ವರದಿ : ಡಿ.ಆರ್.ನರೇಂದ್ರಬಾಬು
ಹುಳಿಯಾರು : ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಮಾಡಿಕೊಳ್ಳಲು ಇದೇ ತಿಂಗಳ ೩೧ ಅಂತಿಮ ಗಡುವು ನೀಡಿದ್ದು, ಅರ್ಜಿಸಲ್ಲಿಸಿ ಹಣ ಪಾವತಿಸಿ ಸಕ್ರಮಗೊಳಿಸಿಕೊಳ್ಳದವರ ಆಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಇಲಾಖೆ ಮುಂದಾಗುವುದೆ ಎಂಬ ಪ್ರಶ್ನೆ ಪಂಪ್ ಸೆಟ್ ದಾರರಲ್ಲಿ ಮೂಡಿದೆ.
ಹುಳಿಯಾರಿನ ಬೆಸ್ಕಾಂ ಕಛೇರಿ ಮುಂದೆ ಆಕ್ರಮ-ಸಕ್ರಮದ ಬಗ್ಗೆ ಪ್ರಚಾರ ಕಾಣದಿರುವುದು. |
ಅಕ್ರಮ-ಸಕ್ರಮ ಯೋಜನೆಯಡಿ ಇಂದು ಅರ್ಜಿಸಲ್ಲಿಸಲು ಕಡೆಯ ದಿನವಾಗಿದ್ದು ಕೃಷಿ ಬಳಕೆಯ ಅಕ್ರಮ ಕೃಷಿ ಪಂಪ್ ಸೆಟ್‌ಗಳನ್ನು ಸಕ್ರಮ ಮಾಡಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಾ ಬಂದಿದ್ದರೂ ಸಹ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ರೈತರಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಅಲ್ಲದೆ ಈ ಬಗ್ಗೆ ರೈತರಿಗೆ ಅರಿವುಂಟು ಮಾಡಬೇಕಿದ್ದ ಬೆಸ್ಕಾಂ ಕೂಡ ರೈತರಿಗೆ ಯಾವುದೇ ಸೂಚನೆಯನ್ನೂ ನೀಡದೆ ಕೇವಲ ಕಚೇರಿಯ ಫಲಕದಲ್ಲಿ ಪ್ರಕಟಣೆಗಷ್ಟೆ ಸೀಮಿತಗೊಳಿಸಿಕೊಂಡಿದ್ದು ಹಿನ್ನಡೆಗೆ ಕಾರಣವಾಗಿದೆ.
ಅಂತಿಮ ದಿನ ಸಮೀಪಿಸುತ್ತಿದ್ದರೂ ಸಹ ಹೋಬಳಿಯ ಬೆಸ್ಕಾಂ ಇಲಾಖೆಯಿಂದ ಯಾವುದೇ ಪ್ರಚಾರ ಕಂಡುಬರದೆಯಿದ್ದು ರೈತರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದಂತಾಗಿದೆ.
ಸದ್ಯ ಕೃಷಿ ಚಟುವಟಿಕೆ ಕೂಡ ವಾಣಿಜ್ಯಕರಣವಾಗಿದ್ದು ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿಕೊಳ್ಳುವುದು ಮಾಮೂಲಿಯಾಗಿದೆ. ಪ್ರತಿಯೊಬ್ಬರು ಜಮೀನಿನಲ್ಲೂ ಕನಿಷ್ಠ ಎರಡರಿಂದ ಮೂರು ಬೋರ್ ವೆಲ್ ಇದ್ದರೂ ಸಹ ವಿದ್ಯುತ್ ಸಂಪರ್ಕಕ್ಕೆ ಪರದಾಡುವ ಸ್ಥಿತಿ ಇದೆ. ಹತ್ತಿರದ ಟಿಸಿಯಿಂದ ವಿದ್ಯುತ್ ಸಂಪರ್ಕವನ್ನು ತಾವೇ ಪಡೆದುಕೊಳ್ಳುವ ರೈತರು ಇದಕ್ಕಾಗಿ ಇಲಾಖೆಯನ್ನೇನು ಸಂಪರ್ಕಿಸುವುದಿಲ್ಲ. ಕೃಷಿ ಬಳಕೆಗೆ ಬಳಸುವ ವಿದ್ಯುತ್ ಉಚಿತವಾದ್ದರಿಂದ ಈ ಬಗ್ಗೆ ಇಲಾಖೆಯವರೂ ಸಹ ಯಾವೊಬ್ಬ ರೈತರಿಗೂ ಇದು ಆಕ್ರಮ ಸಂಪರ್ಕ ಎಂದು ಹೇಳಲು ಮುಂದಾಗುವುದಿಲ್ಲ. ಇದನ್ನು ಕಡಿತಗೊಳಿಸಿದಲ್ಲಿ ರೈತರು ಗಲಾಟೆಮಾಡುತ್ತಾರೆಂಬ ದೃಷ್ಟಿಯಿಂದ ಇದರ ಬಗ್ಗೆ ಇಲಾಖೆಯವರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ರೈತರು ಬೋರ್ ವೆಲ್ ನೀರನ್ನವಲಂಬಿಸಿ ಬೆಳೆ ಬೆಳೆಯುತ್ತಿದ್ದು ಇದನ್ನೇ ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೭೦೨೨ ಬೋರ್ ವೆಲ್ ಗಳು ನೊಂದಾಯಿತವಾಗಿದೆ. ಸರಿಸುಮಾರು ಇಷ್ಟೆ ಆಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡವರಿದ್ದು ಪ್ರತಿಯೊಬ್ಬರು ಹತ್ತಿರದ ಟಿಸಿ ಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ತೊಡಗಿಕೊಂಡಿದ್ದಾರೆ. ಅಧಿಕೃತವಾಗಿ ಅನುಮತಿ ಪಡೆದವರು ಹಾಗೂ ಅನಧಿಕೃತವಾಗಿ ವಿದ್ಯುತ್ ಸಂಪರ್ಕಪಡೆದವರೂ ಇಬ್ಬರೂ ಸಹ ಯಾವುದೇ ಅಡ್ಡಿಯಿಲ್ಲದೆ ವಿದ್ಯುತ್ ಸಂಪರ್ಕ ಪಡೆದುಕೊಂಡು ಪಂಪ್ ಸೆಟ್ ಗಳನ್ನು ಓಡಿಸುತ್ತಿದ್ದಾರೆ.
ಇದೀಗ ಸರ್ಕಾರ ಅಕ್ರಮ - ಸಕ್ರಮದಲ್ಲಿ ರೈತರ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಲು ಮುಂದಾಗಿ ಸಕ್ರಮಗೊಳಿಸದವರಿಗೆ ವಿದ್ಯುತ್ ನೀಡುವುದಿಲ್ಲ ಎಂದು ಹೇಳಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ.
ಒಟ್ಟಾರೆ ಅಕ್ರಮ-ಸಕ್ರಮದ ಬಗ್ಗೆ ಸೂಕ್ತ ಪ್ರಚಾರ ಹಾಗೂ ಕಡ್ಡಾಯವಾಗಿ ಹಣ ಪಾವತಿಸಿ ಸಕ್ರಮಗೊಳಿಸಿಕೊಂಡವರಿಗೆ ಮಾತ್ರ ವಿದ್ಯುತ್ ಎಂಬ ಆದೇಶವಿಲ್ಲದಿರುವುದರಿಂದ ಬಳಕೆದಾರರಲ್ಲಿ ಗೊಂದಲವನ್ನುಂಟು ಮಾಡಿದೆ. ಹಣ ಕಟ್ಟಿ ಸಕ್ರಮ ಮಾಡಿಕೊಳ್ಳುವುದೋ, ಈಗ ಹೇಗೆ ಪಂಪ್ ಸೆಟ್ ಓಡಿಸುತ್ತಿದ್ದೇವ್ ಹಾಗೇಯೇ ಮುಂದುವರೆಯುವುದೋ ಎಂಬ ಮನೋಭಾವ ಎಲ್ಲರಲ್ಲೂ ಮೂಡಿದ್ದು ನಾಳೆಯಿಂದ ಇಲಾಖೆ ಕ್ರಮ ಏನೆಂಬುದನ್ನು ಕಾದುನೋಡಬೇಕಿದೆ.
------------------
ಅಕ್ರಮ-ಸಕ್ರಮ ಯೋಜನೆಯಡಿ ರೈತರು ಪಂಪ್ ಸೆಟ್ ಗಳನ್ನು ಸಕ್ರಮ ಮಾಡಿಕೊಳಬೇಕು ಎಂದು ಆದೇಶವನ್ನು ಪ್ರತಿ ವರ್ಷವೂ ಹೊರಡಿಸುತ್ತಿದ್ದಾರೆ ಹೊರತು ಅದರ ಪ್ರಯೋಜನವೇನು ಎಂಬುದು ಇದುವರೆಗೂ ತಿಳಿದಿಲ್ಲ. ನಾವು ದುಡ್ಡುಕಟ್ಟುವುದರಿಂದ ಹೆಚ್ಚಿನ ಪ್ರಯೋಜನವೇನಿಲ್ಲ. ಹಣ ಕಟ್ಟುವವರು , ಹಣಕಟ್ಟದಿರುವವರು ಇಬ್ಬರೂ ವಿದ್ಯುತ್ ಸಂಪರ್ಕ ಪಡೆಯಲು ಯಾವುದೆ ಅಡ್ಡಿ ಇರುವುದಿಲ್ಲ : ಬಸವಣ್ಣ ದೊಡ್ಡಬಿದರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ