ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು : ಎಲ್ಲೆಡೆ ಸುಗ್ಗಿಯ ಕೆಲಸ ಮುಗಿದಿದ್ದು ಸುಡು ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಂದ ಬಿಡುವು ಸಿಕ್ಕಿದ್ದು ಇನ್ನೇನಿದ್ದರೂ ಜಾತ್ರೆಗಳ ಸುಗ್ಗಿಯಾಗಿದೆ. ಜಾತ್ರೆಗಳು ಗ್ರಾಮೀಣ ಪ್ರದೇಶಗಳಲ್ಲಿ ಒಂದು ರೀತಿಯ ಪರಂಪರೆಯಾಗಿದ್ದು ಆಯಾ ಭಾಗದ ಆರಾಧ್ಯ ದೇವತೆಗಳನ್ನು ಹೊತ್ತು ಸಂಭ್ರಮಿಸುವ ಹಾಗೂ ಇದರ ನೆಪದಲ್ಲೇ ನೆಂಟರಿಷ್ಟರೆಲ್ಲಾ ಸೇರುವ ಆಚರಣೆಯಾಗಿದೆ.
ಕಾರೇಹಳ್ಳಿ ಜಾತ್ರೆಯಲ್ಲಿ ರಾಸುಗಳ ಸಿಂಗಾರದ ಪರಿಕರಗಳನ್ನು ಕೊಳ್ಳುತ್ತಿರುವ ರೈತರು |
ಹೆಚ್ಚಿನ ಜಾತ್ರೆಗಳು ಅಯಾ ಭಾಗದ ಗ್ರಾಮದೇವತೆಗಳ ಆರಾಧನೆಗೆ ಸೀಮಿತವಾದರೆ ಮತ್ತೆ ಕೆಲವು ಜಾನುವಾರುಗಳ ಜಾತ್ರೆಯಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ರಾಸುಗಳ ವಿನಿಮಯಕ್ಕೆ ನೆರವಾಗಲಿವೆ. ಈ ಸಮಯದಲ್ಲಿ ಜಾನುವಾರು ಜಾತ್ರೆಗಳು ಎಲ್ಲೆ ನಡೆದರೂ ಸಹ ಗ್ರಾಮೀಣ ರೈತರು ತಪ್ಪದೇ ಹೋಗಿಬರುತ್ತಾರೆ. ಈ ಭಾಗದಲ್ಲಿ ಕಾರೇಹಳ್ಳಿ ಜಾತ್ರೆ ದನಗಳ ಮಾರಾಟಕ್ಕೆ ಹೆಸರುವಾಸಿಯಾಗಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನಕ್ಕಿಂತ ರಾಸುಗಳೇ ಹೆಚ್ಚಾಗಿ ಕಂಡುಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿದ್ದು ಇನ್ನೂ ಹತ್ತು ದಿನಗಳಕಾಲ ರಾಸುಗಳ ಕೊಡುಕೊಳ್ಳುವಿಕೆ ನಡೆಯಲಿದೆ.ಇದರ ಜೊತೆಯಲ್ಲಿ ರಾಸುಗಳಿಗೆ ಸಂಬಂಧಿಸಿದ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಅಂಗಡಿಗಳು ಹೆಚ್ಚುಕಂಡುಬರುತ್ತಿದೆ.
ಸಾಮಾನ್ಯವಾಗಿ ಜಾತ್ರೆಗಳಲ್ಲಿ ಪುರಿ,ಬೆಂಡು,ಬತಾಸು, ಮಕ್ಕಳ ಆಟಿಕೆ,ಮಹಿಳೆಯರ ಸಿಂಗಾರದ ವಸ್ತುಗಳನ್ನೊಳಗೊಂಡ ಅಂಗಡಿಗಳೇ ಹೆಚ್ಚಾಗಿ ಕಂಡುಬಂದರೆ, ಇದಕ್ಕೆ ಸೆಡ್ಡುಹೊಡೆದಂತೆ ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಮಾತ್ರ ರಾಸುಗಳ ಸಿಂಗಾರಕ್ಕೆ ಬೇಕಾದ ಸಕಲ ಪರಿಕರಗಳ ಅಂಗಡಿಗಳು ಹೆಚ್ಚಾಗಿ ಕಂಡುಬರುವುದು ವಿಶೇಷವಾಗಿದೆ.
ದೂರದ ಗದಗ್,ದಾವಣಗೆರೆ ಮುಂತಾದ ಕಡೆಯಿಂದ ಇದಕ್ಕೆ ಬೇಕಾದ ಪರಿಕರಗಳನ್ನು ತರುವ ವ್ಯಾಪಾರಿಗಳು ಇಂತಹ ಹತ್ತಾರು ಅಂಗಡಿಗಳನ್ನು ತೆರೆದಿದ್ದಾರೆ. ಎತ್ತುಗಳು ತಮ್ಮ ಜೀವನಾಡಿ ಎಂದು ಬಗೆದಿರುವ ರೈತರು ತಮ್ಮ ರಾಸುಗಳನ್ನು ಕಣ್ ಕುಕ್ಕುವಂತೆ ಅಲಂಕರಿಸಲು ಹಿಂದೆಗೆಯುವುದಿಲ್ಲ. ಹಾಗಾಗಿ ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು.
ಈ ಅಂಗಡಿಗಳಲ್ಲಿ ಎತ್ತು , ಹಸುಗಳಿಗೆ ಹಾಕುವ ಮೂಗುದಾರ, ಮುಕೋಡ, ಬಾಯಿಕುಕ್ಕೆ, ಕೊರಳು ಹಾಗೂ ಕಾಲಿಗೆ ಕಟ್ಟುವು ಹಿತ್ತಾಳೆಯ ಗಂಟೆ, ಕೊರಳಿಗೆ ಹಾಕುವ ಕೊರಳ ಹಗ್ಗ, ಶಂಕು, ಗಂಟೆ ಸಹಿತಹಗ್ಗ, ಗೆಜ್ಜೆಸಹಿತ ಹಣೆಪಟ್ಟಿ,ಗಗ್ಗರ, ದೃಷ್ಠಿಯಾಗದಂತೆ ಕಟ್ಟುವ ಕುರಿ ಉಣ್ಣೆಯಿಂದ ಮಾಡಿದ ಕರಿಹಗ್ಗ, ಕುಚ್ಚು, ಕೊಂಬುಗಳ ತುದಿಗೆ ಹಾಕುವ ಕೋಡುಅಣ್ಸು ಸೇರಿದಂತೆ ಇನ್ನಿತರ ವಸ್ತುಗಳು ಕಂಡುಬರುವುದಲ್ಲದೆ, ರೈತರ ಕೃಷಿ ಚಟುವಟಿಕೆಯಲ್ಲಿ ಬಳಸುವ ದೊಡ್ಡ ಹಗ್ಗಗಳು, ನೇಗಿಲು ಹೂಡುವಹಗ್ಗ, ಅಗಡುಗಣ್ಣಿ, ತರಹೇವಾರಿ ಬಾರಿಕೋಲುಗಳು ಸಹ ದೊರೆಯುತ್ತವೆ.
ಜಾತ್ರೆಯ ನಂತರದ ದಿನಗಳಲ್ಲಿ ರಾಸುಗಳ ಸಿಂಗಾರದ ವಸ್ತುಗಳು ಹಾಗೂ ಕೃಷಿಗೆ ಬಳಸುವ ವಸ್ತುಗಳಿಗಾಗಿ ರೈತರು ಇಂತಹ ಅಂಗಡಿಗಳನ್ನು ಹುಡುಕುತ್ತಾದರೋ ಸಹ ಸಕಲವಸ್ತುಗಳು ದೊರೆಯದೆ ಹತಾಶರಾಗುತ್ತಾರೆ. ಆದರೆ ಈ ಜಾತ್ರೆಯಲ್ಲಿ ಮಾತ್ರ ದನಗಳ ಅಲಂಕಾರಕ್ಕೆ ಸಮರ್ಪಕವಾಗಿ ಬೇಕಾದ ರೈತರ ಮನಸ್ಸಿಗೆ ಒಪ್ಪುವಂತ ವಸ್ತುಗಳು ಸಿಗುತ್ತವೆ.
ರಾಸುಗಳ ಅಲಂಕಾರಿಕ ವಸ್ತುಗಳನ್ನೊಳಗೊಂಡ ಅಂಗಡಿದಾರರು ಕೆಲ ವಸ್ತುಗಳನ್ನು ತಾವೇ ಸಿದ್ದಮಾಡಿದರೆ, ಮತ್ತೆ ಕೆಲ ವಸ್ತುಗಳನ್ನು ನಗರ ಪ್ರದೇಶಗಳಿಂದ ತಂದು ಮಾರಾಟ ಮಾಡುತ್ತಾರೆ. ಅಲ್ಲದೆ ಕೆಲ ಅಂಗಡಿಯವರು ಈ ವಸ್ತುಗಳ ತಯಾರಿಕೆಯನ್ನು ತಮ್ಮ ಕಸುಬಾಗಿಸಿಕೊಂಡಿರುವುದಲ್ಲದೆ , ನೈಪುಣ್ಯತೆಯಿಂದ ಹೊಸಹೊಸ ವಿನ್ಯಾಸದ ಪರಿಕರಗಳನ್ನು ಸಿದ್ದಗೊಳಿಸಿ ಮಾರಾಟ ಮಾಡುತ್ತಾರೆ. ಈ ಅಂಗಡಿಗಳಿಂದಲೇ ತಮ್ಮ ಜೀವನ ಸಾಗಿಸುತ್ತಿರುವ ಇವರು ದನಗಳ ಜಾತ್ರೆ ಎಲ್ಲಿ ನಡೆದರು ಅಲ್ಲಿ ಹಾಜರಿರುತ್ತಾರೆ.
ಕಾರೇಹಳ್ಳಿ ಜಾತ್ರೆಗೆ ಹೋದರೆ ಸಾಕು ತಮ್ಮ ರಾಸುಗಳಿಗೆ ಬೇಕಾದ ಹಾಗೂ ಕೃಷಿ ಚಟುವಟಿಕೆಗೆ ಅವಶ್ಯಕ ವಸ್ತುಗಳು ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆ ಈ ಭಾಗದ ರೈತರದ್ದಾಗಿದ್ದು, ಈವೇಳೆ ಬಿಟ್ಟರೆ ನಂತರ ಪರದಾಡಬೇಕಾಗುತ್ತದೆ ಎಂಬ ದೃಷ್ಠಿಯಿಂದ ಕೆಲ ರೈತರು ಜಾತ್ರೆಯಲ್ಲಿನ ಅಂಗಡಿಗಳಲ್ಲಿ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿರುತ್ತಾರೆ.
ಒಟ್ಟಾರೆ ಇನ್ನಿತರ ಊರುಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಸೇರುವ ಅಂಗಡಿಗಳಿಗಿಂತ ಕಾರೇಹಳ್ಳಿಯಲ್ಲಿ ನಡೆಯುವ ಜಾತ್ರೆಯಲ್ಲಿ ಸೇರುವ ರಾಸುಗಳ ಅಲಂಕಾರಿಕ ವಸ್ತುಗಳ ಅಂಗಡಿಗಳು ಹೆಚ್ಚಾಗಿದ್ದು ಈ ಜಾತ್ರೆಯ ವಿಶೇಷವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ