ನಾಡಿನೆಲ್ಲೆಡೆ ಗಣೇಶನನ್ನು ಪ್ರತಿಷ್ಠಾಪಿಸಿ ಉತ್ಸವ ಮಾಡುವುದು ವಾಡಿಕೆಯಾದರೆ ಹುಳಿಯಾರು ಗಡಿಭಾಗದಲ್ಲಿರುವ ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಮಾತ್ರ ಗೌರಿಗೆ ಪ್ರಾಮುಖ್ಯತೆ. ರಾಜ್ಯದಲ್ಲಿ ಕೆಲವೇ ಕಡೆ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದಿದ್ದು , ಅದರಲ್ಲಿ ಮಾಡಾಳಿನ ಸ್ವರ್ಣಗೌರಿ ಹೆಚ್ಚು ಪ್ರಸಿದ್ದಿ. ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಒಂಭತ್ತು ದಿನಗಳಕಾಲ ವಿಜೃಂಭಣೆಯಿಂದ ಇಲ್ಲಿ ಜಾತ್ರಾಮಹೋತ್ಸವ ನಡೆಯಲಿದ್ದು , ಲಕ್ಷಾಂತರ ಭಕ್ತರು ಗೌರಮ್ಮನ ದರ್ಶನ ಪಡೆಯುತ್ತಾರೆ.
![]() |
| ಮಾಡಾಳು ಶ್ರೀಸ್ವರ್ಣಗೌರಿ. |
ಗೌರಿಹಬ್ಬದ ದಿನದಂದು ಅಮ್ಮನವರನ್ನು ಊರಿನ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ . ಹಾರನಹಳ್ಳಿಯ ಕೋಡಿಮಠದಿಂದ ಕಳೆದ ನೂರೈವತ್ತು ವರ್ಷದ ಹಿಂದೆ ಸ್ವರ್ಣಗೌರಿ ದೇವಿಗೆ ವಜ್ರದ ಮೂಗುತಿಯನ್ನು ನೀಡಿದ್ದು, ಗೌರಿಗೆ ಅಂದಿನಿಂದ ಇಂದಿನವರೆಗೆ ಕೋಡಿಮಠದ ಸ್ವಾಮೀಜಿಯವರೆ ಮೂಗುತಿಯನ್ನು ಗೌರಿಗೆ ತೊಡಿಸಿ ಸಂಪ್ರದಾಯದಂತೆ ಪೂಜಿಸಿ ಪ್ರತಿಷ್ಠಾಪಿಸುವ ಪರಿಪಾಟ ನಡೆದು ಬಂದಿದೆ.ಅಂತೆಯೇ ಶಿವಾನಂದ ಶಿವಯೋಗಿ ರಾಜೇಂದ್ರಸ್ವಾಮಿ ಅವರ ಉಪಸ್ಥಿತಿಯಲ್ಲಿ ಅಮ್ಮನವರ ಮೂಲ ಸನ್ನಿಧಿಯಾದ ಬಾವಿಮನೆಯಿಂದ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನೂರಾರು ಭಕ್ತರ ಜಯಕಾರದೊಂದಿಗೆ ಮೆರವಣಿಗೆ ಮೂಲಕ ಬಸವೇಶ್ವರ ದೇವಾಲಯಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಒಟ್ಟು ಒಂಭತ್ತು ದಿನಗಳಕಾಲ ಹಗಲಿರುಳು ಎನ್ನದೆ ನಡೆಯುವ ಈ ಜಾತ್ರಾಮಹೋತ್ಸವದಲ್ಲಿ ನಾಡಿನಾದ್ಯಂತ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಜನ ಸಾಗರ : ಈ ಸಮಯದಲ್ಲಿ ಮಾಡಾಳು ಗ್ರಾಮದ ಎಲ್ಲಿ ನೋಡಿದರು ಗೌರಮ್ಮನ ಭಕ್ತರೇ ಕಾಣಸಿಗುತ್ತಾರೆ . ಗೌರಿಯ ದರ್ಶನಕ್ಕಾಗಿ ದೇವಾಲಯದ ಆವರಣದಿಂದ ರಸ್ತೆಯ ತನಕ ಉದ್ದ ಸರದಿಯಿದ್ದರೂ ಸಹ ಬೇಸರಿಸದೆ ಸರದಿಯಲ್ಲಿ ಸಾಗಿ ಸ್ವರ್ಣಗೌರಿಯನ್ನು ನೋಡಿ ದನ್ಯತೆ ಹೊಂದುತ್ತಾರೆ.
ಕರ್ಪೂರದ ಹರಕೆ : ಭಕ್ತಾದಿಗಳು ದೇವಾಲಯದ ಎದುರಲ್ಲಿರುವ ಅಗ್ನಿಕುಂಡದಲ್ಲಿ ಕರ್ಪೂರ ಹಚ್ಚಿ, ತಲೆಯ ಮೇಲೆ ದುಗ್ಗಲ ಹೊತ್ತು ತಮ್ಮ ಹರಕೆ ತೀರಿಸುತ್ತಾರೆ. ಸೀರೆ ಹಾಗೂ ಅನ್ನದಾಸೋಹಕ್ಕೆ ಮಡಿಲಕ್ಕಿ ಕೊಡುವ ಮೂಲಕ ಕಾಣಿಕೆ ಸಮರ್ಪಿಸುತ್ತಾರೆ. ಸಹಸ್ರಾರು ಸಂಖ್ಯೆಯ ಮಹಿಳೆಯರು ದುಗ್ಗಲ ಹೊರುವುದರಿಂದ ದೇವಾಲಯದ ಆವರಣದ ತುಂಬೆಲ್ಲಾ ಕರ್ಪೂರದ ಹೊಗೆಯಿಂದ ತುಂಬಿರುತ್ತದೆ.
![]() |
| ಒಂಭತ್ತು ದಿನಗಳ ಕಾಲ ನಿರಂತರವಾಗಿ ಕರ್ಪೂರದಿಂದ ಉರಿಯುವ ಮಾಡಾಳು ಗೌರಮ್ಮನ ಅಗ್ನಿಕುಂಡ. |
ಬೇರೆಲ್ಲೂ ಕಾಣದ ಇಲ್ಲಿನ ಗೌರಮ್ಮನ ಮುಖಭಾವ ವಿಶೇಷವಾಗಿದ್ದು ಪ್ರತಿವರ್ಷವೂ ಇದರಲ್ಲಿ ಕಿಂಚಿತ್ತು ವ್ಯತ್ಯಾಸವಾಗದಂತೆ ರೂಪಿಸುತ್ತಿರುವ ಹೆಗ್ಗಳಿಕೆ ಇಲ್ಲಿನ ಅಚಾರ್ ವಂಶಸ್ಥರದ್ದಾಗಿದೆ. ವಜ್ರದ ಮೂಗುತಿ ಹೊರತು ಪಡಿಸಿ ನಿರಾಭರಣವಾಗಿರುವ ಅಮ್ಮನವರು ಸಹಸ್ರಾರು ಭಕ್ತರನ್ನು ಸೆಳೆಯುತ್ತಿರುವುದು ಗಮನಾರ್ಹವಾಗಿದೆ. ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಾಗಿ ಸಮುದಾಯ ಭವನದ ಮುಂಭಾಗದಲ್ಲಿ ಪ್ರಸಾದ ರೂಪವಾಗಿ ಪ್ರತಿನಿತ್ಯ ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ.
ನಾಳೆ ಶುಕ್ರವಾರ ಅಮ್ಮನವರ ದುಗ್ಗಳ ಸೇವೆ ಹಾಗೂ ಚಂದ್ರಮಂಡಲೋತ್ಸವ ನಡೆಯಲಿದ್ದು , ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಲಕ್ಷಾಂತರ ರೂಪಾಯಿಯ ಕರ್ಪೂರ ಹಚ್ಚಿ ಭಕ್ತಿಯ ಪರಾಕಷ್ಟೆ ಮೆರೆಯಲಿದ್ದಾರೆ. ಶನಿವಾರದಂದು ಅಮ್ಮನವರ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಪೂಜೆ ಹಾಗೂ ಮಡಲಕ್ಕಿ ಸ್ವೀಕರಿಸಿ ನಂತರ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಕಲ್ಯಾಣಿಗೆ ಸಂಜೆ ವೇಳೆಗೆ ಕರೆದೊಯ್ದು ವಾಡಿಕೆಯಂತೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರ ಉಪಸ್ಥಿತಿಯಲ್ಲಿ ಅಮ್ಮನವರಿಗೆ ಧರಿಸಿದ್ದ ಮೂಗುತಿಯನ್ನು ತೆಗೆದ ನಂತರ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಗುವುದು.
ಒಟ್ಟು ಒಂಭತ್ತು ದಿನಗಳ ಕಾಲ ನಡೆಯುವ ಈ ಪೂಜಾಕೈಂಕರ್ಯದಲ್ಲಿ ಲಕ್ಷಾಂತರ ಜನ ಮುತ್ತಿನಗೌರಿಯ ದರ್ಶನ ಪಡೆಯಲಿದ್ದು ಈ ಸಮಯದಲ್ಲಿ ಲಕ್ಷಾಂತರ ರೂಪಾಯಿಯ ಕರ್ಪೂರವನ್ನು ಹಚ್ಚಿ ದೇವಿಗೆ ಸಮರ್ಪಿಸಲಾಗುವುದು.















ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ