ಪ್ರತಿ ಸಮುದಾಯದವರು ತಮ್ಮ ಸಂಪ್ರದಾಯದಂತೆ ಹಬ್ಬಹರಿದಿನಗಳನ್ನು ಆಚರಿಸುತ್ತಾರೆ ಹಬ್ಬದ ಆಚರಣೆಗಳು ಸಮುದಾಯಗಳ ನಡುವೆ ಶಾಂತಿ,ಸೌಹಾರ್ದತೆ ಮೂಡಿಸುವಂತೆ ನಡೆಯಬೇಕೆ ಹೊರತು ಶಾಂತಿ ಕದಡುವಂತಾಗಬಾರದು ಎಂದು ತಿಪಟೂರಿನ ಪ್ರಭಾರ ಎಸಿಪಿ ಗಣೇಶ್ ತಿಳಿಸಿದರು.
![]() |
| ಹುಳಿಯಾರು ಪೊಲೀಸ್ ಠಾಣೆಯಲ್ಲಿ ಈದ್-ಮೀಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಪ್ರಭಾರ ಎಸಿಪಿ ಗಣೇಶ್ ಮಾತನಾಡಿದರು. |
ಈದ್-ಮೀಲಾದ್ ಹಬ್ಬದ ಅಂಗವಾಗಿ ಹುಳಿಯಾರಿನ ಪೊಲೀಸ್ ಠಾಣೆಯಲ್ಲಿ ವಿವಿಧ ಸಮುದಾಯದ ಮುಖಂಡರನ್ನು ಕರೆಸಿ ಶುಕ್ರವಾರ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಮತ್ತೊಂದು ಸಮುದಾಯದವರಿಗೆ ತೊಂದರೆಯಾಗುವಂತೆ ಆಚರಣೆಗಳನ್ನು ನಡೆಸಿ ಎಂದು ಯಾವ ಧರ್ಮದಲ್ಲೂ ತಿಳಿಸಿಲ್ಲ, ಪ್ರತಿ ಸಮುದಾಯದ ಮಹಾನ್ ಗ್ರಂಥಗಳಲ್ಲೂ ಶಾಂತಿ, ಸಹಬಾಳ್ವೆ, ಒಗ್ಗಟ್ಟಿನಿಂದ ನಡೆಯುವಂತೆ ತಿಳಿಸಿವೆ ಆದರೆ ನಾವುಗಳು ಕೆಲ ಹೊತ್ತಿನ ಮೋಜಿಗಾಗಿ ನಮಗೆ ಬಂದಂತೆ ನಡೆಯುತ್ತಿದ್ದೇವೆ ಎಂದರು. ಯಾರೋ ಒಬ್ಬ ಮಾಡಿದ ತಪ್ಪಿನಿಂದಾಗಿ ಇಡಿ ಸಮುದಾಯ ತಲೆತಗ್ಗಿಸುವಂತಾಗುತ್ತದೆ. ಮುಖಂಡರಾದವರು ಈ ಬಗ್ಗೆ ಹೆಚ್ಚು ಗಮನಕೊಡಬೇಕು ಇಲ್ಲವಾದಲ್ಲಿ ಇಲಾಖೆಯವರೇ ಅಂತಹವರನ್ನು ಹಿಡಿದು ಶಿಕ್ಷಿಸಬೇಕಾಗುತ್ತದೆ ಎಂದರು.
ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಜಯಕುಮಾರ್ ಮಾತನಾಡಿ, ಕಳೆದ ವರ್ಷ ಇದೇ ಸಂದರ್ಭದಲ್ಲಿ ನಡೆದ ಒಂದು ಅವಘಡ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಸಿತ್ತು. ಆದರೆ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದ ರೀತಿಯಲ್ಲಿ ಹಬ್ಬದ ಆಚರಣೆ ನಡೆಯಲಿ ಎಂದರು.ಯಾವುದೇ ರೀತಿಯ ಬಂಟಿಗ್ ಗಳನ್ನು ಹೆಚ್ಚಾಗಿ ಕಟ್ಟದೆ, ಶಾಂತಿಯುತ ಮೆರವಣಿಗೆ ನಡೆಸುವಂತೆ ತಿಳಿಸಿದರು.
ಈ ವೇಳೆ ಪಿಎಸೈ ಘೋರ್ಪಡೆ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಸದಸ್ಯರಾದ ಧನುಷ್ ರಂಗನಾಥ್, ರಾಘವೇಂದ್ರ, ವೆಂಕಟಮ್ಮ, ಜಹೀರ್ ಸಾಬ್, ಮುಖಂಡರಾದ ಜಲಾಲ್ ಸಾಬ್,ರಹಮತ್ ಉಲ್ಲಾ, ಅಮಾನ್ , ಬೈಜುಸಾಬ್, ಹಿಂದೂ ಜಾಗೃತ ವೇದಿಕೆಯ ಬಡಗಿರಾಮಣ್ಣ,ಮೀಸೆರಂಗಪ್ಪ,ಬಳ್ಳೆಕಟ್ಟೆರಾಮಣ್ಣ,ಇಲಾಹಿ,ಇಮ್ರಾಜ್ ಸೆರಿದಂತೆ ಇತರರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ