ನೂತನ ಸಂವತ್ಸರದ ಮೊದಲ ಹಬ್ಬವಾಗಿರುವ ಹಾಗೂ ರೈತಾಪಿ ಜನರ ಹೊಸವರ್ಷದ ಹಬ್ಬವಾಗಿ ಬಿಂಬಿತವಾಗಿರುವ ಯುಗಾದಿ ಹಬ್ಬದ ಆಚರಣೆಗೆ ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಸಡಗರದ ಸಿದ್ದತೆ ಕಂಡುಬಂತು.
ಯುಗಾದಿಗೆ ಮಾವು ಬೇವಿನೊಂದಿಗೆ ಸಿದ್ದತೆ ನಡೆಸುತ್ತಿರುವ ರೈತ. |
ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಅಕ್ಕಪಕ್ಕದ ಹಳ್ಳಿಗಳಿಂದ ಜನ ಹಬ್ಬದ ಮುನ್ನಾದಿನವಾದ ಶುಕ್ರವಾರವೂ ಸಹ ಪಟ್ಟಣಕ್ಕೆ ಆಗಮಿಸಿದ್ದು ರಾಜ್ ಕುಮಾರ್ ರಸ್ತೆ, ರಂಗನಾಥಸ್ವಾಮಿ ದೇವಾಲಯ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಹೆಚ್ಚು ಜನದಟ್ಟಣೆ ಸೇರಿತ್ತು. ದಿನಸಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಜನರು ಜೇನುನೊಣದಂತೆ ಮುತ್ತಿಕೊಂಡಿದ್ದರಿಂದ ಅಂಗಡಿದಾರರಿಗೆ ಸ್ವಲ್ಪವೂ ವಿರಾಮವಿಲ್ಲದ ಹಾಗೆ ವ್ಯಾಪಾರ ನಡೆಯುತ್ತಿತ್ತು. ಈ ಭಾಗದ ಹೆಚ್ಚು ಜನ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಹಬ್ಬ ಹಿನ್ನಲೆಯಲ್ಲಿ ಆಗಮಿಸಿದ್ದರಿಂದ ಬೆಂಗಳೂರು ಕಡೆಯಿಂದ ಬರುವ ಬಸ್ ಗಳು ಸಹ ರಶ್ ಆಗಿದ್ದವು.
ಪಟ್ಟಣದ ಮನೆಗಳಲ್ಲಿ ಹಬ್ಬಕ್ಕೆ ಸಿದ್ದತೆ ನಡೆದಿದ್ದು ಮಹಿಳೆಯರು ಮನೆಯ ಸ್ವಚ್ಚಗೊಳಿಸುವ ಕಾರ್ಯ ಮಾಡಿಕೊಂಡರೆ ಮನೆ ಯಜಮಾನರು ತೋಟಕ್ಕೆ ಹೋಗಿ ಮಾವಿನಸೊಪ್ಪು, ಬೇವಿನ ಹೂ ತರುವಲ್ಲಿ ಮುಂದಾಗಿದ್ದರು. ಸಂಜೆಯ ನಂತರ ಮಹಿಳೆಯರು ಮನೆ ಮುಂದೆ ಸಾರಿಸಿ ಬಗೆಬಗೆಯ ಬಣ್ಣದ ರಂಗೋಲಿ ಹಾಕಿದ್ದಲ್ಲದೆ ಹಬ್ಬದ ಶುಭಾಷಯದ ನುಡಿಗಳನ್ನು ಸಹ ಬರೆದಿದ್ದರು.
ಕಳೆದ ವರ್ಷ ಮಾರ್ಚ ಅಂತ್ಯದಲ್ಲಿ ಹಬ್ಬ ಬಂದಿದುದರಿಂದ ಮಾವಿನಸೊಪ್ಪು ಹಾಗೂ ಬೇವಿನ ಹೂಗಾಗಿ ಜನ ಪರದಾಡುವಂತಾಗಿತ್ತು ಆದರೆ ಈ ಬಾರಿ ಹಬ್ಬ ಸರಿಯಾಗಿ ವಸಂತಕಾಲದ ಸಮಯದಲ್ಲಿ ಬಂದಿರುವುದರಿಂದ ಮಾವಿನಮರಗಳು ಹಾಗೂ ಬೇವಿನ ಮರಗಳು ಚಿಗುರೊಡೆದಿರುವುದಲ್ಲದೆ ಬೇವಿನ ಹೂ ಸಹ ಹೆಚ್ಚಾಗಿ ಸಿಗುವಂತಾಗಿದೆ. ರಸ್ತೆ ಬದಿಯ ಬೇವಿನಮರಗಳಲ್ಲೂ ಸಹ ಬೇವಿನ ಹೂವಿನ ಕಂಪು ಬೀರುತ್ತಿದ್ದು ಕೆಲವರು ಈ ಮರಗಳಲ್ಲೇ ಹೂ ಬಿಡಿಸಲು ಮುಂದಾಗಿದ್ದರು.
ಈಬಾರಿ ಉತ್ತಮ ಮಳೆಯಾಗಿ ಉತ್ತಮ ಫಸಲು ರೈತರ ಕೈಸೇರಿದ್ದು ಹಬ್ಬದ ಸಡಗರವನ್ನು ಹೆಚ್ಚು ಇಮ್ಮಡಿಗೊಳಿಸಿದ್ದು ಎಲ್ಲೆಲ್ಲೂ ಹಬ್ಬಕ್ಕೆ ಸಡಗರದ ಸಿದ್ದತೆ ಕಂಡುಬರುತ್ತಿದ್ದು ಹೊಸದಿನದ ಆಚರಣೆಯ ತವಕದಲ್ಲಿ ಜನರಿದ್ದು ಎಲ್ಲರಲ್ಲೂ ಹಬ್ಬದ ಕಾತುರತೆ ವ್ಯಕ್ತವಾಗುತ್ತಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ