ಮಾರುಕಟ್ಟೆಯಲ್ಲಿ ಎರಡರಿಂದ ಮೂರು ರೂಪಾಯಿಗೆ ಒಂದರಂತೆ ದೊರೆಯುತ್ತಿದ್ದ ನಿಂಬೆಹಣ್ಣು ದುಬಾರಿಯಾಗಿದ್ದು ದೊರೆಯುವುದೆ ಕಷ್ಟವಾಗಿದೆ. ಕಳೆದೊಂದು ವಾರದಿಂದ ಸುತ್ತಮುತ್ತಲ ಹಳ್ಳಿಗಳಲ್ಲಿ ಜಾತ್ರೆ ಪ್ರಯುಕ್ತ ಮಾಂಸದೂಟದ ಬಾನದ ಪರಿಣಾಮವಾಗಿ ನಿಂಬೆಹಣ್ಣಿಗೆ ಹೆಚ್ಚು ಬೇಡಿಕೆಯಾಗಿ ದರ ಗಗನಕ್ಕೇರಿದೆ. ಸುತ್ತ ಶ್ರೀರಾಂಪುರ, ಹೊಸದುರ್ಗದಲ್ಲೂ ಸಹಿತ ನಿಂಬೆಹಣ್ಣು ದೊರೆಯದಂತಾಗಿ ದುಡ್ಡು ಎಷ್ಟಾದರೂ ಸರಿ ನಿಂಬೆಹಣ್ಣು ಬೇಕೆಂದರೂ ಸಿಗದಂತಾಗಿದೆ.
ಸದ್ಯ ರಾಮನವಮಿ ಕೂಡ ಬಂದಿದ್ದು ಪಾನಕಕ್ಕೆ ಪ್ರತಿಯೊಂದು ಮನೆಯಲ್ಲೂ ಸಹ ನಿಂಬೆಹಣ್ಣು ಬೇಕಾಗಿದೆ. ನಾಡಕಛೇರಿ ಬಳಿಯ ನಿತ್ಯ ತರಕಾರಿ ಮಾರುಕಟ್ಟೆಯಲ್ಲೂ ನಿಂಬೆಹಣ್ಣು ಸಿಗದೆ ಇದ್ದೊಬ್ಬರು ೨೦ ರೂ ಗೆ ಎರಡುಮೂರರಂತೆ ಮಾರಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಪಟ್ಟಣದಲ್ಲಿ ಸ್ಥಳೀಯವಾಗಿ ದೊರೆಯುತ್ತಿದ್ದ ನಿಂಬೆಹಣ್ಣು ಈ ಬೇಸಿಗೆಯಲ್ಲಿ ಇಳುವರಿ ಇಲ್ಲದಂತಾಗಿ ಬೇಡಿಕೆ ಉಂಟಾಗಿದೆ. ಸುತ್ತಮುತ್ತ ಹಳ್ಳಿಗಳಿಂದ , ಹಾಸನ, ತಿಪಟೂರು ಮಾರುಕಟ್ಟೆಯಿಂದ ವಾರಕ್ಕೆ ಕನಿಷ್ಟ ೩೦೦೦ ನಿಂಬೆಹಣ್ಣು ತಂದು ಮಾರುತ್ತಿದ್ದು ಇಂದು ಬೇಕೆಂದರೂ ಒಂದೇಒಂದು ನಿಂಬೆಹಣ್ಣು ದೊರೆಯದಂತಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಖಾಜಾಪೀರ್.
ಒಟ್ಟಾರೆ ಬೇಸಿಗೆಯ ಬಿಸಿಲಿಗೂ, ಹಬ್ಬಗಳ ಬಾನಗಳಿಗೂ, ರಾಮನವಮಿಯ ಪಾನಕಕ್ಕೂ ಬೇಕಾಗಿದ್ದ ನಿಂಬೆಹಣ್ಣು ಇಷ್ಟೊಂದು ಬೇಡಿಕೆಯುಂಟಾಗಿರುವುದು ಅಚ್ಚರಿ ಮೂಡಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ