ಎರಡನೇ ದಿನಕ್ಕೆ ಕಾಲಿಟ್ಟ ಧರಣಿ : ಇತ್ತ ಸುಳಿಯದ ಅಧಿಕಾರಿಗಳು ಧರಣಿ ಸ್ಥಳದಲ್ಲೇ ಅಡುಗೆ : ಸ್ಪಂದಿಸದಿದ್ದರೆ ಅಹೋರಾತ್ರಿ ಧರಣಿ
ಖಾತ್ರಿ ಯೋಜನೆಯಡಿ ನಿರ್ಮಿಸಿರುವ ದನದಕೊಟ್ಟಿಗೆಮನೆ ಬಿಲ್ ಪಾವತಿಸಿಲ್ಲ ಹಾಗೂ ಬಸವೇಶ್ವರನಗರ ಬಡಾವಣೆಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲವೆಂದು ಅರೋಪಿಸಿ ಸೋಮವಾರ ಪಂಚಾಯ್ತಿಗೆ ಬೀಗಹಾಕುವ ಮೂಲಕ ಪ್ರಾರಂಭವಾದ ಪ್ರತಿಭಟನೆ ಮಂಗಳವಾರವೂ ನಡೆಯಿತು.
ಹುಳಿಯಾರು ಗ್ರಾ.ಪಂ. ಮುಂದೆಯೇ ಅಡುಗೆ ಮಾಡಿ ಪ್ರತಿಭಟಿಸುತ್ತಿರುವ ಬಸವೇಶ್ವರ ನಗರ ನಿವಾಸಿಗಳು. |
ಸೋಮವಾರದಂದು ಗ್ರಾ.ಪಂ.ಕಛೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದ ಧರಣಿನಿರತರರು ಪೊಲೀಸರ ಮಾತಿನನಂತೆ ಬೀಗ ತೆಗೆದರಾದರೂ ಸಹ ತಮ್ಮ ಪಟ್ಟು ಬಿಡದೆ ಪಂಚಾಯ್ತಿ ಅಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಸಮಸ್ಯೆ ಬಗೆಹರಿಸಲಿ ಎಂದು ಪ್ರತಿಭಟನೆಯನ್ನು ಮುಂದುವರೆಸಿದ್ದರು. ಸಂಜೆಯ ನಂತರ ಬಂದ ಪಿಡಿಓ ಮಂಗಳವಾರ ಬೆಳಿಗ್ಗೆ ಕಛೇರಿಯಲ್ಲಿಗೆ ಬಂದು ದನದಕೊಟ್ಟಿಗೆಯ ಬಿಲ್ ನೀಡುತ್ತೇವೆ ಎಂದು ಹೇಳಿದ್ದರು. ಅವರ ಮಾತಿನಂತೆ ಬಸವೇಶ್ವರನಗರ ನಿವಾಸಿಗಳು ಮಂಗಳವಾರ ಬೆಳಿಗ್ಗೆ ಗ್ರಾ.ಪಂ ಹತ್ತಿರ ಬಂದಾಗ ಪಿಡಿಓ ಆಗಲಿ ಕಂಪ್ಯೂಟರ್ ಅಪರೇಟರ್ ಆಗಲಿ ಇಲ್ಲದ್ದನ್ನು ಕಂಡು ಆಕ್ರೋಶಿತರಾಗಿ ಕೂಡಲೇ ಪ್ರತಿಭಟನೆಗೆ ಮುಂದಾದರು.
ಪಿಡಿಓ ಅವರಿಗೆ ಪೋನ್ ಮಾಡಿ ಪಂಚಾಯ್ತಿಗೆ ಬರುತ್ತೇನೆಂದು ಹೇಳಿದ್ದರಲ್ಲ ಎಂದು ಕೇಳಿದರೆ ಚಿಕ್ಕನಾಯಕನಹಳ್ಳಿಯಲ್ಲಿ ಕೂತು ಖಾತ್ರಿ ಯೋಜನೆಯ ಬಿಲ್ ಪಾವತಿ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಖಾತ್ರಿ ಯೋಜನೆಯಡಿ ದನದಕೊಟ್ಟಿಗೆಗೆ ೩೫ಸಾವಿರ ಪಾವತಿ ಮಾಡಬೇಕಿದ್ದು , ಕೇವಲ ೧೬ಸಾವಿರ ಕೊಡುವುದಾಗಿ ಹೇಳಿದ್ದ ಪಿಡಿಓ ಇದೀಗ ಪ್ರತಿಭಟನೆ ನಂತರ ೧೯ಸಾವಿರ ಹಾಕುತ್ತಿರುವುದಾಗಿ ಹೇಳುತ್ತಿದ್ದು, ಪಂಚಾಯ್ತಿ ಹತ್ತಿರ ಬಾರದೆ ಎಲ್ಲೋ ಕುಳಿತು ಅಧಿಕಾರ ನಡೆಸುತ್ತಿದ್ದಾರೆ ಎಂದು ಎಸ್.ಎಸ್.ಆರ್. ಚಿದಾನಂದಮೂರ್ತಿ ಆರೋಪಿಸಿದರು.
ಹುಳಿಯಾರು ಪಂಚಾಯ್ತಿಯಲ್ಲೇ ಕಂಪ್ಯೂಟರ್ ವ್ಯವಸ್ಥೆಯಿದ್ದು ಇಲ್ಲಿಯೇ ಥಂಬ್ ಇಂಪ್ರೆಷನ್ ಕೊಟ್ಟು ಬಾಕಿ ಇರುವ ಬಿಲ್ಲನ್ನು ಪಾವತಿಸಬಹುದಾಗಿದ್ದ ಪಿಡಿಓ ಅವರು ತಮ್ಮ ಕೆಲಸದ ಅವಧಿಯಲ್ಲೇ ಚಿ.ನಾ.ಹಳ್ಳಿಗೆ ಹೋಗಿರುವುದು ಎಷ್ಟರಮಟ್ಟಿಗೆ ಸರಿ ಈ ಬಗ್ಗೆ ಮೇಲಾಧಿಕಗಳು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ತಿಳಿಸಿದರು.
ಧರಣಿ ಸ್ಥಳದಲ್ಲೆ ಅಡುಗೆ : ಮಂಗಳವಾರ ಬೆಳಿಗ್ಗಿನಿಂದ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರು ಪಂಚಾಯ್ತಿ ಮುಂದೆಯೇ ಅಡುಗೆ ತಯಾರಿಸಿ ಎಲ್ಲೂ ಕದಲಡೆ ಪ್ರತಿಭಟಿಸಿದರು. ಇಓ ಹಾಗೂ ಪಿಡಿಓ ಅವರುಗಳು ಸ್ಥಳಕ್ಕೆ ಬಂದು ತಮ್ಮ ಸಮಸ್ಯೆಯನ್ನು ಬಗೆಹರಿಸುವವರೆಗೂ ತಮ್ಮ ಧರಣಿಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಧರಣಿನಿರತರು ಈಗಲೂ ಸ್ಪಂದಿಸದಿದ್ದರೆ ಉಗ್ರರೀತಿಯ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಶಿಧರ್,ಜಯಣ್ಣ,ಚನ್ನಬಸವಯ್ಯ,ಪ್ರಭು,ಕುಮಾರ,ಓಂಕಾರಮೂರ್ತಿ,ಈಶ್ವರಯ್ಯ,ಬಸವರಾಜು,ಬಸವೇಶ್ವರನಗರದ ನಿವಾಸಿಗಳು ಸೇರಿದಂತೆ ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದರು.
ದನದಕೊಟ್ಟಿಗೆಮನೆ ನಿರ್ಮಿಸಿ ಸೂಕ್ತ ದಾಖಲೆಗಳನ್ನು ನೀಡಿದ್ದು, ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುವಾಗ ತಪ್ಪು ಎಂಟ್ರಿ ಮಾಡಿ ಒಂದು ವರ್ಷ ಕಳೆಯುತ್ತಾ ಬಂದರೂ ಅದನ್ನು ಸರಿಪಡಿಸಿ ಬಿಲ್ ನೀಡದೆ ಇದುವರೆಗೂ ಪಂಚಾಯ್ತಿ ಬಾಗಿಲಿಗೆ ಅಲೆಸುತ್ತಿದ್ದಾರೆ : ಮೈಲಾರಿ, ಸೋಮಜ್ಜನಪಾಳ್ಯ. ----------- |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ