊಟ್ಟುಕೊಂಡು ರಂಗುರಂಗಿನ ವೇಷಭೂಷಣದಿಂದ ತಟ್ಟನೆ ಗಮನ ಸೆಳೆಯುತ್ತದೆ.
ಯಾತ್ರಾಸ್ಥಳ: ದೊಡ್ಡಎಣ್ಣೆಗೆರೆಯಲ್ಲಿನ ಈ ಪವಿತ್ರ ಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದ್ದು ಈ ಹಿಂದೆ ಇಲ್ಲಿಗೆ ಆಗಮಿಸಿದ ಲಂಬಾಣಿ ಕುಟುಂಬದ ತೀಥಾರಾಜ ಹೋರಾಟದಲ್ಲಿ ಸಾವನಪ್ಪಿದ್ದರಿಂದ ಸಹಗಮನ ಪದ್ದತಿಯಂತೆ ಪತಿಯ ಚಿತೆ ಏರಿದ ಭೀಮಾಬಾಯಿ ಅಗ್ನಿಗಾಹುತಿಯಾದ ಸ್ಥಳ ಇದಾಗಿದ್ದು, ಕಾಲಕ್ರಮೇಣ ಇದು ಲಂಬಾಣಿಗರ ಪುಣ್ಯಕ್ಷೇತ್ರವಾಗಿ ಯಾತ್ರಾಸ್ಥಳವಾಗಿ ಪ್ರಸಿದ್ದಿ ಹೊಂದಿದೆ.
ಹುಳಿಯಾರು ಹೋಬಳಿ ದೊಡ್ಡಎಣ್ಣೆಗೆರೆಯ ಭೀಮಾಸತಿ ತೀಥಾರಾಜಸ್ವಾಮಿ ಜಾತ್ರೆಯಲ್ಲಿ ಲಂಬಾಣಿ ಮಹಿಳೆಯರ ಸಾಮೂಹಿಕ ನೃತ್ಯ. |
ಮತ್ತೊಂದು ಮೂಲದ ಪ್ರಕಾರ ವಿರೋಧಿಗಳ ಜೊತೆ ಹೋರಾಟದಲ್ಲಿ ಹತನಾದ ತೀಥರಾಜನ ದೇಹವನ್ನು ಆತನ ಪತ್ನಿ ಕುದುರೆಯಲ್ಲಿ ಹೊತ್ತು ತಂದು ಗ್ರಾಮದ ಹೆಬ್ಬಾಗಿಲ ಬಳಿ ಪತಿಯೊಂದಿಗೆ ಆಕೆಯೂ ಚಿತೆ ಏರಿದ್ದರಿಂದ ಈ ಸ್ಥಳ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ ಎನ್ನಲಾಗಿದೆ. ಒಟ್ಟಾರೆ ಈ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲದೆ ಕೇವಲ ಹಿರಿಯರ ಬಾಯಿಂದ ಕೇಳಿ ಬರುವ ಅಮೂರ್ತವಾಣಿಯಾಗಿದೆ.
ಈ ಯಾತ್ರಾ ಸ್ಥಳದಲ್ಲಿ ಪ್ರತಿ ವರ್ಷವೂ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇಶಾದ್ಯಂತ ಹರಡಿರುವ ಲಂಬಾಣಿಗರು ಅಂದು ಕುಟುಂಬ ಸಮೇತರಾಗಿ ದವಸ ಧಾನ್ಯಗಳ ಸಮೇತ ಆಗಮಿಸಿ ಡೇರೆ ಹೂಡಿ ತಂಗುವುದು ಇಲ್ಲಿನ ವಿಶೇಷ. ಇಲ್ಲಿನ ಜಾತ್ರೆಗೆ ೩೦೦ ವರ್ಷಗಳಷ್ಟು ಸುದೀರ್ಘ ಇತಿಹಾಸವಿದ್ದರೂ ಸಹ ನಿಗದಿತ ದಿನಾಂಕ ಜಾತ್ರೆ ನಡೆಯದೆ ಜನಾಕರ್ಷಣೆ ಆಗಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಈಚೆಗೆ ಫೆಬ್ರವರಿ ತಿಂಗಳ ಕಡೆವಾರದಲ್ಲಿ ನಿಗದಿತವಾಗಿ ಜಾತ್ರೆ ಅಯೋಜಿಸಿಕೊಂಡು ಬರುತ್ತಿದ್ದು ದಿನೇ ದಿನೆ ಪ್ರಖ್ಯಾತಿ ಹೊಂದುತ್ತಿದೆ. ಈ ಬಾರಿಯ ಜಾತ್ರಾಮಹೋತ್ಸವ ೫೮ ನೇ ವರ್ಷದ್ದಾಗಿದ್ದು ಫೆಬ್ರವರಿ ೨೬ ರಿಂದ ೪ ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.
ಝಾಂಡೇವು, ಧ್ವಜಾರೋಹಣ, ಕಳಸಧಾರಣೆ ಮೂಲಕ ಆರಂಭಗೊಂಡು ನಿತ್ಯ ಅಭಿಷೇಕ ನಡೆಯಿತು.ಗಂಗಪೂಜೆ, ಒಳಂಗ್ , ಸಾತ್ ಸತ್ತಿ, ಮಾತಾಪೂಜೆ,ಭೀಮಾಸತಿ ತೀಥಾರಾಜಸ್ವಾಮಿ ಉತ್ಸವ, ದುಗ್ಗಲ ಸೇವೆ,ಲಕ್ಷ ದೀಪೋತ್ಸವ ಮುಂತಾದವು ನಡೆಯಿತು. ಜಾತ್ರೆಯ ಕಡೆಯ ದಿನ ದೇವಿಗೆ ಬಲಿ ಸಮರ್ಪಣೆ ಅಂಗವಾಗಿ ನೂರಾರು ಹರಕೆಯ ಕುರಿಗಳನ್ನು ಬಲಿಕೊಟ್ಟು ಬಾಡೂಟ ಸವಿಯುವುದು ಈ ಜಾತ್ರೆಯ ವೈಶಿಷ್ಟ್ಯವಾಗಿದ್ದು, ಊಟದ ಜೊತೆಗೆ ಲಂಬಾಣಿ ಮಹಿಳೆಯರ ಢಾಳೋ ಸಂಭ್ರಮ ಹಾಗೂ ಯುವಕರು ಕುಣಿತ ಗಮನ ಸೆಳೆಯಿತು. ವರ್ಷದಿಂದ ವರ್ಷಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು ಈ ಬಾರಿ ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದು ವಿಶೇಷವಾಗಿತ್ತು.
---------------------
ರಾಷ್ಟ್ರಮಟ್ಟದ ಖ್ಯಾತಿ ಹೊಂದಿದ್ದರೂ ಸಹ ಇಲ್ಲಿ ಸಾಕಷ್ಟು ಮೂಲಸೌಕರ್ಯದ ಅವಶ್ಯಕತೆಯಿದೆ. ಲಕ್ಷಾಂತರ ಜನ ಆಗಮಿಸುವ ಇಲ್ಲಿಗೆ ಶೌಚಾಲಯ ,ಸ್ನಾನಗೃಹ ಹಾಗೂ ಜಾಗ ಅಗತ್ಯ ಬೇಕಾಗಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. : ರಘುನಾಥ್, ಕಮಿಟಿಯ ಕಾರ್ಯದರ್ಶಿ.
--------------
ಲಂಬಾಣಿಗಳು ವಾಸಮಾಡುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಸ್ಥಾಪ ಸರ್ಕಾರದ ಮುಂದಿದ್ದು ತಾಂಡಾ ಅಭಿವೃದ್ದಿ ನಿಗಮಕ್ಕೆ ಅನುದಾನ ನೀಡುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಈ ಯಾತ್ರಾ ಸ್ಥಳದ ಅಭಿವೃದ್ದಿಗೆ ೧ ಕೋಟಿ ಮಂಜೂರು ಮಾಡಿಸಲಾಗುವುದು : ಟಿ.ಬಿ.ಜಯಚಂದ್ರ.ಕಾನೂನು ಸಚಿವ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ