ಎಚ್೧ಎನ್೧ ಸಮಸ್ಯೆಗೆ ಎಚ್ಚೆತ್ತ ಸ್ಥಳೀಯ ಪಂಚಾಯ್ತಿ ಹಂದಿ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದ ವೇಳೆ ಹಂದಿ ಸಾಕಣೆದಾರರ ತೀವ್ರ ಪ್ರತಿರೋಧ ಹಾಗೂ ಪಿಡಿಓ, ಅಧ್ಯಕ್ಷರ ವಿರುದ್ದ ನಡೆದ ಮಾತಿನ ಘರ್ಷಣೆಯಿಂದಾಗಿ ಕಾರ್ಯಾಚರಣೆಯನ್ನು ಅರ್ಧಕ್ಕೆ ಸ್ಥಗಿತ ಗೊಳಿಸಿದ ಘಟನೆ ಬುಧವಾರ ಬೆಳಿಗ್ಗೆ ಪಟ್ಟಣದಲ್ಲಿ ನಡೆಯಿತು.
ಲಾರಿ ಅಡ್ಡಗಟ್ಟಿರುವ ಹಂದಿ ಸಾಕಣೆದಾರರು. |
ಪೊಲೀಸ್ ಬಂದೋಬಸ್ತ್ ನಲ್ಲಿ ಹಂದಿ ಹಿಡಿದಿರುವ ಲಾರಿ. |
ಅನೈರ್ಮಲ್ಯ ಸಮಸ್ಯೆ ಹಾಗೂ ಎಲ್ಲೆಡೆ ಹಬ್ಬಿದ ಎಚ್೧ ಎನ್೧ ರೋಗಕ್ಕೆ ಕಾರಣವಾಗಿದ್ದ ಹಂದಿಗಳನ್ನು ಹಿಡಿಯುವಂತೆ ಪಂಚಾಯ್ತಿಗೆ ಸಾರ್ವಜನಿಕರು ದೂರುನೀಡಿದ್ದ ಹಿನ್ನಲೆಯಲ್ಲಿ
ಹಂದಿ ಬಗ್ಗೆ ಎಚ್ಚರವಹಿಸುವಂತೆ ಹಂದಿ ಸಾಕಣೆದಾರರಿಗೆ ಹತ್ತು ದಿನಗಳ ಮುಂಚಿತವಾಗಿಯೇ ನೋಟೀಸ್ ನೀಡಿದ್ದಲ್ಲದೆ ಗ್ರಾಮದಲ್ಲಿ ಟಾಂ ಹಾಕಿ ಸಾರುವ ಮೂಲಕ ಹಂದಿ ಕಾರ್ಯಾಚರಣೆ ಬಗ್ಗೆ ಮಾಲೀಕರಿಗೆ ಸೂಚನೆ ನೀಡಲಾಗಿತ್ತು.ಅಲ್ಲದೆ ಪಿಡಿಓ ಅವರೇ ಖುದ್ದಾಗಿ ಹಂದಿ ಮಾಲೀಕರ ಮನೆಗೆ ತೆರಳಿ ಹಂದಿಯನ್ನು ಪಟ್ಟಣದೊಳಗೆ ಬಿಡದಂತೆ ಹಾಗೂ ೩ ಕಿಮೀ ದೂರ ಸಾಗಿಸುವಂತೆ ತಿಳಿಸಿದ್ದರು ಸಹ ಎಚ್ಚೆತ್ತುಕೊಳ್ಳದ ಹಂದಿ ಮಾಲೀಕರ ಕ್ರಮದಿಂದ ಹುಳಿಯಾರು ಪಟ್ಟಣದಲ್ಲಿ ಹಂದಿ ಹಿಡಿಸುವ ಕಾರ್ಯಾಚರಣೆಗೆ ಬುಧವಾರ ಮುಂದಾಗಲಾಗಿತ್ತು.
ರಾತ್ರಿಯೇ ವಾಹನ ಸಮೇತ ಬಂದಿದ್ದ ಹಂದಿ ಹಿಡಿಯುವವರು ಬೆಳ್ಳಂಬೆಳಗ್ಗೆ ಪಂಚಾಯ್ತಿ ಸಿಬ್ಬಂದಿ ಜೊತೆ ಹಂದಿ ಹಿಡಿಯಲು ಮುಂದಾಗಿ ಸುಮಾರು ೨೫ ರಿಂದ ೩೦ ಹಂದಿ ಹಿಡಿದಿದ್ದೆ ಪ್ರತಿರೋಧಕ್ಕೆ ಕಾರಣವಾಯಿತು. ಪಿಡಿಓ ಅಡವೀಶ್ ಕುಮಾರ್ ಹಾಗೂ ಅಧ್ಯಕ್ಷೆ ಕಾಳಮ್ಮ ಅವರ ಮೇಲೆ ಗರಂಆಗಿ ಮಾತಿನಚಕಮುಕಿಗೆ ಮುಂದಾದರು.
ರಾತ್ರಿಯೇ ಕಾರ್ಯಾಚರಣೆ ನಡೆಸಿ ಹಂದಿ ಹಿಡಿಸಿದ್ದು ಸರಿಯಲ್ಲ, ಯುಗಾದಿ ಹಬ್ಬದವರೆಗೂ ಸಮಯ ನೀಡಲೇ ಬೇಕಲ್ಲದೆ ಈ ಕೂಡಲೇ ಹಿಡಿದಿರುವ ಹಂದಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಒತ್ತಾಯಿಸಿದರು. ಪೊಲೀಸ್ ಠಾಣೆಯ ಮುಂದೆಯೇ ಗಂಟೆಗಳಷ್ಟು ಕಾಲ ಏರಿದ ಧ್ವನಿಯಲ್ಲಿ ಗದ್ದಲ ನಡೆಯಿತು.ಹಂದಿ ಹಿಡಿಯುವ ಕಾರ್ಯಾಚರಣೆ ಬಗ್ಗೆ ಪರ ಹಾಗೂ ವಿರೋಧ ವ್ಯಕ್ತವಾಯಿತಲ್ಲದೆ, ಗ್ರಾ.ಪಂ.ಸದಸ್ಯರಾದ ಜಹೀರ್ ಸಾಬ್, ಪುಟ್ಟಣ್ಣ,ಶಿವಣ್ಣ ಅವರು ಪಿಡಿಓ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಹಂದಿ ಹಿಡಿಯುವುದರ ವಿರುದ್ದ ಯಾವುದೇ ಬೆದರಿಕೆ ಬಂದರೂ ಹಿಂಜರಿಯದಂತೆ ಬೆಂಬಲ ಸೂಚಿಸಿದರು.
ಈ ಮಧ್ಯೆ ಹಂದಿ ತುಂಬಿಕೊಂಡ ಲಾರಿ ನಂದಿಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದನ್ನು ಅರಿತ ಹಂದಿ ಮಾಲೀಕರು ಲಾರಿಯನ್ನು ಹಿಂಬಾಲಿಸಿ ಹೋಗಿ ಅಡ್ಡಗಟ್ಟಿದರಲ್ಲದೆ ಹಿಡಿದಿರುವ ಹಂದಿಗಳನ್ನು ವಾಪಸ್ಸ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಲಾರಿ ಅಡ್ಡಗಟ್ಟಿದ್ದ ಸ್ಥಳಕ್ಕಾಗಮಿಸಿದ ಪಿಎಸೈ ಪ್ರವೀಣ್ ಕುಮಾರ್ ಹಂದಿ ಕಾರ್ಯಾಚರಣೆಗೆ ಅಡ್ಡಿಪಡಿಸುವುದು ಕಾನೂನು ಉಲ್ಲಂಘನೆಯಾಗುವುದೆಂದು ಎಚ್ಚರಿಸಿದರಲ್ಲದೆ, ಹಂದಿ ತುಂಬಿದ್ದ ಲಾರಿಯನ್ನು ಗಡಿಯಾಚೆ ಹೋಗುವಂತೆ ಸೂಚಿಸಿದರು. ಪೊಲೀಸ್ ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದ್ದು ಪಂಚಾಯ್ತಿಯವರ ಕಿತ್ತಾಟದಿಂದ ಹಂದಿ ಹಿಡಿಯುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
-----------
ಹಂದಿ ಹಿಡಿಯಲು ಮುಂದಾಗಿರುವ ಪಂಚಾಯ್ತಿಯ ಕ್ರಮ ಶ್ಲಾಘನೀಯ. ಸದಸ್ಯರ ಸಭೆ ನಡೆಸದೆ ಅವರ ಗಮನಕ್ಕೂ ತಾರದೆ ದಿಢೀರ್ ಕಾರ್ಯಾಚರಣೆ ನಡೆಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕು. ಹುಳಿಯಾರೆಲ್ಲ ಗಬ್ಬುನಾರುತ್ತಿದ್ದು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದ್ದರೂ ನಾಪತ್ತೆಯಾಗಿದ್ದ ಪಿಡಿಓ ಇದೀಗ ಹಂದಿ ಹಿಡಿಯುವವರ ಜೊತೆ ಶಾಮೀಲಾಗಿ ಹಂದಿ ಹಿಡಿಯಲು ಬೆಳಿಗ್ಗೆ ಆಗಮಿಸಿದ್ದಾರೆ. ಇದೇ ರೀತಿ ಹುಳಿಯಾರಿನ ಚರಂಡಿ ಹಾಗೂ ಸ್ವಚ್ಚತೆ ಕಡೆಗೂ ಗಮನಕೊಡಬೇಕು ಹಾಗೂ ದನ ಕಡಿಯುವ ಕಸಾಯಿಖಾನೆ ಮೇಲೂ ಕ್ರಮ ಕೈಗೊಳ್ಳಬೇಕು : ಗ್ರಾ.ಪಂ.ಸದಸ್ಯ ರಾಘವೇಂದ್ರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ