ಹುಳಿಯಾರು ಹೋಬಳಿ ದೊಡ್ಡಬಿದರೆಯ ಶ್ರೀಪಾತಲಿಂಗೇಶ್ವರಸ್ವಾಮಿ, ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿಯ ಒಕ್ಕಲಿನವರು ಹಾಗೂ ಗ್ರಾಮಸ್ಥರಿಂದ ಭಾನುವಾರದಂದು ಗೊರಪ್ಪಗಳ ದೋಣಿ ತುಂಬುವ ಸೇವೆ ಭಕ್ತರ ಶ್ರದ್ದಾಭಕ್ತಿಯಲ್ಲಿ ಜರುಗಿತು.
ಹುಳಿಯಾರು ಹೋಬಳಿ ದೊಡ್ಡಬಿದರೆಯ ಪಾತಲಿಂಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಗೊರಪ್ಪಗಳ ದೋಣಿ ತುಂಬುವ ಸೇವೆ. |
ದೋಣಿಸೇವೆ ಅಂಗವಾಗಿ ಗ್ರಾಮದೇವತೆ ಕರಿಯಮ್ಮದೇವಿ,ಚಿಕ್ಕಬಿದರೆಕರಿಯಮ್ಮ,ಕೋಡಿಹಳ್ಳಿ ಕೊಲ್ಲಾಪುರದಮ್ಮ, ಹುಳಿಯಾರಿನ ಸಣ್ಣದುರ್ಗಮ್ಮನವರುಗಳನ್ನು ಪಾತಲಿಂಗೇಶ್ವರಸ್ವಾಮಿ ದೇವಾಲಯದಲ್ಲಿಗೆ ಕರೆದೊಯ್ಯದು, ನಂತರ ಸ್ವಾಮಿಯ ಮೂಲಸ್ಥಾನಕ್ಕೆ ಕರಿಯಮ್ಮದೇವಿ ಹಾಗೂ ಗೊರಪ್ಪಗಳು ತೆರಳಿ ಪೂಜೆಸಲ್ಲಿಸಿ ವಾದ್ಯಮೇಳದೊಂದಿಗೆ ಮೆರವಣಿಗೆ ಹೊರಟು, ಮೈಲಾರಲಿಂಗೇಶ್ವರನಿಗೆ ಜೈಕಾರ ಹಾಕಿದ ತಕ್ಷಣವೇ ಗೊರಪ್ಪಗಳು ಮೈದುಂಬಿ ಅಚ್ , ಅಚ್ ಎಂದು ತಮ್ಮದೇ ಆದ ಆರ್ಭಟ ಮಾಡುತ್ತಾ ಸಾಗಿದರು. ಹೀಗೆ ಸಾಗಿದ ಅವರುಗಳು ಪಾತಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿಗೆ ಆಗಮಿಸಿ ಸ್ವಾಮಿಗೆ ಮಹಾಮಂಗಳಾರತಿ ಮಾಡಿದ ಬಳಿಕ ಗೊರಪ್ಪಗಳಿಗಿಗಾಗಿ ದೋಣಿಯಲ್ಲಿ ಸಿದ್ದಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿದರು. ಮೈಲಾರಲಿಂಗಸ್ವಾಮಿಯ ಸ್ವರೂಪ ಎಂದು ನಂಬಿರುವ ಗೊರಪ್ಪಗಳ ಆರ್ಭಟವನ್ನು ಆಗಮಿಸಿದ್ದ ನೂರಾರು ಭಕ್ತರು ತದೇಕಚಿತ್ತದಿಂದ ನೋಡುತ್ತಿದ್ದರಲ್ಲದೆ, ಕೆಲ ಸಮಯ ಅಶ್ಚರ್ಯಚಕಿತರಾಗಿದ್ದು ಕಂಡುಬಂತು. ಆಗಮಿಸಿದ್ದ ಭಕ್ತಾಧಿಗಳಿಗೆ ಬಾಳೆಹಣ್ಣಿನಿಂದ ತಯಾರಿಸಿದ ಪ್ರಸಾದ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯವರು ಹಾಗೂ ಸುತ್ತಮುತ್ತಲ ಹಳ್ಳಿಯ ನೂರಾರು ಭಕ್ತರು ಪಾಲ್ಗೊಂಡಿದ್ದು ಗೊರಪ್ಪಗಳ ದೋಣಿ ಸೇವೆಯನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ