ವರದಿ : ಡಿ.ಆರ್.ನರೇಂದ್ರಬಾಬು
ಹುಳಿಯಾರು: ರಾಮನವಮಿ ಬಂತೆಂದರೆ ಹುಳಿಯಾರು ಸಮೀಪದ 2೦೦ ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಸಡಗರ. ಎಲ್ಲ ಹಬ್ಬಗಳನ್ನು ಇಲ್ಲಿ ಆಚರಿಸುತ್ತಾರಾದರೂ ರಾಮನವಮಿ ಮಾತ್ರ ವಿಶೇಷವಾಗಿ ಆಚರಿಸಲಾಗುತ್ತದೆ. ಇಡೀ ಗ್ರಾಮದ ಮಂದಿಯೆಲ್ಲ ಇಲ್ಲಿ ಶ್ರೀರಾಮನ ಭಕ್ತರಾಗಿದ್ದು ಇಲ್ಲಿರುವ ಶ್ರೀರಾಮನ ಮೂರ್ತಿ ದರ್ಶನ ಮಾಡಿದಲ್ಲಿ ಸಕಲಪಾಪ ಪರಿಹಾರವಾಗಲಿದೆ ಎಂಬ ನಂಬಿಕೆ ಈ ಜನರಲ್ಲಿದೆ.
ಈ ಹಳ್ಳಿಯಲ್ಲಿ ಯುಗಾದಿ, ದೀಪಾವಳಿ,ಮಹಾನವಮಿಗಿಂತ ರಾಮನವಮಿಯೇ ವಿಶೇಷ.ಯುಗಾದಿ ಕಳೆದು ಒಂಬತ್ತನೆ ದಿನವೇ ಶ್ರೀ ರಾಮ ನವಮಿ. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಬರುವ ರಾಮನವಮಿಯನ್ನು ಗ್ರಾಮದ ಮುಖ್ಯ ಹಬ್ಬವಾಗಿ ಆಚರಿಸುವ ಮೂಲಕ 9 ದಿನಗಳ ಕಾಲ ವಸಂತ ನವರಾತ್ರಿಯನ್ನು ಊರಿನಲ್ಲಿ ಆಚರಿಸುವುದು ರೂಢಿಯಲ್ಲಿದೆ.
ಗ್ರಾಮದ ಸುತ್ತ ನಡೆಯುವ ರಾಮಭಜನೆ( ಸಂಗ್ರಹ ಚಿತ್ರ) |
ಗ್ರಾಮದ ಕಷ್ಟ ನಿವಾರಿಸುವ ಶ್ರೀರಾಮ. |
ಈ ಹಬ್ಬದಲ್ಲಿ ಸಾಕಷ್ಟು ಕಟ್ಟುಪಾಡಿದ್ದು ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯ ದಿನದಿಂದ ರಾಮ ನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದ ಬಹುಪಾಲು ಮಂದಿ ತಿಂದುಣ್ಣುವವರಾದರೂ ಈ ಒಂಭತ್ತು ದಿನ ಮಾತ್ರ ಗ್ರಾಮದಲ್ಲಿ ಮಾಂಸಹಾರ ನಿಷಿದ್ಧ. ನಿತ್ಯ ಮುಂಜಾನೆ ಅಭಿಷೇಕಕ್ಕೆ ಹಾಜರಾಗಿ, ಸಂಜೆ ಮಡಿಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಗ್ರಾಮಸ್ಥರು ರಾಮಭಜನೆಯಲ್ಲಿ ತೊಡಗಿಕೊಳ್ಳುತ್ತಾರೆ. ವಾದ್ಯಪರಿಕರಗಳೊಂದಿಗೆ ಪ್ರತಿ ಬೀದಿಯಲ್ಲೂ ಭಜನೆ ಮಾಡಿಕೊಂಡು ತೆರಳುತ್ತಾರೆ.
ಶ್ರೀರಾಮನವಮಿಯ ಹಿಂದಿನ ದಿನವೇ ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿ ದೇವಸ್ಥಾನ ತೊಳೆದು,ಬಳಿದು ಚಪ್ಪರ ಹಾಕಿ ಮಾವಿನ ತೋರಣ ಕಟ್ಟುತ್ತಾರೆ. ಪ್ರತಿಯೊಂದು ಮನೆಯೂ ತಳಿರು ತೋರಣ ಕಟ್ಟಿ, ಬಣ್ಣದ ರಂಗೋಲಿಯಿಟ್ಟು ಸಿಂಗರಿಸುತ್ತಾರೆ. ಹಬ್ಬಕ್ಕೆ ಹೊಸಉಡುಗೆ ತೊಡುವ ಸಂಪ್ರದಾಯವಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟಿನ ಅಡುಗೆ ಮಾಡಿ ಸ್ವಾಮಿಗೆ ಎಡೆ ಮಾಡುತ್ತಾರೆ. ದೂರದೂರುಗಳಿಂದ ನೆಂಟರಿಷ್ಟರನ್ನು ಕರೆಸಿಕೊಂಡು ಎಲ್ಲರೂ ಒಟ್ಟಾಗಿ ಸಿಹಿ ಊಟ ಮಾಡುತ್ತಾರೆ.
ಹಬ್ಬದ ಐತಿಹ್ಯ: ಇಲ್ಲಿನ ರಾಮನವಮಿ ಆಚರಣೆಗೆ ಐದಾರು ದಶಕಗಳ ಇತಿಹಾಸವಿದೆ. ಗ್ರಾಮದಲ್ಲಿ 60 ವರ್ಷಗಳ ಹಿಂದೆ ಯಾವುದೇ ದೇವಾಲಯ ಇರಲಿಲ್ಲ. ತಮ್ಮ ಊರಿನ ಕಷ್ಟ ಕಾರ್ಪಣ್ಯಗಳಿಗೆ ಬೇರೆ ಊರಿನ ಗ್ರಾಮದೇವತೆಗಳನ್ನು ಆಶ್ರಯಿಸುತ್ತಿದ್ದರು.ಅದೊಂದು ದಿನ ಹುಳಿಯಾರಿನ ಗಾರೆ ಗಿರಿಯಪ್ಪನವರು ರಾಮ ಮಹಿಮೆಯನ್ನು ತಿಳಿಸಿ ಗ್ರಾಮದಲ್ಲಿ ರಾಮನವಮಿ ಆಚರಿಸುವಂತೆ ಮನವೊಲಿಸಿದರು. ಊರ ಮಧ್ಯೆ ಚಪ್ಪರ ಹಾಕಿಸಿ ಶ್ರೀರಾಮನ ಪೋಟೊ ಇಟ್ಟು ಭಜನೆ ಮಾಡಿಸುವಲ್ಲಿ ಸಫಲರಾದರು.ಸೋಮಸಂದ್ರದ ಬಾಲಪ್ಪನವರು ರಾಮ ಭಜನೆ ಹೇಳಿಕೊಟ್ಟು ಗ್ರಾಮದ ಜನರಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರಗಳನ್ನು ಬೆಳೆಯುವಂತೆ ಮಾಡಿದರು. ಇದಾದ ನಂತರ ಪವಾಡ ಸದೃಶ್ಯವಂಬಂತೆ ಕೆಲವರ ಸಮಸ್ಯೆಗಳು ದೂರಾಗಿ ಗ್ರಾಮ ಕೂಡ ಸುಭಿಕ್ಷವಾಯಿತು. ಈ ಹಿನ್ನಲೆಯಲ್ಲಿ ರಾಮನವಮಿ ಆಚರಣೆ ಆರಂಭವಾಯಿತು.
ಹುಳಿಯಾರಿನ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಮ್ಮಖದಲ್ಲಿ ಈ ಬಾರಿಯೂ ರಾಮನವಮಿಯ ಉತ್ಸವವನ್ನು ಅದ್ದೂರಿಯಾಗಿ ನಡೆಯಲಿದ್ದು ಶ್ರೀರಾಮನ ದೇವಸ್ಥಾನದಲ್ಲಿ ಮುಂಜಾನೆ ರಾಮನಿಗೆ ವಿಶೇಷ ಅಲಂಕಾರ, ಅಭಿಷೇಕ ನಡೆಯಲಿದೆ. ನಂತರ ವಾಡಿಕೆಯಂತೆ ರಾಮನ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಗ್ರಾಮ ದೇವತೆಗಳೊಂದಿಗೆ ಭಜನೆ ಮಾಡುತ್ತ ಹುಳಿಯಾರಿನ ಆಂಜನೇಯ ದೇವಸ್ಥಾನ, ಶನಿದೇವರ ದೇವಸ್ಥಾನ ಹಾಗೂ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ .ಅಲ್ಲಿ ಮಹಾಮಂಗಳಾರತಿ ಪಾನಕ ಕೋಸಂಬರಿ ವಿತರಣೆ ನಂತರ ಮಂಗಳ ವಾದ್ಯದೊಂದಿಗೆ ಪುನಃ ಗ್ರಾಮಕ್ಕೆ ವಾಪಸಾಗಲಿದ್ದಾರೆ. ಗ್ರಾಮದಲ್ಲಿನ ಎಲ್ಲಮ್ಮ,ಹೊಸೂರಮ್ಮ,ಗರುಡನಗುಡಿ, ಬಸವನ ಗುಡ್ಡೆ, ಮಾರುತಿ ಗುಡ್ಡೆಗಳಿಗೆ ಪೂಜೆ ಸಲ್ಲಿಸಿದ ನಂತರ ಶ್ರೀಸ್ವಾಮಿಯವರ ಮೂಲಗುಡಿಯಲ್ಲಿ ಗದ್ದುಗೆ ಮಾಡಲಾಗುವುದು. ಸಂಜೆ ನೂರೊಂದು ಎಡೆ ಸೇವೆ,ಬಿಲ್ಲುಗೂಡೂ ಸೇವೆ ಹಾಗೂ ರಾಮಭಜನೆ ನಡೆಯಲಿದ್ದು, ಮಹಾಮಂಗಳಾರತಿ ನಂತರ ಪಾನಕಪನಿವಾರ ವಿತರಣೆ ಮೂಲಕ ಹಬ್ಬದ ಒಂಭತ್ತು ದಿನಗಳ ಆಚರಣೆ ಅಂತ್ಯಗೊಳ್ಳಲಿದೆ.
ಒಟ್ಟಾರೆ ಈ ಭಾಗದಲ್ಲಿ ಲಿಂಗಪ್ಪನಪಾಳ್ಯದ ಗ್ರಾಮಸ್ಥರು ರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿರುವುದು ವಿಶೇಷ.
------------
ರಾಮನವಮಿ ಸಂಜೆ ಸಂಪೂರ್ಣ ರಾಮಾಯಣ ನಾಟಕ ರಾತ್ರಿಯಿಂದ ಬೆಳಿಗ್ಗೆವರೆಗೆ ಹಾಡುತ್ತಿದ್ದೆವು ಪಾತ್ರಧಾರಿಗಳ ಸಮಸ್ಯೆ ಹಾಗೂ ನಾಟಕಕ್ಕೆ ಖರ್ಚು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ನಾಟಕವಾಡುವುದನ್ನು ನಿಲ್ಲಿಸಲಾಗಿದೆ, ೫೦ವರ್ಷಗಳಿಂದ ಆಡುತ್ತಿದ್ದ ನಾಟಕವನ್ನು ನಿಲ್ಲಿಸಿರುವುದು ಬೇಸರ ತರುತ್ತಿದೆ: ರಾಜಪ್ಪ , ಗುಡಿಗೌಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ