೨೦೧೪-೧೫ ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಗುರುವಾರದಿಂದ ಪ್ರಾರಂಭವಾಗಿದ್ದು ಪರೀಕ್ಷೆ ಬರೆಯಲು ಆಗಮಿಸಿದ್ದ ಪರೀಕ್ಷಾರ್ಥಿಗಳಲ್ಲಿ ಭಯಮಿಶ್ರಿತ ಉತ್ಸಾಹ ಕಂಡುಬಂತು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದ ಪರಿಕ್ಷಾರ್ಥಿಗಳು. |
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ಹಾಗೂ ವಾಣಿಜ್ಯ ವಿಭಾಗದ ಬ್ಯುಸಿನೆಸ್ ಸ್ಟಡೀಸ್ (ವ್ಯವಹಾರ ಅಧ್ಯಯನ) ವಿಷಯದ ಪರೀಕ್ಷೆಯನ್ನು ಸುಮಾರು ೧೮೦ ವಿದ್ಯಾರ್ಥಿಗಳು ಬರೆದರು.
ವರ್ಷವಿಡಿ ಕಷ್ಟಪಟ್ಟು ಓದಿದ ಪಾಠವನ್ನು ಕೇವಲ ಮೂರು ಗಂಟೆಗಳಲ್ಲಿ ಉತ್ತರಿಸಬೇಕಾದ್ದರಿಂದ ಹೇಗೋಏನೋ ಎಂಬ ಆತಂಕ ಕೆಲವರಲ್ಲಿ ಮನೆ ಮಾಡಿತ್ತು.ಬೆಳಗ್ಗೆ 9 ರಿಂದ ಮಧ್ಯಾಹ್ನ 12.15 ರವರೆಗೆ ಪರೀಕ್ಷೆಯಿದ್ದು ಮೊದಲ ದಿನವಾಗಿದ್ದರಿಂದ ವಿದ್ಯಾರ್ಥಿಗಳು ಪ್ರಾರಂಭಕ್ಕೂ ಒಂದುಗಂಟೆ ಮುಂಚಿತವಾಗಿಯೇ ಪರೀಕ್ಷಾಕೇಂದ್ರದಲ್ಲಿಗೆ ಬಂದಿದ್ದರು. ಕೆಲ ವಿದ್ಯಾರ್ಥಿಗಳನ್ನು ಪೋಷಕರೇ ಪರೀಕ್ಷಾಕೇಂದ್ರದಲ್ಲಿಗೆ ಕರೆದುಕೊಂಡು ಬಂದಿದ್ದು ಉತ್ತಮವಾಗಿ ಪರೀಕ್ಷೆ ಬರೆಯಲು ಶುಭ ಹಾರೈಸುತ್ತಿದ್ದಿದ್ದು ಕಂಡುಬಂತು.
ತಾಲ್ಲೂಕಿನಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಸೇರಿ ಒಟ್ಟು ಎರಡು ಪರೀಕ್ಷಾಕೇಂದ್ರಗಳಿದ್ದು ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರವ್ಯಾಪ್ತಿಯಲ್ಲಿ ಬಾಲಕಿಯರ ಸ್ವಂತಂತ್ರ ಪದವಿ ಪೂರ್ವ ಕಾಲೇಜು , ಕನಕದಾಸ ಕಾಲೇಜು ಸೇರಿದಂತೆ ಬೋರನಕಣಿವೆ, ಎಣ್ಣೆಗೆರೆ , ಮತ್ತಿಘಟ್ಟ, ಬೆಳುಗುಲಿ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದು ಉತ್ಸಾಹದಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು. |
ಪರೀಕ್ಷಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದಿದ್ದು ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಭದ್ರತೆಗಾಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮಾ.27ರವರೆಗೆ ನಡೆಯಲಿದ್ದು ಪ್ರತಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ವರೆಗೆ ನಿಷೇಧಾಜ್ಞೆಜಾರಿಯಲ್ಲಿರುತ್ತದೆ ಪ್ರಶ್ನೆ ಪತ್ರಿಕೆಗಳ ಪ್ಯಾಕ್ ಗಳನ್ನು ವಿದ್ಯಾರ್ಥಿಗಳ ಹಾಗೂ ಕೊಠಡಿ ಶಿಕ್ಷಕರ ಸಮ್ಮುಖದಲ್ಲಿ ತೆರೆದು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೋಠಡಿಯನ್ನೂ ಸೂಕ್ಷವಾಗಿ ಗಮನಿಸುತ್ತಿದ್ದು, ಮುಂದೆ ನಡೆಯಲಿರುವ ಎಲ್ಲಾ ಪರೀಕ್ಷೆಯಲ್ಲೂ ಸಹ ಇದೇ ರೀತಿಯ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಪರೀಕ್ಷಾಮುಖ್ಯಾಧಿಕಾರಿ ಸಿ.ಶಿವರುದ್ರಯ್ಯ ತಿಳಿಸಿದರು.
----------------------
----------------------
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಕೆಲ ಪ್ರಶ್ನೆಗಳು ಮೊದಲು ಸರಿಯಾಗಿ ಅರ್ಥವಾಗಲಿಲ್ಲ ಓದಿದ ಬಳಿಕ ಎಲ್ಲವೂ ಸುಲಭದ ಪ್ರಶ್ನೆಗಳೇ ಆಗಿದ್ದವು, ಇನ್ನೂ ಸ್ವಲ್ಪ ಸಮಯ ಸಿಕ್ಕಿದರೆ ಚೆನ್ನಾಗಿ ಉತ್ತರ ಬರೆಯುತ್ತಿದೆ, ಈಗಲೂ ಉತ್ತಮ ಅಂಕ ಬಂದೆಬರುತ್ತೆ : ಮೇಘ , ಹುಳಿಯಾರು-ಬಾಲಕಿಯರ ಪಿಯು ಕಾಲೇಜಿನ ಸೈನ್ಸ್ ವಿದ್ಯಾರ್ಥಿನಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ